ಆಸ್ಟ್ರೇಲಿಯಾ ಪರಮಾಣು ಸಾಹಸ…ಜೋ ಬೈಡೆನ್ ಅರಳುಮರಳು?

masthmagaa.com:

ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷ, ಪೈಪೋಟಿ ಹೆಚ್ಚುತ್ತಿರೋ ಟೈಮಲ್ಲೇ ಆಸ್ಟ್ರೇಲಿಯಾಗೆ ಪರಮಾಣು ಶಕ್ತಿಯ ಸಬ್​ಮರಿನ್ ಅಥವಾ ಜಲಾಂತರ್ಗಾಮಿ ನೌಕೆಗಳನ್ನ ಪೂರೈಸಲು ಅಮೆರಿಕ, ಬ್ರಿಟನ್​ ಮತ್ತು ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಂಡಿವೆ. ಇದರ ಅನ್ವಯ ಪರಮಾಣು ಚಾಲಿತ ಸಬಮರೀನ್​ ಮತ್ತು ಕ್ರೂಸ್​​ ಕ್ಷಿಪಣಿಗಳನ್ನ ಹೊಂದಲು ಆಸ್ಟ್ರೇಲಿಯಾಗೆ ಬೇಕಾದ ತಾಂತ್ರಿಕ ಮತ್ತು ಇತರ ನೆರವನ್ನ ಅಮೆರಿಕ ಮತ್ತು ಬ್ರಿಟನ್​ ನೀಡಲಿವೆ. ಇಂಡೋ-ಪೆಸಿಫಿಕ್​ ಪ್ರದೇಶದಲ್ಲಿ ಚೀನಾ ಪಾರುಪತ್ಯಕ್ಕೆ ಬ್ರೇಕ್​ ಹಾಕಲೆಂದೇ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಅಂತ ವಿಶ್ಲೇಷಿಸಲಾಗ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ವರ್ಚುವಲ್​ ಆಗಿ ಸಭೆ ನಡೆಸಿ ಈ ಘೋಷಣೆ ಮಾಡಿದ್ದಾರೆ. ಆದ್ರೆ ಮೂರೂ ನಾಯಕರು ಕೂಡ, ಆಸ್ಟ್ರೇಲಿಯಾ ಪರಮಾಣು ಶಸ್ತ್ರಾಸ್ತ್ರಗಳನ್ನ ನಿಯೋಜನೆ ಮಾಡಲ್ಲ. ಬದಲಾಗಿ ಭವಿಷ್ಯದ ಬೆದರಿಕೆ ದೃಷ್ಟಿಯಿಂದ ಪರಮಾಣು ಚಾಲಿತ ಸಬ್​ಮರಿನ್​ಗಳನ್ನ ಬಳಸಲಾಗುತ್ತೆ ಅಂತ ಒತ್ತಿ ಹೇಳಿದ್ದಾರೆ. ಈ ವೇಳೆ ಬೈಡೆನ್ ಮಾತನಾಡಿ, ಇಂಡೋ-ಪೆಸಿಫಿಕ್​ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡೋ ಅಗತ್ಯ ಇದೆ ಎಂದಿದ್ದಾರೆ. ಬೋರಿಸ್​ ಜಾನ್ಸನ್ ಮಾತನಾಡಿ ನಮ್ಮ ಈ ನಿರ್ಧಾರ ಜಗತ್ತನ್ನ ಸೇಫಾಗಿ ಇಡುತ್ತೆ ಎಂದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡಿ, ಈ ಪರಮಾಣು ಚಾಲಿತ ಸಬ್​​ಮರೀನ್​​ಗಳನ್ನ ಸೌತ್ ಆಸ್ಟ್ರೇಲಿಯಾ ರಾಜ್ಯದ ಅಡಿಲೆಡ್​​ನಲ್ಲಿ ನಿರ್ಮಾಣ ಮಾಡಲಾಗುತ್ತೆ. ನಾವು ಈಗಲೂ ಪರಮಾಣು ನಾನ್​-ಪ್ರೊಲಿಫರೇಷನ್​ಗೆ ಬದ್ದವಾಗಿದ್ದೀವಿ ಅಂತಾನೂ ಹೇಳಿದ್ದಾರೆ.
ಅಂದಹಾಗೆ ಈ ಮೊದಲು ಆಸ್ಟ್ರೇಲಿಯಾ ಫ್ರಾನ್ಸ್ ಜೊತೆ 66 ಬಿಲಿಯನ್ ಡಾಲರ್ ಗೆ ಸಬ್ಮರೀನ್ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಆದ್ರೆ ಈಗ ಅದನ್ನ ರದ್ದು ಮಾಡಿ ಅಮೆರಿಕ ಹಾಗೂ ಬ್ರಿಟನ್ ಜೊತೆ ಕೈಜೋಡಿಸಿದೆ.
ಈ ಮೂರು ದೇಶಗಳ ಈ ಸಶಸ್ತ್ರ ಪಾರ್ಟನರ್ಶಿಪ್ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದೆ. ಇದು ಈ ಭಾಗದಲ್ಲಿ ಶಸ್ತ್ರಾಸ್ತ್ರ ಪೈಪೋಟಿಗೆ ಕಾರಣ ಆಗುವ ಹಾಗೂ ಒಂದು ಬೇಜವಾಬ್ದಾರಿಯ ಹೆಜ್ಜೆ ಅಂತ ಹೇಳಿದೆ.
ಇನ್ನು ಈ ಮೂರೂ ದೇಶಗಳ ನಾಯಕರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತಾಡುವಾಗ ಬೈಡೆನ್ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಹೆಸರೇ ಮರೆತು ಹೋದ್ರು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೆಸರನ್ನ ಸರಿಯಾಗೇ ಕರೆದ್ರು., ಥ್ಯಾಂಕ್ಯೂ ಬೋರಿಸ್.., ಹಾಗೇ, ಅಲ್ಲಿ ಕೆಳಗಡೆ ಇರೋ ಫೆಲೋ, ನಿಮಗೂ ಥ್ಯಾಂಕ್ಸ್ ಗೆಳೆಯ ಅಂದ್ರು. ಇದು ಆಸ್ಟ್ರೇಲಿಯಾ, ಯುಎಸ್ ಎರಡೂ ಕಡೆ ಬಹಳ ಸುದ್ದಿಯಾಗಿದೆ. ಅಮೆರಿಕದಲ್ಲಂತೂ ಮೊದಲಿಂದಲೂ ಬೈಡೆನ್ ಗೆ ಅರಳುಮರಳು ಅಂತಿದ್ದ ರಿಪಬ್ಲಿಕನ್ನರು ಇದನ್ನ ಜೋರಾಗಿ ಶೇರ್ ಮಾಡಿದ್ದಾರೆ. ಅಂದಹಾಗೇ 78 ವರ್ಷದ ಬೈಡೆನ್ ಈ ಹಿಂದೆ ತಾವು ಅಧ್ಯಕ್ಷ ಅನ್ನೋದನ್ನ ಮರೆತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನ ಅಮೆರಿಕ ಅಧ್ಯಕ್ಷೆ ಅಂತ ಕರೆದಿದ್ದರು.

-masthmagaa.com

Contact Us for Advertisement

Leave a Reply