ಇಸ್ರೋ ಮುಂದಿನ ಯೋಜನೆಗಳೇನು..?

ಇಸ್ರೋ ಚಂದ್ರಯಾನದ ಚಿಂತೆ ಸದ್ಯಕ್ಕೆ ಬಿಟ್ಟುಬಿಡಿ..ಮತ್ತು ಉಸಿರು ಬಿಗಿ ಹಿಡಿದುಕೊಳ್ಳಿ. ಹಾಗೂ ಇಸ್ರೋ ಮಾಡೋಕೆ ಹೊರಟಿರುವ ಈ ಎರಡು ಅತಿ ದೊಡ್ಡ ಸಾಹಸದ ಬಗ್ಗೆ ತಿಳಿದುಕೊಳ್ಳಿ.

ಬಿಗ್ ಪ್ಲಾನ್ ನಂ.1
ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಲು ಇಸ್ರೋ ತಯಾರಿ!
ಬಾಹ್ಯಾಕಾಶಕ್ಕೆ ಮಾನವ. ಅಂದ್ರೆ ಭೂಮಿಯ ಹೊರಗೆ ಮಾನವ. ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಈ ಪ್ಲಾನ್ ಮಾಡ್ತಾ ಇದೆ. ಈ ರೋಚಕ ಮಾಹಿತಿ ನಿಮಗೆ ಅರ್ಥ ಆಗಬೇಕು ಅಂದರೆ ಮೊದಲು ಬಾಹ್ಯಾಕಾಶ ಅಂದ್ರೆ ಏನು ಅಂತ ಅರ್ಥ ಆಗಬೇಕು.

ಬಾಹ್ಯಾಕಾಶ ಅಂದ್ರೆ ಏನು?
ಭೂಮಿಗೆತನ್ನದೇ ಆದ ಒಂದು ಪರಿಸರ ಇದೆ. ಭೂಮಿಯ ಮೇಲಿನ ಒಂದಷ್ಟು ಕಿಲೋಮೀಟರ್ ತನಕ ಮಾತ್ರ ಈ ವಿಶೇಷ ವಾತಾವರಣ ಇದೆ. ಇಲ್ಲಿ ವಿವಿಧ ರೀತಿಯ ಗ್ಯಾಸ್ ಅಥವಾ ಅನಿಲ ಇರುತ್ತವೆ. ಇದನ್ನೇ ಗಾಳಿ ಅಂತಾ ಕರಿಯೋದು. ಭೂಮಿಯ ಗುರುತ್ವಾಕರ್ಷಣೆ ಕೂಡಾ ಈ ವಲಯ ದಾಟಿದ ಮೇಲೆ ಕಮ್ಮಿ ಆಗ್ತಾ ಹೋಗುತ್ತೆ. ಭೂಮಿಯ ಮೇಲ್ಮೈನಿಂದ ಹತ್ತರಿಂದ ಹನ್ನೆರಡು ಕಿಲೋಮೀಟರ್ ವರೆಗೂ ಭೂಮಿಯ ವಾತಾವರಣ ಇರುತ್ತದೆ. ಇದಿಷ್ಟು ಮನುಷ್ಯರಿಗೆ ಸೇಫ್ ಜೋನ್. ಇದನ್ನು ದಾಟಿದ ಮೇಲೂ ಕೂಡ ಭೂಮಿಯ ವಾತಾವರಣ ಇರುತ್ತದೆ ಆದರೆ ಅದು ತೆಳುವಾಗುತ್ತಾ… ತೆಳುವಾಗುತ್ತಾ ಹೋಗುತ್ತದೆ. ಅಲ್ಲಿ ಆಕ್ಸಿಜನ್ ಸಿಲಿಂಡರ್ ಇಲ್ಲದೆ ಮನುಷ್ಯನ ಬದುಕು ಸಾಧ್ಯವಿಲ್ಲ. ಆದರೆ ಬಾಹ್ಯಾಕಾಶ ಪ್ರಯಾಣದ ವಿಚಾರದಲ್ಲಿ ಭೂಮಿಯ ವಾತಾವರಣ ಅಂದರೆ ಅದು ಭೂಮಿಯ ಮೇಲ್ಮೈನಿಂದ 100 ಕಿಲೋಮೀಟರ್ ಎತ್ತರ. ಇದನ್ನ ಕಾರ್ಮನ್ ಲೈನ್ ಅಂತ ಕರೆಯಲಾಗುತ್ತದೆ. ಇದನ್ನು ದಾಟಿ ಮುಂದಕ್ಕೆ ಹೋದಾಗ ಸಿಗುವುದೇ ಬಾಹ್ಯಾಕಾಶ ಅಥವಾ ಸ್ಪೇಸ್. ಇಲ್ಲಿ ಭೂಮಿಯ ಗುರುತ್ವಾಕರ್ಷಣೆ ಇರುವುದಿಲ್ಲ. ಗುರುತ್ವಾಕರ್ಷಣೆ ಅಂದ್ರೆ ನಿಮಗೆ ಗೊತ್ತಲ್ಲ? ಒಂದು ವಸ್ತುವನ್ನು ಮೇಲಕ್ಕೆ ಹಾಕಿದಾಗ ಅದು ಕೆಳಕ್ಕೆ ಬೀಳುವಂತೆ ಎಳೆಯುವ ಶಕ್ತಿಯೇ ಗುರುತ್ವಾಕರ್ಷಣೆ. ಬಾಹ್ಯಾಕಾಶದಲ್ಲಿ ಈ ಶಕ್ತಿ ಇರುವುದಿಲ್ಲ. ಇಲ್ಲಿ ಎಲ್ಲವೂ ತೇಲುತ್ತಿರುತ್ತದೆ.

ಈ ಬಾಹ್ಯಾಕಾಶಕ್ಕೆ ಮಾನವನನ್ನು ಕಳಿಸಲು ಪ್ಲಾನ್ ಮಾಡಿದೆ ಇಸ್ರೋ!
ಯೋಜನೆಯ ಹೆಸರು ಗಗನ್ ಯಾನ್! ಇದಕ್ಕಾಗಿ 2007ರಿಂದ ತಯಾರಿ ನಡೀತಾ ಇದೆ. ಈಗ ಈ ತಯಾರಿ ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ಅದಕ್ಕೆ ಬೇಕಾದ ಎರಡು ಪ್ರಮುಖ ಟೆಸ್ಟ್ ಗಳನ್ನು ಇಸ್ರೋ ಮುಗಿಸಿದೆ.

1. ಇಸ್ರೋ ಪಾಡ್ ಅಬಾರ್ಟ್ ಟೆಸ್ಟ್
ಅಂದ್ರೆ ಒಂದು ವೇಳೆ ಬಾಹ್ಯಾಕಾಶ ನೌಕೆಯನ್ನು ಹೊತ್ತು ರಾಕೆಟ್ ಹಾರುವಾಗ ಏನಾದ್ರೂ ಅಪಘಾತವಾದರೆ ಸಡನ್ನಾಗಿ ರಾಕೆಟ್ ನಿಂದ ಬಾಹ್ಯಾಕಾಶ ನೌಕೆಯನ್ನು ಬೇರ್ಪಡಿಸುವ ಟೆಸ್ಟ್. ಇದನ್ನು 2014ರಲ್ಲೇ ಯಶಸ್ವಿಯಾಗಿ ಇಸ್ರೋ ಮುಗಿಸಿದೆ.

2. ಕ್ರೂ ಮಾಡ್ಯೂಲ್ ಅಟ್ಮೋಸ್ಫಿಯರಿಕ್ ರಿ-ಎಂಟ್ರಿ ಎಕ್ಸ್ಪರಿಮೆಂಟ್
ಅಂದ್ರೆ ಬಾಹ್ಯಾಕಾಶದ ಯಾತ್ರೆ ಮುಗಿದ ಬಳಿಕ, ಗಗನಯಾತ್ರಿಗಳು ಭೂಮಿಗೆ ವಾಪಸ್ ಬರಬೇಕಲ್ಲ..? ಆ ಪರೀಕ್ಷೆ. ಇಲ್ಲಿ ದೊಡ್ಡ ಡಬ್ಬಿಯ ಆಕಾರದ ಮಾಡ್ಯೂಲ್ ಒಳಗೆ ಗಗನ ಯಾತ್ರಿಗಳು ಇರ್ತಾರೆ. ಗಗನಯಾತ್ರಿಗಳು ಭೂಮಿಗೆ ವಾಪಸ್ಸಾಗುವಾಗ ಇದರ ಒಳಗೆ ಇರುತ್ತಾರೆ. ಇದನ್ನು ಭೂಮಿಯ ವಾತಾವರಣದ ಒಳಗೆ ಸೇಫಾಗಿ ನುಗ್ಗಿಸಿ ತರುವುದೇ ದೊಡ್ಡ ಚಾಲೆಂಜ್. ಅದನ್ನ 2018ರಲ್ಲಿ ಯಶಸ್ವಿಯಾಗಿ ಇಸ್ರೋ ಮಾಡಿ ಮುಗಿಸಿದೆ. ಈ ಡಬ್ಬಿ ಅಂಡಮಾನ್-ನಿಕೋಬಾರ್ ಸಮೀಪ ಸೇಫ್ ಆಗಿ ಹೋಗಿ ಸಮುದ್ರಕ್ಕೆ ಬಿದ್ದಿತ್ತು. ಅದನ್ನ ಭಾರತೀಯ ಕೋಸ್ಟ್ ಗಾರ್ಡ್ ನ ಯೋಧರು ಹಿಡಿದು ತೆಗೆದುಕೊಂಡು ಬಂದಿದ್ದರು.

ಈಗ ನಡಿತಾ ಇದೆ ಗಗನಯಾತ್ರಿಗಳ ಟ್ರೈನಿಂಗ್!
ಈಗ ಅತ್ಯಂತ ಅಗತ್ಯದ ಹಂತಕ್ಕೆ ಇಸ್ರೋ ಬಂದಿದ್ದು ಗಗನಯಾತ್ರಿಗಳನ್ನು ತರಬೇತಿಗೆ ಒಳಪಡಿಸಿದೆ. ವಾಯು ಪಡೆಯಿಂದ 200 ಫೈಟರ್ ಪೈಲೆಟ್ ಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಕಡೆಗೆ ಹತ್ತು ಜನರನ್ನು ಅಂತಿಮಹಂತದ ತರಬೇತಿಗೆ ಆಯ್ಕೆ ಮಾಡಿ ಟ್ರೈನಿಂಗ್ ಕೊಡುತ್ತಿದ್ದಾರೆ. ರಷ್ಯಾ ಕೂಡ ಭಾರತಕ್ಕೆ ಗಗನಯಾತ್ರಿಗಳ ತರಬೇತಿಯಲ್ಲಿ ಸಾಥ್ ನೀಡುತ್ತಿದ್ದು, ತರಬೇತಿ ಯಲ್ಲಿರುವ ಈ 10 ಪೈಲೆಟ್ ಗಳು ರಷ್ಯಾಗೆ ಹೋಗಿ ಟ್ರೈನಿಂಗ್ ಪಡೆಯಲಿದ್ದಾರೆ. ಎಲ್ಲ ಮುಗಿದ ಮೇಲೆ ನಾಲ್ಕು ಜನರನ್ನು ಫೈನಲ್ ಮಾಡಲಾಗುತ್ತದೆ. ಅದರಲ್ಲಿ ಇಬ್ಬರು ಮಾತ್ರ ಬಾಹ್ಯಾಕಾಶಕ್ಕೆ ಹೋಗುತ್ತಾರೆ. ಇನ್ನಿಬ್ಬರು ಬ್ಯಾಕಪ್ ಟೀಮ್ ಆಗಿ ಇರುತ್ತಾರೆ. 2020 ಡಿಸೆಂಬರ್ ಗೆ ಮಾನವರಹಿತವಾಗಿ ಮೊದಲ ಟೆಸ್ಟ್ ಫ್ಲೈಟ್ ಕಳಿಸಲಾಗುತ್ತದೆ. 2021 ಜುಲೈಗೆ ಎರಡನೇ ಮಾನವರಹಿತ ಟೆಸ್ಟ್ ಫ್ಲೈಟ್ ಬಾಹ್ಯಾಕಾಶಕ್ಕೆ ಕಳಿಸಲಾಗುತ್ತದೆ. ಇವೆರಡೂ ಯಶಸ್ವಿಯಾದ ಬಳಿಕ 2021 ಡಿಸೆಂಬರ್ ಗೆ ಮಾನವಸಹಿತ ಗಗನಯಾತ್ರೆ ಯನ್ನು ಭಾರತ ಮಾಡಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸವನ್ನು ಸೃಷ್ಟಿಸಲಿದೆ. ಇದಕ್ಕೆ ಒಂದು ಅಂದಾಜಿನ ಪ್ರಕಾರ 12,000 ಕೋಟಿ ಖರ್ಚಾಗುತ್ತದೆ. ಆದರೆ ಮನುಕುಲದ ಮುಂದಿನ ಬೆಳವಣಿಗೆ ಬಾಹ್ಯಾಕಾಶದಲ್ಲೇ ಇದೆ ಅಂತ ವಿಜ್ಞಾನಿಗಳು ಹೇಳುತ್ತಿರುವುದರಿಂದ ಈ ಖರ್ಚು ಅನಿವಾರ್ಯ. ಯಾಕಂದ್ರೆ ಭಾರತ ಯಾವುದೇ ಕಾರಣಕ್ಕೂ ಸ್ಪೇಸ್ ರೇಸ್ ನಲ್ಲಿ ಹಿಂದೆ ಬೀಳುವಂತಿಲ್ಲ. ಇದಕ್ಕೂ ಮೊದಲು ಮೂವರು ಭಾರತೀಯರು ಗಗನಯಾತ್ರೆ ಮಾಡಿದ್ದಾರೆ. 1984 ರಲ್ಲಿ ರಾಕೇಶ್ ಶರ್ಮ, ನಂತರ ಕಲ್ಪನಾ ಚಾವ್ಲಾ, ನಂತರ ಸುನಿತಾ ವಿಲಿಯಮ್ಸ್. ಆದರೆ ಭಾರತ ಸ್ವಂತ ಬಲದ ಮೇಲೆ ಮಾಡಿಲ್ಲ. ರಾಕೇಶ್ ಶರ್ಮ ಹೋಗಿದ್ದು ರಷ್ಯಾದ ಗಗನಯಾತ್ರಿಗಳ ಜೊತೆ. ಸುನಿತಾ ವಿಲಿಯಮ್ಸ್ ಮತ್ತು ಕಲ್ಪನಾ ಚಾವ್ಲಾ ಅಮೆರಿಕದ ನಾಸಾ ಸಂಸ್ಥೆಯ ಗಗನಯಾತ್ರಿಗಳಾಗಿ ಹೋಗಿದ್ದರು. ಆದರೆ ಈಗ ಭಾರತ ತನ್ನ ಸ್ವಂತ ಬಲದ ಮೇಲೆ, ತನ್ನ ಸ್ವಂತ ತಂತ್ರಜ್ಞಾನದ ಶಕ್ತಿಯ ಆಧಾರದಲ್ಲಿ, ತಾನೇ ನಿರ್ಮಿಸಿದ ಜಿಎಸ್‍ಎಲ್‍ವಿ ರಾಕೆಟ್ ಮತ್ತು ಗಗನನೌಕೆಯಲ್ಲಿ, ತನ್ನದೇ ಗಗನಯಾತ್ರಿಗಳನ್ನು ಕೂರಿಸಿ ಬಾಹ್ಯಾಕಾಶಕ್ಕೆ ಕಳಿಸಲು ಅತ್ಯಂತ ಹಂಬಲದಿಂದ ಕಾಯುತ್ತಿದೆ. ಅದಕ್ಕಾಗಿ ಎಲ್ಲ ತಯಾರಿಗಳನ್ನು ಪೂರ್ಣಗೊಳಿಸುತ್ತಿದೆ. ಇದು ಇಸ್ರೋದ ಮುಂದಿನ ಪ್ಲಾನ್ ನಂಬರ್ ವನ್ ಗಗನ್‍ಯಾನ್.

ಬಿಗ್ ಪ್ಲಾನ್ ನಂ.2
ಬಾಹ್ಯಾಕಾಶದಲ್ಲಿ ನಿಲ್ದಾಣ ನಿರ್ಮಾಣ!
ಹೌದು ಫ್ರೆಂಡ್ಸ್ ನೀವೆಲ್ಲ ಬಸ್ ಸ್ಟ್ಯಾಂಡ್ ನೋಡಿದ್ದೀರಿ. ರೈಲ್ವೆ ಸ್ಟೇಷನ್ ನೋಡಿದ್ದೀರಿ. ಏರ್ಪೋರ್ಟ್ ಕೂಡ ನೋಡಿದ್ದೀರಿ. ಅದೇ ರೀತಿ ಬಾಹ್ಯಾಕಾಶದಲ್ಲಿ ಸ್ಪೇಸ್ ಸ್ಟೇಷನ್ ನಿರ್ಮಾಣ ಮಾಡಲು ಭಾರತ ಮುಂದಾಗಿದೆ. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆ ಮುಗಿದ ಕೂಡಲೇ ಇದನ್ನು ಆರಂಭಿಸಲು ಇಸ್ರೋ ಅಧ್ಯಕ್ಷ ಕೆ.ಸಿವನ್ ಪ್ಲಾನ್ ಮಾಡಿದ್ದಾರೆ. ಇದು 20 ಟನ್ ತೂಕದ ಬಾಹ್ಯಾಕಾಶ ನಿಲ್ದಾಣ ಆಗಿರಲಿದೆ. ಈ ಸ್ಪೇಸ್ ಸ್ಟೇಷನ್ ನಿರ್ಮಾಣ ಆದ ಬಳಿಕ ಭಾರತದ ಗಗನಯಾತ್ರಿಗಳು ಗಗನ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಿ ತಮ್ಮ ಗಗನನೌಕೆಯನ್ನು ಈ ಸ್ಪೇಸ್ ಸ್ಟೇಷನ್ ನಲ್ಲಿ ಅಟ್ಯಾಚ್ ಮಾಡಿ ನಿಲ್ಲಿಸಬಹುದು. ಒಂದಷ್ಟು ದಿನಗಳ ಕಾಲ ಈ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಶ್ರಾಂತಿಯನ್ನು ಪಡೆಯಬಹುದು. ಅಧ್ಯಯನ ಮಾಡಬಹುದು. ಭಾರತ ಬಾಹ್ಯಾಕಾಶದಲ್ಲಿ ಕಾಯಂ ಸಿಬ್ಬಂದಿಯನ್ನು ಇರಿಸಿ ನಭೋಮಂಡಲದ ಅಧ್ಯಯನವನ್ನು ಇನ್ನಷ್ಟು ಹತ್ತಿರದಿಂದ ಮಾಡಬಹುದು. ಸ್ಪೇಸ್ ಸ್ಟೇಷನ್ ನಿರ್ಮಾಣದಿಂದ ಇದೆಲ್ಲವೂ ಸಾಧ್ಯವಾಗುತ್ತದೆ. ಈಗಾಗಲೇ ಅಮೆರಿಕ ಸೇರಿದಂತೆ 15 ರಾಷ್ಟ್ರಗಳು ಸೇರಿಕೊಂಡು ಒಂದು ದೊಡ್ಡ ಇಂಟನ್ರ್ಯಾಷನಲ್ ಸ್ಪೇಸ್ ಸ್ಟೇಷನ್ ಮಾಡಿಕೊಂಡಿವೆ. ಚೀನಾ ಕೂಡ ಸ್ವಂತ ಸ್ಪೇಸ್ ಸ್ಟೇಷನ್ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದೆ.

ಇದಾಗಿತ್ತು ಇಸ್ರೋದ ನೆಕ್ಸ್ಟ್ ಡೇರ್ಡೆವಿಲ್ ಪ್ರಾಜೆಕ್ಟ್ಸ್ ಬಗ್ಗೆ ನಿಮಗೆ ಅರಿವು ಮೂಡಿಸುವ ಪ್ರಯತ್ನ. ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಎಲ್ಲರಿಗೂ ಶೇರ್ ಮಾಡಿ.

Contact Us for Advertisement

Leave a Reply