ಮೋದಿ ಸರ್ಕಾರ ಮತ್ತು ಇಸ್ರೇಲ್​ ನಡುವೆ ನಡೆದಿತ್ತಾ ಪೆಗಾಸಸ್​ ಡೀಲ್​?

masthmagaa.com:

ಬಜೆಟ್ ಅಧಿವೇಶನ ಹತ್ತಿರ ಬರ್ತಿದ್ದಂತೆ ಪೆಗಾಸೆಸ್​​ ಸ್ಪೈವೇರ್ ದೇಶದಾದ್ಯಂತ ಮತ್ತೆ ಸದ್ದು ಮಾಡೋಕೆ ಶುರುಮಾಡಿದೆ. ಅದಕ್ಕೆ ಕಾರಣವಾಗಿರೋದು ನ್ಯೂಯಾರ್ಕ್ ಟೈಮ್ಸ್​​​​​​ನ ಒಂದು ವರದಿ.. ಭಾರತ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಡಿಫೆನ್ಸ್​​​​ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡ್ಕೊಂಡಿದ್ದ ಒಪ್ಪಂದದ ಭಾಗವಾಗಿ ಇಸ್ರೇಲಿ ಸಾಫ್ಟ್​​ವೇರ್ ಪೆಗಾಸಸ್​​ನ್ನು ಖರೀದಿಸಿತ್ತು ಅಂತ ವರದಿಯಲ್ಲಿ ಹೇಳಲಾಗಿದೆ. ಈ ವರದಿಗೆ ದ ಬ್ಯಾಟಲ್ ಫರ್ ದ ವರ್ಲ್ಡ್ಸ್ ಮೋಸ್ಟ್​ ಪವರ್​ಫುಲ್ ಸೈಬರ್ ವೆಪನ್​​ ಅಂತ ಹೆಸರಿಡಲಾಗಿದೆ. 2017ರಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸ ಕೈಗೊಂಡಿದ್ರು. ಇಸ್ರೇಲ್​​ಗೆ ಭಾರತ ಪ್ರಧಾನಿಯ ಮೊದಲ ಮತ್ತು ಐತಿಹಾಸಿಕ ಯಾತ್ರೆ ಇದಾಗಿತ್ತು. ಈ ವೇಳೆ ಉಭಯದೇಶಗಳು 2 ಬಿಲಿಯನ್ ಅಂದ್ರೆ 15 ಸಾವಿರ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರ ಮತ್ತು ಗುಪ್ತಚರ ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಪ್ಯಾಕೇಜ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ರು. ಇದ್ರಲ್ಲಿ ಪೆಗಾಸಸ್ ಸಾಫ್ಟ್​​ವೇರ್ ಕೂಡ ಸೇರಿತ್ತು.. ಇದಾದ ಬಳಿಕ ಕೆಲವು ತಿಂಗಳ ಬಳಿಕ ಇಸ್ರೇಲ್ ಪ್ರಧಾನಿಯಾಗಿದ್ದ ಬೆಂಜಮಿನ್ ನೆತಾನ್ಯಹು ಕೂಡ ಭಾರತ ಪ್ರವಾಸ ಕೈಗೊಂಡಿದ್ರು. ನಂತರ 2019ರಲ್ಲಿ ಭಾರತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಇಸ್ರೇಲ್​​ ಪರವಾಗಿ ಮತ ಹಾಕಿತ್ತು ಅಂತ ವರದಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಸ್ರೇಲಿ ಮೂಲದ ಎನ್​ಎಸ್​​ಒ ಸಂಸ್ಥೆಯ ಪೆಗಾಸಸ್​ ಸಾಫ್ಟ್​​ವೇರ್ ಮೂಲಕ ಭಾರತದ ವಿಪಕ್ಷ ನಾಯಕರು, ಪತ್ರಕರ್ತರು, ಸಾಮಾಜಿಕ ಹಕ್ಕು ಹೋರಾಟಗಾರರ ಮೇಲೆ ನಿಗಾ ಇಡಲಾಗಿತ್ತು ಅನ್ನೋ ಆರೋಪ ಕೇಳಿ ಬಂದಿತ್ತು. ಇದು ಕಳೆದ ವರ್ಷ ದೊಡ್ಡಮಟ್ಟದ ರಾಜಕೀಯ ಹಗ್ಗಜಗ್ಗಾಟಕ್ಕೂ ಕಾರಣವಾಗಿತ್ತು. ಆದ್ರೆ ಸರ್ಕಾರ ಮಾತ್ರ ಇವೆಲ್ಲವೂ ಆಧಾರ ರಹಿತ ಆರೋಪ ಅಂತ ಹೇಳಿತ್ತು. ಆದ್ರೀಗ ನ್ಯೂಯಾರ್ಕ್​ ಟೈಮ್ಸ್ ವರದಿ ಬಳಿಕ ಮತ್ತೆ ವಿವಾದ ಭುಗಿಲೆದ್ದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರ ಪೆಗಾಸಸ್ ಖರೀದಿಸಿ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು, ಜನರು, ರಾಜಕಾರಣಿಗಳು, ವಿಪಕ್ಷ ನಾಯಕರು, ಸೇನೆಯ ಮೇಲೆ ನಿಗಾ ಇಡಲು ಖರೀದಿಸಿತ್ತು.. ಈ ಮೂಲಕ ಎಲ್ಲರ ಫೋನ್ ಟ್ಯಾಂಪಿಂಗ್ ಮಾಡಿದೆ. ಇದು ಮೋದಿ ಸರ್ಕಾರದಿಂದಾದ ದೇಶದ್ರೋಹ ಅಂತ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮೋದಿ ನೇತೃತ್ವದ ಸರ್ಕಾರ ಭಾರತದ ಶತ್ರು ರೀತಿ ಯಾಕೆ ಆಡ್ತಿದೆ? ಭಾರತೀಯರ ವಿರುದ್ಧವೇ ಇಂಥಾ ಅಸ್ತ್ರ ಯಾಕೆ ಬಳಸ್ತಿದೆ? ಪೆಗಾಸಸ್ ಬಳಸಿಕೊಂಡು ಕಾನೂನಿಗೆ ವಿರುದ್ಧವಾಗಿ ಗೂಢಚರ್ಯೆ ಮಾಡಿರೋದು ದೇಶದ್ರೋಹಕ್ಕೆ ಸಮ ಅಂತ ಕಿಡಿಕಾರಿದ್ದಾರೆ.

ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ವಿಕೆ ಸಿಂಗ್​​, ನ್ಯೂಯಾರ್ಕ್​ ಟೈಮ್ಸ್ ವಿರುದ್ಧವೇ ಕಿಡಿಕಾರಿದ್ದಾರೆ. ನ್ಯೂಯಾರ್ಕ್​ ಟೈಮ್ಸ್​​ನ್ನು ನಂಬಲು ಸಾಧ್ಯವೇ? ಅದೊಂದು ಸುಪಾರಿ ಮೀಡಿಯಾ ಅಂತ ಎಲ್ಲರಿಗೂ ಗೊತ್ತು ಅಂತ ಹೇಳಿದ್ದಾರೆ.

ಕೇವಲ ಭಾರತ ಮಾತ್ರವಲ್ಲ.. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕೂಡ ಈ ಸಾಫ್ಟ್​​ವೇರ್ ಖರೀದಿಸಿತ್ತು. ದೇಶದಲ್ಲಿ ಹಲವರ ಮೇಲೆ ನಿಗಾ ಇಡಲು ಇದನ್ನು ಬಳಸೋ ಸಲುವಾಗಿ ಹಲವು ವರ್ಷ ಪ್ರಯೋಗ ಕೂಡ ನಡೆಸಲಾಯ್ತು. ಆದ್ರೆ ಕಳೆದ ವರ್ಷ ಈ ಸಾಫ್ಟ್​​ವೇರ್ ಬಳಕೆಯನ್ನು ಬಂದ್ ಮಾಡಲು ನಿರ್ಧರಿಸಿತು ಅಂತ ನ್ಯೂಯಾರ್ಕ್​ ಟೈಮ್ಸ್ ವರದಿ ಮಾಡಿದೆ. ಇದೇ ರೀತಿ ಹಲವಾರು ದೇಶಗಳು ಈ ಸಾಫ್ಟ್​ವೇರ್ ಬಳಸಿವೆ.. ಮೆಕ್ಸಿಕೋದಲ್ಲಿ ಪತ್ರಕರ್ತರು ಮತ್ತು ಅಸಮಾಧಾನಿತರ ಮೇಲೆ ನಿಗಾ ಇಡಲು, ಸೌದಿಯಲ್ಲಿ ಮಹಿಳಾ ಹಕ್ಕು ಕಾರ್ಯಕರ್ತರು ಮತ್ತು ಪತ್ರಕರ್ತ ಜಮಾಲ್ ಕಶೋಗಿ ಮೇಲೆ ನಿಗಾ ಇಡಲು ಬಳಸಲಾಗಿತ್ತು. ಪೋಲೆಂಡ್​, ಹಂಗೇರಿ ಕೂಡ ವಿವಿಧ ಕಾರಣಗಳಿಗಾಗಿ ಈ ಪೆಗಾಸಸ್ ಸಾಫ್ಟ್​​ವೇರ್​ನ್ನು ಬಳಸಿತ್ತು ಅಂತಲೂ ನ್ಯೂಯಾರ್ಕ್​ ಟೈಮ್ಸ್ ವರದಿ ಮಾಡಿದೆ.

-masthmagaa.com

Contact Us for Advertisement

Leave a Reply