ರಾಜ್ಯದಲ್ಲಿ ₹4,000 ಕೋಟಿ ಹಾನಿ, 885 ಗ್ರಾಮಗಳಲ್ಲಿ ಸಮಸ್ಯೆ: ಗೃಹ ಸಚಿವ ಬೊಮ್ಮಾಯಿ

masthmagaa.com

ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಸುಮಾರು 4,000 ಕೋಟಿ ರೂಪಾಯಿ ಹಾನಿಯಾಗಿದೆ ಅಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಅವರು, ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಉತ್ತರಪ್ರದೇಶ, ಕೇರಳ, ಅಸ್ಸಾಂ ರಾಜ್ಯಗಳ ಜೊತೆಯೂ ಪ್ರಧಾನಿ ಮಾತುಕತೆ ನಡೆಸಿದ್ರು ಎಂದರು.

ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನ ಪ್ರಧಾನಿ ಗಮನಕ್ಕೆ ತಂದಿದ್ದೇವೆ. ರಾಜ್ಯದ 56 ತಾಲೂಕುಗಳ 885 ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. 3,000 ಮನೆಗಳಿಗೆ ಹಾನಿಯಾಗಿದೆ, 80 ಸಾವಿರ ಹೆಕ್ಟೇರ್ ಕೃಷಿ ಪ್ರದೇಶ ಜಲಾವೃತವಾಗಿದೆ. ಸುಮಾರು 3,500 ಕಿಲೋ ಮೀಟರ್ ರಸ್ತೆಗೆ ಹಾನಿಯಾಗಿದೆ, 250 ಸೇತುವೆಗಳು ಬಿದ್ದಿವೆ. ಪ್ರಾಥಮಿಕ ಹಂತದ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 4,000 ಕೋಟಿ ರೂಪಾಯಿ ಹಾನಿಯಾಗಿದೆ ಅಂತ ಮಾಹಿತಿ ನೀಡಿದ್ರು.

ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಧಾನಿಗೆ ತಿಳಿಸಿದ್ದೇವೆ. ಸಿಎಂ ಯಡಿಯೂರಪ್ಪನವರು ಆಸ್ಪತ್ರೆಯಿಂದಲೇ ಗಮನಹರಿಸುತ್ತಿದ್ದಾರೆ. ಈಗಾಗಲೇ 4 ಎನ್​ಡಿಆರ್​ಎಫ್​ ತಂಡ ಮತ್ತು 200 ಎಸ್​ಡಿಆರ್​ಎಫ್ ಸಿಬ್ಬಂದಿ ನಮ್ಮ ಬಳಿ ಇದ್ದಾರೆ. 4 ಸೇನಾ ಹೆಲಿಕಾಪ್ಟರ್​ಗಳನ್ನ ರಿಸರ್ವ್ ಇಡಲಾಗಿದೆ. ಸೇನಾ ಸಿಬ್ಬಂದಿಯನ್ನ ನಿಯೋಜಿಸಿರುವುದಕ್ಕೆ ಪ್ರಧಾನಿಗೆ ಧನ್ಯವಾದ ಸೂಚಿಸುತ್ತೇವೆ.

ಕೃಷ್ಣಾ ಮತ್ತು ಕಾವೇರಿ ನದಿಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಜೂನ್​ನಲ್ಲಿ ವಾಡಿಕೆಗಿಂತ 18 ಪರ್ಸೆಂಟ್ ಹೆಚ್ಚು ಮಳೆಯಾಗಿದೆ. ಜುಲೈ ತಿಂಗಳಲ್ಲಿ ಒಟ್ಟಾರೆ ಮಳೆ ಕಡಿಮೆಯಾದರೂ ಕೆಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಸಮಸ್ಯೆ ಉಂಟಾಗಿದೆ ಅಂತ ಬಸವರಾಜ ಬೊಮ್ಮಾಯಿ ಹೇಳಿದ್ರು.

-masthmagaa.com

 

Contact Us for Advertisement

Leave a Reply