ಬ್ಯಾಂಕ್‌ ಮೋಸಗಾರ ಮೇಹುಲ್‌ ಚೋಕ್ಸಿ ಮಿಂಚಿನ ಓಟ ಬಂದ್!

masthmagaa.com:

ಭಾರತ ಬ್ಯಾಂಕುಗಳಿಗೆ. ಮೋಸ ಮಾಡಿ ಓಡಿ ಹೋಗಿರೋ ವಜ್ರವ್ಯಾಪಾರಿ ಮೇಹುಲ್ ಚೋಕ್ಸಿಯ ಮಿಂಚಿನ ಓಟ ಅಂತ್ಯವಾದಂಗೆ ಕಾಣ್ತಿದೆ. ಈಗ ಕಡೆಗೂ ಡೊಮಿನಿಕಾದಲ್ಲಿ ಚೋಕ್ಸಿಯನ್ನ ಅಲ್ಲಿನ ಕಾಪನ್ ವೆಲ್ತ್ ಪೊಲೀಸ್ ನ ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಕೆರೆಬಿಯನ್ ದ್ವೀಪ ರಾಷ್ಟ್ರ ಆಂಟಿಗುವಾದಲ್ಲಿ ಅಡಗಿದ್ದ ಚೋಕ್ಸಿ ಅಲ್ಲಿಂದಲೂ ಕಣ್ಮರೆಯಾಗಿದ್ದ . ಆತನನ್ನ ಹಿಡಿಯೋಕೆ ನಾವು ಎಲ್ಲ ಪ್ರಯತ್ನ ಮಾಡ್ತೀವಿ, ನಾವು ವಾಯು ಮಾರ್ಗದಲ್ಲಿ ಎಲ್ಲ ಚೆಕ್ ಮಾಡಿದ್ದೇವೆ. ಆತ ವಿಮಾನದ ಮೂಲಕ ಹೋಗಿಲ್ಲ. ಆಂಟಿಗುವಾ ದ್ವೀಪ. ಸೋ ನೆಲ ಮಾರ್ಗದ ಮೂಲಕವೂ ಬೇರೆ ದೇಶಕ್ಕೆ ಸಾಗಲು ಸಾಧ್ಯವಿಲ್ಲ. ಹೀಗಾಗಿ ಈತ ಖಂಡಿತವಾಗಿಯೂ ಜಲ ಮಾರ್ಗದ ಮೂಲಕವೇ ಪರಾರಿಯಾಗಿರಬೇಕು ಅಂತ ಅಲ್ಲಿನ ಪ್ರಧಾನಿ ಗೇಸ್ಟೋನ್ ಬ್ರೋನೆ ಹೇಳಿದ್ರು. ಕೂಡಲೇ ಆಂಟಿಗುವಾದಿಂದ ಎಲ್ಲ ಸಮೀಪದ ದ್ವೀಪ ರಾಷ್ಟ್ರಗಳಿಗೂ ಮಾಹಿತಿ ಕೊಡಲಾಯ್ತು. ಈ ಚೋಕ್ಸಿ ಸಿಕ್ರೆ ಹಿಡೀರಿ ಅಂತ ಹೇಳಲಾಯ್ತು. ಸೋ ಫೈನಲಿ ಕೇವಲ ೭೧ ಸಾವಿರ ಜನಸಂಖ್ಯೆ ಇರೋ ಪುಟಾಣಿ ದ್ವೀಪ ದೇಶ ಡೊಮಿನಿಕಾದಲ್ಲಿ ಈಗ ಬಂಧಿಸಲಾಗಿದೆ. ಆತನನ್ನ ನಿಮ್ಮ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಹಾಗೂ ಪರ್ಸೋನಾ ನಾನ್ ಗ್ರಾಟಾ/ಅಂದ್ರೆ ಬೇಡವಾದ ವ್ಯಕ್ತಿ ಅಂತ ಘೋಷಿಸಿ ಸೀದಾ ಭಾರತಕ್ಕೆ ಹ್ಯಾಂಡೋವರ್ ಮಾಡುವಂತೆ ಮನವಿ ಮಾಡಿದ್ದೇವೆ ಅಂತ ಆಂಟಿಗುವಾ ಹೇಳಿದೆ. ಇದಕ್ಕೆ ಡೊಮಿನಿಕಾ ಕೂಡ ಒಪ್ಪಿದೆ ಅಂತ ಆಂಟಿಗುವಾ ಪ್ರಧಾನಿ ಗೇಸ್ಟನ್ ಬ್ರೋನೆ ಹೇಳಿದ್ದಾರೆ. ಹಾಗೇನಾದ್ರೂ ಆದ್ರೆ ಶೀಘ್ರದಲ್ಲಿ ಚೋಕ್ಸಿಯ ಪ್ರಪಂಚ ಪರ್ಯಟನೆ ಅಂತ್ಯ ಆಗಿ ಭಾರತದ ಸ್ವರ್ಗ ಸಮಾನ ಜೈಲುಗಳ ದರ್ಶನ ಶುರು ಆಗಬೋದು.
ಆದ್ರೆ ಈ ಪ್ರಕ್ರಿಯೆಗೆ ಚೋಕ್ಸಿ ಪರ ವಕೀಲರು ಕೊಕ್ಕೆ ಹಾಕೋಕೆ ಟ್ರೈ ಮಾಡ್ತಿದಾರೆ. ಭಾರತದ ನಾಗರಿಕತ್ವ ಕಾಯಿದೆ ಪ್ರಕಾರ ಚೋಕ್ಸಿ ಆಂಟಿಗುವಾ ಸಿಟಿಜನ್ ಶಿಪ್ ತಗೊಂಡ ಕ್ಷಣವೇ ಅವರ ಭಾರತದ ಪೌರತ್ವ ಕ್ಯಾನ್ಸಲ್ ಆಗಿದೆ. ಸೋ ಅವರು ಈಗ ಭಾರತದ ಪ್ರಜೆಯೇ ಅಲ್ಲ. ಹೀಗಾಗಿ ಅವರನ್ನ ಆಂಟಿಗುವಾಗೇ ಹಸ್ತಾಂತರ ಮಾಡಬೇಕು. ಯಾವ ಕಾರಣಕ್ಕೂ ಭಾರತಕ್ಕೆ ಹಸ್ತಾಂತರ ಮಾಡಬಾರದು ಅಂತ ಲಾ ಪಾಯಿಂಟು ಹಾಕಿದ್ದಾರೆ.
ಆದ್ರೆ ಭಾರತ ಸರ್ಕಾರ ಈಗಾಗಲೇ ಡೊಮಿನಿಕಾ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿದೆ. ಅಲ್ಲಿಂದ ನೇರವಾಗಿ ಭಾರತಕ್ಕೆ ಕರೆತರೋ ಪ್ರಯತ್ನ ಭಾರತದ ಕಡೆಯಿಂದಲೂ ಶುರುವಾಗಿದೆ ಅಂತ ಮೂಲಗಳು ತಿಳಿಸಿವೆ.
ಅಂದಹಾಗೆ ಚೋಕ್ಸಿ ವಿರುದ್ದ ಇಂಟರ್‌ ಪೋಲ್ ಯೆಲ್ಲೋ ನೋಟಿಸ್‌ ಜಾರಿಯಾಗಿತ್ತು. ತಲೆಮರೆಸಿಕೊಂಡವರನ್ನ ಪತ್ತೆ ಹಚ್ಚುವ ಸಲುವಾಗಿ ಕೊಡುವಂತಹ ನೋಟಿಸ್‌ ಇದು.
ಹಾಗಿದ್ರೆ ಈ ಇಂಟರ್‌ ಪೋಲ್‌ ಅಂದ್ರೆ ಏನು ?
ಇಂಟರ್‌ ಪೋಲ್‌ ಅನ್ನುವಂತದ್ದು 194 ರಾಷ್ಟ್ರಗಳ ಸದಸ್ಯರನ್ನ ಒಳಗೊಂಡ ಒಂದು ಅಂತಾರಾಷ್ಟ್ರೀಯ ವೇದಿಕೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪರಾಧಗಳು ನಡೆದಾಗ, ಅದರ ವಿರುದ್ದ ಒಟ್ಟಾಗಿ ಕೆಲಸ ಮಾಡಲು ಇರೋ ಸಂಘಟನೆ.
ಇದು 8 ಬೇರೆ ಬೇರೆ ಥರದ ನೋಟಿಸ್ ಗಳನ್ನ ಇಶ್ಯೂ ಮಾಡುತ್ತೆ.

ಅದ್ರಲ್ಲಿ ರೆಡ್‌ ಕಾರ್ನರ್‌ ನೋಟಿಸ್ ಅತ್ಯಂತ‌ ಮುಖ್ಯವಾದದ್ದು. ಇದನ್ನ ಯಾವುದಾದ್ರು ಅಪರಾಧಿಗಳನ್ನ ಹಸ್ತಾಂತರಿಸುವ ಉದ್ದೇಶದಿಂದ ಅಥವಾ ಮೋಸ್ಟ್‌ ವಾಂಟೆಡ್‌ ಅಪರಾಧಿಗಳನ್ನ ಬಂಧಿಸಲು, ಅಪರಾಧಿಗಳನ್ನ ತಾತ್ಕಾಲಿಕವಾಗಿ ಬಂಧಿಸಿಡಿ ಅಂತಾ ಹೇಳಲು ಈ ನೋಟಿಸನ್ನ ನೀಡಲಾಗುತ್ತೆ.

ಬ್ಲೂ ಕಾರ್ನರ್ ನೋಟಿಸ್‌
ಅಪರಾಧಿ ಯಾವ ದೇಶಕ್ಕೆ ಸೇರಿದ್ದಾರೆ, ಅಪರಾಧಿಯ ಹಿನ್ನಲೆ, ಅಪರಾಧಕ್ಕೆ ಸಂಬಧಿಸಿದ ಯಾವುದೆಲ್ಲ ಚಟುವಟಿಕೆ ಮಾಡಿದ್ದಾರೆ ಅನ್ನೋದನ್ನೆಲ್ಲ ಸಂಗ್ರಹಿಸುವ ಸಲುವಾಗಿ ಈ ನೋಟಿಸನ್ನ ನೀಡ್ತಾರೆ.

ಅದೇ ರೀತಿ ಬ್ಲ್ಯಾಕ್‌, ಗ್ರೀನ್‌, ಆರೆಂಜ್‌, ಪರ್ಪಲ್‌ ಹಾಗೂ ಇನ್ನೋಂದು ಯುನೈಟೆಡ್‌ ನೇಷನ್ಸ್‌ ಸೆಕ್ಯುರಿಟಿ ಕೌನ್ಸಿಲ್ ಸ್ಪೆಷಲ್‌ ನೋಟಿಸ್ ಈ ರೀತಿ ಬೇರೆ ಬೇರೆ ನೋಟಿಸ್ ಗಳನ್ನ ಇಂಟರ್‌ ಪೋಲ್‌ ಜಾರಿ ಮಾಡುತ್ತೆ.

-masthmagaa.com

Contact Us for Advertisement

Leave a Reply