ಚೀನಾದ ಹೊಸ ಮ್ಯಾಪ್‌ನಲ್ಲಿ ಅರುಣಾಚಲ ಪ್ರದೇಶ! ಮತ್ತೆ ಕ್ಯಾತೆ ತೆಗೆದ ಡ್ರ್ಯಾಗನ್‌!

masthmagaa.com:

ಭಾರತ ಹಾಗೂ ಚೀನಾ ನಡುವಿನ ಗಡಿ ವಿಚಾರದಲ್ಲಿ ಒಂದಲ್ಲ ಒಂದು ರೀತಿ ಕ್ಯಾತೆ ತೆಗೆಯೋದನ್ನ ಚೀನಾ ಕಂಟಿನ್ಯೂ ಮಾಡಿದೆ. ಇದೀಗ ತನ್ನ ಹೊಸ ಮ್ಯಾಪ್‌ ರಿಲೀಸ್‌ ಮಾಡಿದ್ದು, ಅದ್ರಲ್ಲಿ ಭಾರತದ ಅರುಣಾಚಲ ಪ್ರದೇಶವನ್ನ ಸೇರಿಸಿಕೊಂಡಿರೋದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ಒಳಗೊಂಡ ನವೀಕರಿಸಿದ ಹೊಸ ಸ್ಟ್ಯಾಂಡರ್ಡ್ ಮ್ಯಾಪ್​​ನ್ನ ರಿಲೀಸ್‌ ಮಾಡಿದೆ. ಈ ಮೂಲಕ ಗಡಿ ವಿಚಾರದಲ್ಲಿ ಚೀನಾ ತನ್ನ ಹಠಮಾರಿ ಧೋರಣೆಯನ್ನ ಮುಂದುವರೆಸಿದೆ. ಈ ಮ್ಯಾಪ್‌ನ್ನ ವೆಬ್‌ಸೈಟ್‌ನಲ್ಲಿ ರಿಲೀಸ್‌ ಮಾಡಿದೆ. ಇನ್ನು ಚೀನಾ ಮತ್ತು ಭಾರತದ ನಡುವೆ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ವಿಚಾರವಾಗಿ ಹಲವು ವರ್ಷಗಳಿಂದ ದೊಡ್ಡ ವಿವಾದವೇ ಇದೆ. ಅರುಣಾಚಲ ಪ್ರದೇಶ, ದಕ್ಷಿಣ ಟಿಬೆಟ್ ನಮ್ಮ ಪ್ರದೇಶ ಅಂತ ಚೀನಾ ಹೇಳಿಕೊಳ್ಳುತ್ತಿದೆ. ಇತ್ತೀಚೆಗಷ್ಟೆ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿತ್ತು. ಆ ಟೈಮ್‌ನಲ್ಲಿ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಅಂತ ಭಾರತ ತನ್ನ ನಿಲ್ಲುವನ್ನು ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ರು ಚೀನಾ ಈಗ ಭಾರತದ ಗಡಿ ದಾಟಿ ಅರುಣಾಚಲ ಪ್ರದೇಶವನ್ನ ತನ್ನ ಮ್ಯಾಪ್‌ನಲ್ಲಿ ಸೇರಿಸಿಕೊಂಡು ಉದ್ಧಟತನ ಪ್ರದರ್ಶಿಸಿದೆ. ಮೊನ್ನೆ ತಾನೆ ಉಭಯ ದೇಶಗಳ ನಡುವೆ ಸೇನಾ ಅಧಿಕಾರಿಗಳ ಸಭೆ ನಡೆದಿತ್ತು. ಆದಷ್ಟು ಬೇಗ ಮಾತುಕತೆ ಮೂಲಕ ಗಡಿ ವಿವಾದ ಬಗೆಹರಿಸಿಕೊಳ್ತೀವಿ ಅಂತ ಚೀನಾ ಹೇಳಿತ್ತು. ಬಳಿಕ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್‌ ಸಭೆಯಲ್ಲಿ ಪ್ರಧಾನಿ ಮೋದಿ ಹಾಗು ಷಿಜಿನ್‌ ಪಿಂಗ್‌ ಮೀಟ್‌ ಆಗಿದ್ರು. ಈಗ ಮತ್ತೆ ಇಂತಹ ಕುಚೇಷ್ಟೇ ತೋರಿದೆ. ಚೀನಾದ ಈ ನಡೆಯಿಂದ ಈಗಾಗಲೇ ಹಳಸಿರುವ ಉಭಯ ದೇಶಗಳ ಸಂಬಂಧದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply