‘ಟೆಂಟ್​ ಕೆಳಗೆ ಇದ್ದ ರಾಮ ಲಲ್ಲಾಗೆ ಮಂದಿರ ನಿರ್ಮಾಣ’: ಮೋದಿ ಭಾಷಣದ ಹೈಲೈಟ್ಸ್

masthmagaa

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ರು. ಭೂಮಿ ಪೂಜೆಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ನನಗೆ ಆಹ್ವಾನ ನೀಡಿದ್ದು ನನ್ನ ಸೌಭಾಗ್ಯ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ನಾನು ಕಾರ್ಯಕ್ರಮಕ್ಕೆ ಬಂದಿದ್ದು ಸ್ವಾಭಾವಿಕ ಕೂಡ ಆಗಿತ್ತು.

ಕನ್ಯಾಕುಮಾರಿಯಿಂದ ಖೀರ್ ಭವಾನಿ ದೇಗುಲದವರೆಗೆ, ಕೋಟೇಶ್ವರದಿಂದ ಕಾಮಾಖ್ಯದವರೆಗೆ, ಜಗನ್ನಾಥನಿಂದ ಕೇದಾರನಾಥದವರೆಗೆ, ಸೋಮನಾಥದಿಂದ ಕಾಶಿ ವಿಶ್ವನಾಥದವರೆಗೆ, ಸಮಯ್ ಶಿಖರದಿಂದ ಶ್ರವಣಬೆಳಗೊಳದವರೆಗೆ, ಬೋಧ್​​ಗಯಾದಿಂದ ಸಾರನಾಥದವರೆಗೆ, ಅಮೃತಸರ ಸಾಹಿಬ್​ನಿಂದ ಪಾಟ್ನಾ ಸಾಹಿಬ್​ವರೆಗೆ, ಅಂಡಮಾನ್​ನಿಂದ ಅಜ್ಮೀರದವರೆಗೆ, ಲಕ್ಷದ್ವೀಪದಿಂದ ಲೇಹ್​ವರೆಗೆ.. ಇಂದು ಇಡೀ ದೇಶ ರಾಮಮಯವಾಗಿದೆ. ಇಡೀ ದೇಶ ರೋಮಾಂಚನವಾಗಿದೆ. ಇಂದು ಇಡೀ ಭಾರತ ಭಾವುಕವಾಗಿದೆ. ಶತಮಾನಗಳ ಕಾಯುವಿಕೆ ಇವತ್ತು ಪೂರ್ಣಗೊಳ್ಳುತ್ತಿದೆ. ಈ ದಿನವನ್ನು ನೋಡುತ್ತಿದ್ದೇನೆ ಅಂತ ಕೋಟ್ಯಂತರ ಜನರಿಗೆ ವಿಶ್ವಾಸವೇ ಇಲ್ಲ. ಸಾಕಷ್ಟು ವರ್ಷಗಳಿಂದ ಟೆಂಟ್​ ಕೆಳಗೆ ಇದ್ದ ನಮ್ಮ ರಾಮ ಲಲ್ಲಾನಿಗೆ ಈಗ ಭವ್ಯ ಮಂದಿರ ನಿರ್ಮಾಣವಾಗಲಿದೆ.

ಇದು ದೇಶವನ್ನು ಒಗ್ಗೂಡಿಸುವ ಪ್ರಕ್ರಿಯೆ. ಈ ಐತಿಹಾಸಿಕ ದಿನವು ಸತ್ಯ, ಅಹಿಂಸೆ ಮತ್ತು ಬಲಿದಾನಕ್ಕೆ ನ್ಯಾಯಪ್ರಿಯ ಕೊಡುಗೆ ನೀಡುತ್ತಿದೆ. ಕೊರೋನಾ ಹಾವಳಿ ಸಂದರ್ಭದಲ್ಲಿ ಕಾರ್ಯಕ್ರಮ ಹೇಗೆ ನಡೆಯಬೇಕಿತ್ತೋ ಹಾಗೆಯೇ ನಡೆದಿದೆ. ಇದು ಇಡೀ ದೇಶಕ್ಕೆ ಮಾದರಿಯಾಗಿದೆ. ಸುಪ್ರೀಂಕೋರ್ಟ್​ನಿಂದ​ ಐತಿಹಾಸಿಕ ತೀರ್ಪು ಬಂದಾಗಲೂ ಹೀಗಿಯೇ ಇತ್ತು. ರಾಮ ಮಂದಿರ ನಿರ್ಮಾಣದಿಂದ ಕೇವಲ ಇತಿಹಾಸ ಸೃಷ್ಟಿಯಾಗಲ್ಲ. ಬದಲಿಗೆ ಇತಿಹಾಸ ಪುನರಾವರ್ತಿಸಲಾಗುತ್ತಿದೆ. ಎಲ್ಲರ ಪ್ರಯತ್ನದಿಂದ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಳ್ಳಲಿದೆ.

ಒಂದೊಂದು ದೇಶದಲ್ಲಿ ಒಂದೊಂದು ಭಾಷೆಯಲ್ಲಿ ರಾಮಾಯಣವಿದೆ. ತಮಿಳಿನಲ್ಲಿ ಕಂಬ ರಾಮಾಯಣ, ಕನ್ನಡದಲ್ಲಿ ಕುಮದೇಂದು ರಾಮಾಯಣ ಇದೆ. ಶ್ರೀ ರಾಮ ಎಲ್ಲಾ ಕಡೆ ಇದ್ದಾನೆ. ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲೀಮರಿರುವ ಇಂಡೋನೇಷ್ಯಾದಲ್ಲಿ ರಾಮನನ್ನು ಇವತ್ತೂ ಕೂಡ ಪೂಜಿಸುತ್ತಾರೆ. ಇರಾನ್ ಮತ್ತು ಚೀನಾದಲ್ಲಿ ರಾಮಕಥೆಯ ವಿವರಣೆ ಇದೆ. ಶ್ರೀಲಂಕಾ, ನೇಪಾಳ, ಮಲೇಷ್ಯಾ, ಕಾಂಬೋಡಿಯಾ.. ಹೀಗೆ ಎಲ್ಲಾ ದೇಶಗಳಲ್ಲೂ ಶ್ರೀರಾಮನ ಉಲ್ಲೇಖವಿದೆ.

ಅಯೋಧ್ಯೆ ಶ್ರೀರಾಮನ ನಗರಿ. ಶ್ರೀರಾಮ ಸತ್ಯದ ಸಂಕೇತ. ಇಲ್ಲಿ ತಲೆ ಎತ್ತಲಿರುವ ರಾಮ ಮಂದಿರ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಲಿದೆ. ಸಮಯದ ಜೊತೆ ಮುನ್ನಡೆಯೋದನ್ನು ಶ್ರೀ ರಾಮ ಕಲಿಸುತ್ತಾನೆ. ತಮಿಳು ರಾಮಾಯಣದಲ್ಲಿ ಶ್ರೀ ರಾಮ ಹೇಳುತ್ತಾರೆ, ‘ನಾವು ಸಮಯವನ್ನು ವ್ಯರ್ಥ ಮಾಡದೆ ಮುಂದಕ್ಕೆ ಹೋಗಬೇಕು’ ಅಂತ. ಇವತ್ತು ಇದೇ ಸಂದೇಶ ನಮಗೆಲ್ಲರಿಗೂ ಅನ್ವಯಿಸುತ್ತದೆ. ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎರಡು ಗಜ ಅಂತರ ಕಾಪಾಡಿಕೊಂಡು ಮತ್ತು ಮಾಸ್ಕ್ ಧರಿಸುವ ಮೂಲಕ ಮುಂದಕ್ಕೆ ಹೆಜ್ಜೆ ಇಡೋಣ. ಎಲ್ಲರ ಮೇಲೂ ಶ್ರೀರಾಮನ ಆಶೀರ್ವಾದ ಇರಲಿ. ಜೈ ಶ್ರೀ ರಾಮ್​.. ಜೈ ಶ್ರೀ ರಾಮ್.. ಜೈ ಶ್ರೀ ರಾಮ್..

-masthmagaa.com

Contact Us for Advertisement

Leave a Reply