ಭಾರತಕ್ಕೆ ಶಾಕ್​ ಕೊಡಲು ತಯಾರಿ ನಡೆಸ್ತಿದಾವಾ G-7 ರಾಷ್ಟ್ರಗಳು?

masthmagaa.com:

ರಷ್ಯಾ-ಯುಕ್ರೇನ್‌ ವಿಚಾರದಲ್ಲಿ ತಟಸ್ಥವಾಗಿರೋ ಭಾರತದ ನಡೆ ವಿರುದ್ದ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಒಳಗೊಳಗೆ ಮುನಿಸ್ಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ.‌ ವಿಶ್ವಸಂಸ್ಥೆಯಲ್ಲಿ ನಡೀತಿರೋ ರಷ್ಯಾ ವಿರುದ್ದದ ಎಲ್ಲಾ ಮತದಾನಗಳಿಗೂ ಭಾರತ ಗೈರಾಗ್ತಾನೇ ಇದ್ದು, ಯುದ್ದದ ವಿಚಾರದಲ್ಲಿ ಅಂತರ ಕಾಯ್ಕೊಂಡೇ ಬಂದಿದೆ. ಇನ್ನುಇದಕ್ಕೆ ಜೋರಾಗಿ ಮಾತಾಡೋಕೂ ಆಗ್ದೇ ಸುಮ್ಮನಿರೋಕೂ ಆಗ್ದೇ ಇರೋ ಬೈಡೆನ್​ ಪಡೆಗಳಿಗೆ ಭಾರತ ಒಂದು ರೀತಿ ಬಿಸಿತುಪ್ಪ ಆಗೋಗಿದೆ. ಇದರ ನಡುವೆಯೇ G-7 (ಅಂದ್ರೆ ಅಮೆರಿಕ, ಕೆನಡಾ, ಇಟಲಿ, ಜಪಾನ್‌, ಜರ್ಮನಿ, ಫ್ರಾನ್ಸ್‌ ಮತ್ತು ಬ್ರಿಟನ್​ ಮೈತ್ರಿಕೂಟ) ರಾಷ್ಟ್ರಗಳ ವಾರ್ಷಿಕ ಶೃಂಗಸಭೆಗೆ ಭಾರತವನ್ನ ಹೊರಗಿಡಬಹುದು ಅಂತ ವರದಿಯಾಗಿದೆ. ಅಂದ್ಹಾಗೆ G-7 ರಾಷ್ಟ್ರಗಳ ಶೃಂಗಸಭೆಯನ್ನ ಈ ಬಾರಿ ಜರ್ಮನಿ ಆಯೋಜನೆ ಮಾಡಲಿದ್ದು ಭಾರತ, ಸೆನೆಗಲ್‌, ಸೌತ್‌ ಆಫ್ರಿಕಾ, ಇಂಡೋನೇಷ್ಯಾ ರಾಷ್ಟ್ರಗಳು ವೀಕ್ಷಕರಾಗಿ ಭಾಗವಹಿಸೋದಕ್ಕೆ ಆಹ್ವಾನ ನೀಡಲಾಗಿತ್ತು. ಆದ್ರೆ ಈಗ ವೀಕ್ಷಕರ ಪಟ್ಟಿಯಿಂದ ಭಾರತವನ್ನ ಕೈ ಬಿಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.

-masthmagaa.com

Contact Us for Advertisement

Leave a Reply