ಯುರೋಪನ್ನ ಒಡೆಯುತ್ತಿದ್ದಾರಾ ಪುಟಿನ್‌? ಆ ದೇಶದಲ್ಲಿ ಎದ್ದಿದೆ ಪುಟಿನ್‌ ಪರವಾದ ಪ್ರತಿಭಟನೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಯುರೋಪಿನ ಪ್ರಮುಖ ರಾಷ್ಟ್ರವೊಂದರಲ್ಲಿ ಜನ ಬೀದಿಗಳಿದು ಹೋರಾಟ ಶುರು ಮಾಡಿದ್ದಾರೆ. ಜೆಕ್‌ ರಿಪಬ್ಲಿಕ್‌ ಅನ್ನೋ ದೇಶದಲ್ಲಿ ಅಲ್ಲಿನ ಬಲಪಂಥೀಯ ಸರ್ಕಾರದ ವಿರುದ್ಧ ರಷ್ಯಾ ಪರವಿರುವ ಹಾಗೂ ಅಲ್ಲಿನ ವಿರೋಧ ಪಕ್ಷದ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ರಷ್ಯಾ ಪರವಾಗಿರುವ ಹಾಗೂ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳ ವಿರೋಧಿ ಅಂತ ಕರೆಸಿಕೊಳ್ಳುವ PRO ಸಂಘಟನೆ ಈ ಪ್ರತಿಭಟನೆಗೆ ಕರೆ ನೀಡಿದೆ. ಜೆಕ್‌ ಪ್ರಧಾನಿ ಫಿಯಾಲಾ ಅವರ ಸರ್ಕಾರದಿಂದ ಮುಕ್ತಿ ಪಡೆಯಲು ನಾವು ಈಗ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಅಂತ PRO ನಾಯಕ ಜಿಂಡ್ರಿಚ್ ರೈಚ್ಲ್ ಹೇಳಿದ್ದಾರೆ. ಇದೇ ವೇಳೆ ಈಗಿನ ಸರ್ಕಾರ ವಿದೇಶಿ ಶಕ್ತಿಗಳ ಏಜೆಂಟ್‌ಗಳಂತೆ ಕೆಲಸ ಮಾಡ್ತಿದೆ. ಅವರ ಆದೇಶಗಳನ್ನ ಜಾರಿ ಮಾಡುವ ಬೊಂಬೆಗಳ ರೀತಿ ವರ್ತಿಸ್ತಿದೆ. ಹೀಗಾಗಿ ನಾವು ಇನ್ಮುಂದೆ ಈ ರೀತಿಯ ಕೈಗೊಂಬೆ ಸರ್ಕಾರವನ್ನ ಬಯಸುವುದಿಲ್ಲ ಅಂತ ರೈಚ್ಲ್ ಕಿಡಿಕಾರಿದ್ದಾರೆ. ಅಷ್ಟೆ ಅಲ್ದೆ ನ್ಯಾಟೋ ಸೇರಲು ಇಚ್ಛಿಸಿರುವ ಯುಕ್ರೇನ್‌ನ ಯಾವುದೇ ಪ್ರಯತ್ನವನ್ನ ಜೆಕ್‌ ಗಣರಾಜ್ಯ ತಿರಸ್ಕರಿಸಬೇಕು ಅಂತ ರೈಚ್ಲ್ ಕರೆ ನೀಡಿದ್ದಾರೆ. ಅಂದ್ಹಾಗೆ ಪ್ರಸ್ತುತ ಜೆಕ್‌ ಸರ್ಕಾರ ಯುಕ್ರೇನ್‌ಗೆ ಮಿತ್ರರಾಷ್ಟ್ರವಾಗಿದೆ. ರಷ್ಯಾ ವಿರುದ್ಧ ಹೋರಾಡಲು ಯುಕ್ರೇನ್‌ ಪಡೆಗಳಿಗೆ ಯುದ್ಧ ಟ್ಯಾಂಕ್‌ಗಳು, ರಾಕೆಟ್‌ ಲಾಂಚರ್‌ಗಳು, ಹೆಲಿಕಾಪ್ಟರ್‌ಗಳು ಸೇರಿದಂತೆ ಇತರ ವಸ್ತುಗಳನ್ನ ಕಳಿಸುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ಈ ನಿರ್ಧಾರವನ್ನ ಖಂಡಿಸಿದ್ದು, ಯುಕ್ರೇನ್‌ ಶಸ್ತ್ರಾಸ್ತ್ರಗಳನ್ನ ಯಾಕೆ ಕಳಿಸಬೇಕು ಅಂತ ಪ್ರಶ್ನಿಸಿದ್ದಾರೆ. ಇತ್ತ ಇದೇ ವೇಳೆ ರಷ್ಯಾ ಖಾಸಗಿ ಸೇನೆ ವ್ಯಾಗ್ನರ್‌ ಗ್ರೂಪ್‌ನ ಯೂನಿಫಾರ್ಮ್‌ ಧರಿಸಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಓರ್ವ ವ್ಯಕ್ತಿಯನನ್ನ ಬಂಧಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇನ್ನು ಜೆಕ್‌ನಲ್ಲಿ ಈ ರೀತಿ ಪ್ರತಿಭಟನೆಗಳು ಭುಗಿಲೆದ್ದ ಬೆನ್ನಲ್ಲೇ ಇದರ ಹಿಂದೆ ರಷ್ಯಾ ಕೈವಾಡ ಇರೋದು ಸ್ಪಷ್ಟ ಅಂತ ಅನುಮಾನ ವ್ಯಕ್ತಪಡಿಸಲಾಗ್ತಿದೆ. ಯಾಕಂದ್ರೆ ಈಗಾಗಲೇ ಆಫ್ರಿಕಾದ ಅನೇಕ ದೇಶಗಳಲ್ಲಿ ಅಮೆರಿಕ ಹಾಗೂ ಮಿತ್ರರ ಪರವಾಗಿದ್ದ ಸರ್ಕಾರಗಳನ್ನ ಕೆಡವಿ ಅಲ್ಲಿ ರಷ್ಯಾ ತನಗೆ ಬೇಕಾದ ಸೇನಾಧಿಕಾರಿಗಳನ್ನ ಕೂರಿಸುತ್ತಿದೆ ಅನ್ನೋ ಆರೋಪ ಇದೆ. ನೈಜರ್, ಮಾಲಿ ಮುಂತಾದ ಕಡೆಗಳಲ್ಲಿ ನಡೆದ ಸೇನಾದಂಗೆಯ ಹಿಂದೆ ರಷ್ಯಾ ಅದ್ಯಕ್ಷ ಪುಟಿನ್‌ ಇರಬೋದು ಅಂತ ಹೇಳಲಾಗ್ತಿತ್ತು. ಈಗ ಯುಕ್ರೇನ್‌ಗೆ ಸಹಾಯ ಮಾಡ್ತಿದ್ದ ಜೆಕ್‌ನಲ್ಲಿ ಈ ರೀತಿ ಬೆಳವಣಿಗೆ ಆಗಿರೋದು ಅದರಲ್ಲೂ ಅವರು ಯುಕ್ರೇನ್‌ ವಿರುದ್ದ ರಷ್ಯಾ ಪರವಾಗಿ ನಿಂತಿರೋದು ಸಹಜವಾಗಿ ಇದರ ಹಿಂದೆ ರಷ್ಯಾ ಕೈವಾಡ ಇದೆ ಅಂತಲೇ ಹೇಳಲಾಗ್ತಿದೆ. ಜೊತೆಗೆ ವ್ಯಾಗ್ನರ್‌ ಯುನಿಫಾರ್ಮ್‌ನ ವ್ಯಕ್ತಿಯೊಬ್ಬ ಅವರ ಪ್ರತಿಭಟನಾ ರ್ಯಾಲಿಯಲ್ಲಿ ಸಿಕ್ಕಿರೋದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply