‌ʼಚೀನಾ…. ನಿನಗೆ ನಾಚಿಕೆ ಆಗಲ್ವಾʼ?….

masthmagaa.com:

ಮಯನ್ಮಾರ್​ನಲ್ಲಿ ಈಗ ಜನತೆ ವರ್ಸಸ್ ಅಲ್ಲಿನ ಸೇನೆ ಅನ್ನೋ ವಾತಾವರಣ. ಸೇನೆ ದೇಶದ ಶತ್ರುಗಳ ವಿರುದ್ಧ ಹೋರಾಡಿ ದೇಶದ ಜನತೆಯನ್ನ ರಕ್ಷಿಸಬೇಕು. ಆದ್ರೆ ಮಯನ್ಮಾರ್​ ಸೇನೆ ತನ್ನ ದೇಶದ ಜನರ ವಿರುದ್ಧವೇ ಶಕ್ತಿಪ್ರದರ್ಶನ ಮಾಡ್ತಿದೆ. ಇಡೀ ದೇಶ ರಣಾಂಗಣವಾಗ್ತಿದೆ. ಕಳೆದ ಎರಡು ದಿನಗಳಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ಮಯನ್ಮಾರ್ ಸೇನೆ ದಾಳಿ ಆರಂಭಿಸಿದೆ. ದೇಶದ ಮೂಲೆ ಮೂಲೆಯಲ್ಲೂ ಅಪಾರ ಪ್ರಮಾಣದಲ್ಲಿ ಸೇನಾ ನಿಯೋಜನೆ ಮಾಡಲಾಗಿದ್ದು, ಸತತ ಎರಡನೇ ದಿನವೂ ಇಂಟರ್​ನೆಟ್ ಶಟ್​ಡೌನ್ ಮಾಡಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಸೇನೆ ವಿರುದ್ಧ ಕಾಮೆಂಟ್ ಹಾಕಿದವರ ಮೇಲೆಲ್ಲಾ ದೇಶದ್ರೋಹದ ಪ್ರಕರಣ ದಾಖಲಿಸಲಾಗ್ತಿದೆ. ಜೊತೆಗೆ ಸೇನೆ ಕ್ಷಿಪ್ರ ಕ್ರಾಂತಿ ಮಾಡಿ ಅಧಿಕಾರ ವಹಿಸಿಕೊಂಡ ಕ್ಷಣವೇ ಬಂಧನಕ್ಕೊಳಗಾಗಿದ್ದ ಆಂಗ್ ಸಾನ್ ಸೂ ಕಿ ಹಾಗೂ ಬೆಂಬಲಿಗರನ್ನ ಇದುವರೆಗೂ ಬಿಡುಗಡೆ ಮಾಡಿಲ್ಲ. 2 ವಾರ ಆಯ್ತು ಬಂಧಿಸಿ. ಇದುವರೆಗೂ ಅವರು ಎಲ್ಲೂ ಪಬ್ಲಿಕ್ ಆಗಿ ಕಾಣಿಸಿಕೊಂಡಿಲ್ಲ. ಈ ವಾರ ಸೂ ಕಿ ಹಾಗೂ ಅಧ್ಯಕ್ಷ ವಿನ್ ಮೈಯಿಂಟ್ ಅವರ ವಿಚಾರಣೆಯನ್ನ ಸೇನೆ ಆರಂಭಿಸೋ ಸಾಧ್ಯತೆ ಇದೆ ಅಂತಾ ಕೂಡ ಹೇಳಲಾಗ್ತಿದೆ.

ಆದ್ರೆ ಇದುವರೆಗೂ ಅವರ ಲಾಯರ್ ಭೇಟಿಗೂ ಅವಕಾಶ ಮಾಡಿಕೊಟ್ಟಿಲ್ಲ. ಈ ಮಧ್ಯೆ ಮಯನ್ಮಾರ್ ಸೇನೆ ಜನರ ಬಾಯಿಮುಚ್ಚಿಸಲು ಇಂಟರ್​ನೆಟ್ ಶಟ್​ಡೌನ್ ಮಾಡ್ತಿರೋದನ್ನ ವಿಶ್ವಸಂಸ್ಥೆ ಖಂಡಿಸಿದೆ. ಈ ಕೂಡಲೇ ಇದನ್ನ ನಿಲ್ಲಿಸುವಂತೆ ಮಯನ್ಮಾರ್ ಸೇನೆಗೆ ಎಚ್ಚರಿಕೆ ನೀಡಲಾಗಿದೆ. ಈ ಮಧ್ಯೆ ಮಯನ್ಮಾರ್ ಜನರ ಸಿಟ್ಟು ಈಗ ಚೀನಾ ಕಡೆ ತಿರುಗಿದೆ. ಯಾಂಗೋನ್​ನಲ್ಲಿರೋ ಚೀನಾ ರಾಯಬಾರ ಕಚೇರಿ ಬಳಿ ದೌಡಾಯಿಸಿದ ಪ್ರತಿಭಟನಾಕಾರರು ‘ಚೀನಾ.. ನಿನಗೆ ನಾಚಿಕೆಯಾಗಬೇಕು‘ ಅಂತಾ ಘೋಷಣೆ ಕೂಗಿದ್ದಾರೆ. ಬಿತ್ತಿಪತ್ರಗಳನ್ನ ಪ್ರದರ್ಶಿಸಿದ್ದಾರೆ. ಮಯನ್ಮಾರ್​ನ ಸೇನಾ ಸರ್ವಾಧಿಕಾರಿಗಳನ್ನ ಚೀನಾ ಬೆಂಬಲಿಸುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಯನ್ಮಾರ್​​ನ 18 ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಸೇರಿ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್​ಗೆ ಓಪನ್ ಲೆಟರ್ ಬರೆದಿದ್ದಾರೆ. ಮಯನ್ಮಾರ್​​ ಜನರ ಇಚ್ಚೆ ಏನು ಅನ್ನೋದನ್ನ ಗಮನಿಸಿ, ಅದನ್ನ ಗೌರವಿಸಿ.. ನಮಗೆ ಪ್ರಜಾಪ್ರಭುತ್ವ ಬೇಕು. ಈ ಸೇನಾ ಸರ್ವಾಧಿಕಾರಕ್ಕೆ ಬೆಂಬಲ ಕೊಡೋದನ್ನ ನಿಲ್ಲಿಸಿ’ ಅಂತಾ ಆಗ್ರಹ ಮಾಡಿದ್ದಾರೆ. ಕಳೆದ ವಾರದ ನಡೆದ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಯನ್ಮಾರ್​ ಸೇನಾ ದಂಗೆ ವಿರುದ್ಧ ಧ್ವನಿ ಎತ್ತಲು ಚೀನಾ ಹಾಗೂ ರಷ್ಯಾ ನಿರಾಕರಿಸಿದ್ದವು. ಈ ಮೂಲಕ ಈ ದೇಶಗಳು ಮಾನವ ಹಕ್ಕು ಹಾಗೂ ಜನರ ಅಭಿಪ್ರಾಯಕ್ಕೂ ಮಿಗಿಲಾಗಿ ತಮ್ಮ ಬೆಂಬಲ ಇರೋದು ಸೇನಾ ಸರ್ವಾಧಿಕಾರಕ್ಕೆ ಅನ್ನೋದನ್ನ ಸಾಬೀತುಮಾಡಿದ್ದವು. ಇದೇ ಕಾರಣಕ್ಕೆ ಮಯನ್ಮಾರ್​ ಜನ ಈಗ ‘ಚೀನಾ.. ನಿನಗೆ ನಾಚಿಕೆಯಾಗಬೇಕು’ ಅಂತಾ ಘೋಷಣೆ ಕೂಗ್ತಿದ್ದಾರೆ.‌

-masthmagaa.com

Contact Us for Advertisement

Leave a Reply