ಸೋಲು- ಗೆಲುವು ಬಗ್ಗೆ ಬಿಜೆಪಿ, ಕಾಂಗ್ರೆಸ್‌, AAP ಹೇಳಿದ್ದೇನು?

masthmagaa.com:

ಬಿಜೆಪಿ ಹೇಳಿದ್ದೇನು?

ಅಮಿತ್‌ ಷಾ

ಇನ್ನು ಈ ಬೃಹತ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರೋ ಗೃಹಸಚಿವ ಅಮಿತ್ ಶಾ,
ನಾಲ್ಕು ರಾಜ್ಯಗಳಲ್ಲಿ ಮತ್ತೆ ಅಧಿಕಾರ ನೀಡಿದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್‌

ಇನ್ನು ಲಕ್ನೋದ ಪಕ್ಷದ ಕಚೇರಿಯಲ್ಲಿ ಮಾತಾಡಿದ ಸಿಎಂ ಯೋಗಿ ಆದಿತ್ಯನಾಥ್ ಜನತೆಗೆ ಧನ್ಯವಾದ ಅರ್ಪಿಸಿದ್ರು. ಈ ಗೆಲುವಿನಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇನ್ನಷ್ಟು ಕೆಲಸ ಮಾಡ್ತೀವಿ. 2024ರ ಲೋಕಸಭೆ ಚುನಾವಣೆಯಲ್ಲೂ ಇನ್ನಷ್ಟು ದೊಡ್ಡ ಅಂತರದಲ್ಲಿ ಗೆಲುವು ದಾಖಲಿಸ್ತೀವಿ ಅಂದ್ರು. ಜೊತೆಗೆ ಇದೇ ವೇಳೆ ತಮ್ಮ ಸಹೋದ್ಯೋಗಿಗಳೊಂದಿಗೆ ಪರಸ್ಪರ ಬಣ್ಣ ಎರಚಿ ಮುಂಗಡವಾಗಿ ಹೋಳಿ ಆಚರಿಸಿದ್ರು. ಕಾರ್ಯಕರ್ತರತ್ತ ಕೂಡ ಬಣ್ಣ ಚೆಲ್ಲಿದ ಯೋಗಿ ಸಂಭ್ರಮಿಸಿದ್ರು.

ಬಿ ಎಸ್‌ ಯಡಿಯೂರಪ್ಪ

ಇನ್ನು ಮಾಜಿ ಸಿಎಂ ಬಿ ಎಸ್‌ ಯಡಿಯುರಪ್ಪ ಟ್ವೀಟ್‌ ಮಾಡಿ “ಇವತ್ತಿನ ಚುನಾವಣಾ ಫಲಿತಾಂಶ ಮೋದಿ ಹಾಗು ಬಿಜೆಪಿಯ ಅಭಿವೃದ್ದಿ ರಾಜಕಾರಣಕ್ಕೆ ಸಂದ ಜಯವಾಗಿದ್ದು ವಿಪಕ್ಷಗಳ ಅಪಪ್ರಚಾರವನ್ನ ಮೀರಿ ಬಿಜೆಪಿ ಅಧಿಕಾರ ಪಡೆದಿದೆ. ಇದು ಅಭಿವೃದ್ದಿಗೆ ದೊರೆತ ಜಯ ಅಂತ ಹರ್ಷ ವ್ಯಕ್ತಪಡಿಸಿದ್ದಾರೆ.

ಬಸವರಾಜ ಬೊಮ್ಮಾಯಿ

ಇನ್ನು ರಿಸಲ್ಟ್‌ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ
ಇವತ್ತಿನ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆಅಧಿಕಾರಕ್ಕೆ ಬರೋ ಸ್ಷಷ್ಟ ನಿದರ್ಶನವಾಗಿದೆ. ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಇದು ಕಂಟಿನ್ಯೂ ಆಗುತ್ತೆ ಅಂತ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

AAP ಹೇಳಿದ್ದೇನು?

ಅರವಿಂದ್‌ ಕೇಜ್ರಿವಾಲ್‌

ಪಂಜಾಬ್​ನಲ್ಲಿ ಆಮ್​ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮಾತನಾಡಿರೋ ಅರವಿಂದ ಕೇಜ್ರಿವಾಲ್​, ಪಂಜಾಬ್​ ಕೆ ಲೋಗೋನೇ ಕಮಾಲ್​ ಕರ್​ ದಿಯಾ, ವಿ ಆಲ್​ ಲವ್​ ಯು . ಪಂಜಾಬ್​ನಲ್ಲಿ ಇವತ್ತು ದೊಡ್ಡ ದೊಡ್ಡ ಕುರ್ಚಿಗಳೇ ಅಲ್ಲಾಡಿವೆ. ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಅದನ್ನ ಮುರಿಯಲ್ಲ. ನಾವು ಈ ದೇಶದ ರಾಜಕೀಯವನ್ನೇ ಬದಲಿಸ್ತೀವಿ. ವೈದ್ಯಕೀಯ ಶಿಕ್ಷಣ ಪಡೆಯೋಕೆ ಯಾವ ವಿದ್ಯಾರ್ಥಿ ಕೂಡ ಯುಕ್ರೇನ್​​ಗೆ ಹೋಗದ ರೀತಿ ಭಾರತವನ್ನ ನಿರ್ಮಿಸ್ತೀವಿ. ಈ ರಿಸಲ್ಟ್​ನಿಂದ ನಾನು ಉಗ್ರ ಅಲ್ಲ ನಿಜವಾದ ದೇಶಭಕ್ತ ಅಂತ ಜನ ತೋರಿಸಿದ್ದಾರೆ ಅಂತ ಹೇಳಿದ್ದಾರೆ.

ಭಗವಂತ್‌ ಮನ್‌

ಪಂಜಾಬ್ ಸಿಎಂ ಆಗ್ತಿರೋ ಭಗವಂತ್ ಮನ್​ ಮಾತನಾಡಿ, ನಾನು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲ್ಲ. ಭಗತ್​ ಸಿಂಗ್​ರ ಗ್ರಾಮವಾದ ಖಟ್​​ಕರ್ಕಲ್​​ನಲ್ಲಿ ಸ್ವೀಕರಿಸ್ತೀನಿ. ನನ್ನ ಅವಧಿಯಲ್ಲಿ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸಿಎಂ ಫೋಟೋ ಇರಲ್ಲ, ಭಗತ್​ ಸಿಂಗ್ ಮತ್ತು ಅಂಬೇಡ್ಕರ್​​ರ ಫೋಟೋ ಇರುತ್ತೆ ಅಂತ ಹೇಳಿದ್ದಾರೆ.

ಕಾಂಗ್ರೆಸ್‌ ಹೇಳಿದ್ದೇನು?

ರಾಹುಲ್‌ ಗಾಂಧಿ

ರಾಹುಲ್​ ಗಾಂಧಿ ಟ್ವೀಟ್​ ಮಾಡಿ, ಜನರ ತೀರ್ಪನ್ನ ನಮ್ರತೆಯಿಂದ ಸ್ವೀಕರಿಸ್ತೀನಿ. ಜನಾದೇಶ ಗೆದ್ದವರಿಗೆ ಅಭಿನಂದನೆ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಶ್ರಮಕ್ಕೆ ನನ್ನ ಕೃತಜ್ಞತೆಗಳು. ಈ ಫಲಿತಾಂಶದಿಂದ ನಾವು ಕಲೀತೀವಿ, ದೇಶದ ಜನರ ಹಿತಾಸಕ್ತಿಗಾಗಿ ಕೆಲಸ ಮಾಡ್ತೀವಿ ಎಂದಿದ್ದಾರೆ.

ನವಜೋತ್ ಸಿಂಗ್ ಸಿಧು

ಈ ಬಗ್ಗೆ ಟ್ವೀಟ್ ಮಾಡಿರೋ ನವಜೋತ್ ಸಿಂಗ್ ಸಿಧು, ಜನಾದೇಶ ದೇವರ ಆದೇಶ.. ಈ ಜನಾದೇಶವನ್ನು ವಿನಯದಿಂದ ಒಪ್ಪಿಕೊಳ್ತೀವಿ.. ಆಮ್ ಆದ್ಮಿ ಪಕ್ಷಕ್ಕೆ ಶುಭಾಶಯಗಳು ಅಂತ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಇತರರು

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಮಾತನಾಡಿ, ಈ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ನಿರೀಕ್ಷೆಗೆ ವಿರುದ್ಧವಾಗಿದೆ. ಸದ್ಯದಲ್ಲೇ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಕಾರ್ಯಕಾರಿ ಸಮಿತಿ ಸಭೆ ಕರೆಯಲಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಅಮರಿಂದರ್ ಸಿಂಗ್​ ಇದ್ದಾಗ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿತ್ತು. ಅದ್ರ ಮುಂದೆ ಕೊನೆಯಲ್ಲಿ ನೇಮಕವಾದ ಮಣ್ಣಿನ ಮಗ ಚರಣ್​ಜಿತ್ ಸಿಂಗ್​ ಚನ್ನಿ ನಿಲ್ಲಲು ಸಾಧ್ಯವಾಗಲಿಲ್ಲ ಅಂತ ಕೂಡ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌

ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾವು ಕಳೆದುಕೊಂಡಿದ್ದು ಪಂಜಾಬ್ ಮಾತ್ರ. ಅಲ್ಲೇನೂ ಬಿಜೆಪಿ ಬಂದಿಲ್ಲ.. ಉಳಿದ ಎಲ್ಲಾ ಕಡೆ ಬಿಜೆಪಿ ಮೊದಲಿಂದಲೂ ಅಧಿಕಾರದಲ್ಲಿತ್ತು.. ಹೊಸದಾಗಿ ಅವರೇನೂ ಗೆದ್ದಿಲ್ಲ.. ಜಂಭ ಕೊಚ್ಚಿಕೊಳ್ಳುವಂಥದ್ದು ಏನೂ ಇಲ್ಲ ಅಂತ ಹೇಳಿದ್ದಾರೆ. ಮತ್ತೊಂದ್ಕಡೆ ಗೋವಾದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ್ರೆ ಪರಿಸ್ಥಿತಿ ನಿಭಾಯಿಸಲು ಹೋಗಿದ್ದ ಡಿಕೆ ಶಿವಕುಮಾರ್ ಎಲೆಕ್ಷನ್ ಫಲಿತಾಂಶ ಫುಲ್ ಆಗೋದ್ರೊಳಗೆ ವಾಪಸ್ ಆಗಿದ್ದಾರೆ.

-masthmagaa.com

Contact Us for Advertisement

Leave a Reply