ಸುಳ್ಳು ಆರೋಪ ಮಾಡಿದ ಯೂಟ್ಯೂಬ್ ಚಾನಲ್ ಗೆ ಮಲಯಾಳಿ ನಟ ಪೃಥ್ವಿರಾಜ್ ಖಡಕ್ ವಾರ್ನಿಂಗ್!

masthmagaa.com:

ಮಲಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್‌ ವಿರುದ್ಧ ಯೂಟ್ಯೂಬ್‌ ಚಾನಲ್‌ವೊಂದರಲ್ಲಿ ಆರೋಪ ಕೇಳಿಬಂದಿದೆ. ಪೃಥ್ವಿರಾಜ್‌ ಸುಕುಮಾರನ್‌ ಇದಕ್ಕೆ ಪ್ರತಿಕ್ರಿಯಿಸಿ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಯೂಟ್ಯೂಬ್‌ ಚಾನಲ್‌ವೊಂದರಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ಜಾರಿ ನಿರ್ದೇಶನಾಲಯಕ್ಕೆ 25 ಕೋಟಿ ಹಣ ದಂಡ ಕಟ್ಟಿದ್ದಾರೆ ಹಾಗೂ ಪ್ರೊಪಾಗಾಂಡಾ ಸಿನಿಮಾಗಳನ್ನು ಮಾಡುತ್ತಿದ್ದಾರೆ, ಅವರ ಸಿನಿಮಾಗಳು ದುರುದ್ದೇಶದಿಂದ ಕೂಡಿರುತ್ತವೆ ಎಂದು ಆರೋಪ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಫೃಥ್ವಿರಾಜ್‌ ಸುಕುಮಾರನ್‌ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಪೃಥ್ವಿರಾಜ್ ಸುಕುಮಾರನ್, ”ಮರುನಾದನ್ʼʼ ಮಲಯಾಳಿ ಹೆಸರಿನ ಯೂಟ್ಯೂಬ್ ಚಾನೆಲ್​ನಲ್ಲಿ ನನ್ನ ವಿರುದ್ಧ ಸುಳ್ಳು ಹಾಗೂ ಅಪಮಾನಕರ ಸುದ್ದಿಗಳನ್ನು ಪ್ರಕಟಿಸಿರುವುದು ನನ್ನ ಗಮನಕ್ಕೆ ಬಂದಿದೆ. ಜಾರಿ ನಿರ್ದೇಶನಾಲಯಕ್ಕೆ ನಾನು 25 ಕೋಟಿ ದಂಡ ಕಟ್ಟಿರುವುದಾಗಿ ಹಾಗೂ ಪ್ರೊಪಾಗಾಂಡಾ ಸಿನಿಮಾಗಳನ್ನು ಮಾಡುತ್ತಿರುವುದಾಗಿ ಹೇಳಲಾಗಿದೆ. ಈ ಆರೋಪಗಳಲ್ಲಿ ಯಾವುದೇ ಸತ್ಯಗಳಿಲ್ಲ. ಈ ಆರೋಪಗಳು ದುರುದ್ದೇಶಪೂರ್ವಕವಾಗಿದ್ದು ಮಾನಹಾನಿಕಾರಕವಾಗಿವೆ” ಎಂದಿದ್ದಾರೆ.

ಮುಂದುವರೆದು, ”ಈ ಮಾನಹಾನಿಕರ ಆರೋಪಗಳನ್ನು ಮಾಡಿರುವವರ ವಿರುದ್ಧ ನಾನು ಕಾನೂನು ಕ್ರಮಕೈಗೊಳ್ಳುತ್ತಿದ್ದೇನೆ. ಈ ಮೂಲಕ ಎಲ್ಲ ಮಾಧ್ಯಮಗಳಲ್ಲಿ ಮಾಡುವ ಮನವಿಯೆಂದರೆ, ಯಾವುದೇ ಆರೋಪಗಳನ್ನು ಮಾಡುವ ಮುನ್ನ ಸತ್ಯವನ್ನು ಸ್ಪಷ್ಟಪಡಿಸಿಕೊಳ್ಳಿ, ಆಧಾರ ರಹಿತ ಆರೋಪಗಳು ಬೇಡ” ಎಂದಿದ್ದಾರೆ.

ಪೃಥ್ವಿರಾಜ್‌ ಸುಕುಮಾರನ್‌ ಮಲಯಾಳಂನ ನೂರಕ್ಕು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಹಾಗೂ ಪ್ರಭಾಸ್‌ ನಾಯಕ ನಟನಾಗಿರುವ ʻಸಲಾರ್‌ʼ ಸಿನಿಮಾದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ನಟಿಸುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

-masthmagaa.com

Contact Us for Advertisement

Leave a Reply