24 ವರ್ಷಗಳ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಗಾಂಧಿಯೇತರ ಮುಖ್ಯಸ್ಥ!

masthmagaa.com:

ಶತಮಾನದ ಇತಿಹಾಸ ಹೊಂದಿರೊ ದೇಶದ ಹಳೆಯ ಪಕ್ಷ ಕಾಂಗ್ರೆಸ್‌ಗೆ 24 ವರ್ಷದ ಬಳಿಕ ಗಾಂಧಿಯೇತರ ವ್ಯಕ್ತಿ ಸಾರಥಿಯಾಗಿದ್ದಾರೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 9,385 ಮತಗಳು ಚಲಾವಣೆಗೊಂಡಿದ್ವು. ಇದ್ರಲ್ಲಿ 415 ಮತಗಳನ್ನ ಅಮಾನ್ಯಗೊಳಿಸಲಾಗಿತ್ತು. ಈ ಪೈಕಿ 7,897 ಮತಗಳನ್ನ ಪಡೆದು ಖರ್ಗೆ ಭರ್ಜರಿ ಜಯಭೇರಿ ಭಾರಿಸಿದ್ದಾರೆ. ಇತ್ತ ಪ್ರತಿಸ್ಪರ್ಧಿ ಶಶಿ ತರೂರ್‌ 1,072 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದಾರೆ. ಇನ್ನು ಚುನಾವಣೆಯಲ್ಲಿ ಗೆದ್ದಿರೊ ಖರ್ಗೆ ಅವ್ರಿಗೆ ಪ್ರಮುಖ ನಾಯಕರಿಂದ ಶುಭಾಶಯಗಳು ಹರಿದು ಬರ್ತಿವೆ. ಅದ್ರಲ್ಲೂ ಭಾರತ್‌ ಜೋಡೊ ಯಾತ್ರೆಯಲ್ಲಿರೊ ರಾಹುಲ್‌ ಗಾಂಧಿ, ಚುನಾವಣಾ ಫಲಿತಾಂಶ ಬರೋಕೆ ಮುಂಚನೇ ಖರ್ಗೆ ಅವ್ರನ್ನ ಅಧ್ಯಕ್ಷರಾಗಿ ಅನೌನ್ಸ್‌ ಮಾಡಿದ್ರು. ಆಂಧ್ರ ಪ್ರದೇಶದ ಕುಲ್ನೋರ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಪಟ್ಟ ಪ್ರಶ್ನೆಯೊಂದನ್ನ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ರಾಹುಲ್‌, ಅದರ ಬಗ್ಗೆ ನಾನು ಹೇಳಕಾಗಲ್ಲ. ಅದು ಖರ್ಗೆ ಅವ್ರು ಉತ್ತರಿಸಬೇಕಾದ ವಿಷಯ. ಖರ್ಗೆಜಿಯನ್ನ ಕೇಳಿ ಅಂತ ಹೇಳಿದ್ದಾರೆ. ಇನ್ನು ನೂತನ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕೂಡ ವಿಶ್‌ ಮಾಡಿದ್ದಾರೆ. ಜೊತೆಗೆ ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸೇರಿದಂತೆ ಇತರ ರಾಜ್ಯದ ಕಾಂಗ್ರೆಸ್‌ ನಾಯಕರು ಅಭಿನಂದನೆ ತಿಳಿಸಿದ್ದಾರೆ. ಇತ್ತ ಎದುರಾಳಿಯಾಗಿ ಸ್ಪರ್ಧಿಸಿದ್ದ ಶಶಿ ತರೂರ್‌ ಕೂಡ ಅಭಿನಂದಿಸಿದ್ದಾರೆ. ಈ ವೇಳೆ ಮಾತಾಡಿದ ಅವ್ರು, ಕಾಂಗ್ರೆಸ್‌ ಅಧ್ಯಕ್ಷರಾಗೋದು ಅಂದ್ರೆ ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿ. ಖರ್ಗೆ ಅವ್ರಿಗೆ ಈ ಜವಾಬ್ದಾರಿಯಲ್ಲಿ ಯಶಸ್ಸು ಸಿಗಲಿ ಅಂತ ಹಾರಸ್ತೀನಿ ಅಂತ ಹೇಳಿದ್ದಾರೆ.
ಇನ್ನು ತರೂರ್‌ ಅವರು ಚುನಾವಣೆ ಸೋತ ಬೆನ್ನಲ್ಲೇ ಅವರ ಬೆಂಬಗಲಿಗರು ಚುನಾವಣೆಯಲ್ಲಿ ಕೆಲ ಅಕ್ರಮಗಳು ನಡೆದಿವೆ ಅಂತ ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆ ವೇಳೆ, ಮತ ಹಾಕೋ ಬಾಕ್ಸ್‌ಗಳ ಮೇಲೆ ಅನಧಿಕೃತ ಸೀಲ್‌ಗಳನ್ನ ಬಳಕೆ ಮಾಡಲಾಗಿತ್ತು. ವೋಟಿಂಗ್‌ ಬೂತ್‌ಗಳಲ್ಲಿ ಸಂಬಂಧ ಪಡದ ವ್ಯಕ್ತಿಗಳು ಉಪಸ್ಥಿತರಿದ್ರು. ಮತ ಚಲಾವಣೆಯ ಸಮ್ಮರಿ ಶೀಟ್‌ ಇರಲಿಲ್ಲ ಅಂತ ಆರೋಪಿಸಿದ್ದಾರೆ. ಇನ್ನು 137 ವರ್ಷಗಳ ಇತಿಹಾಸ ಹೊಂದಿರೊ ಕಾಂಗ್ರೆಸ್‌ ಪಕ್ಷಕ್ಕೆ ಸ್ವಾತಂತ್ರ್ಯ ನಂತರ ಅಧ್ಯಕ್ಷ ಸ್ಥಾನಕ್ಕೆ ನಡೆದ 6ನೇ ಚುನಾವಣೆ ಇದಾಗಿದೆ. ಈ ಹಿಂದೆ 1939, 1950, 1977, 1997, 2000ರಲ್ಲಿ ಚುನಾವಣೆ ನಡೆಸಲಾಗಿತ್ತು. ಉಳಿದಂತೆ ಬಹುತೇಕ ಸಂದರ್ಭಗಳಲ್ಲಿ ಗಾಂಧಿ ಕುಟುಂಬದವ್ರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 2000ರಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಸೋನಿಯಾ ಗಾಂಧಿ, ಎದುರಾಳಿ ಜಿತೇಂದ್ರ ಪ್ರಸಾದ್‌ ವಿರುದ್ದ ಭಾರಿ ಅಂತರದಿಂದ ಗೆದ್ದು ಪಕ್ಷದ ಮುಖ್ಯಸ್ಥೆಯಾಗಿದ್ರು.

-masthmagaa.com

Contact Us for Advertisement

Leave a Reply