ಬಿಜೆಪಿ ಸರ್ಕಾರ ತಂದಿರುವ ಕಾನೂನುಗಳನ್ನ ಹಿಂಪಡೆಯುತ್ತೇವೆ: ಪ್ರಿಯಾಂಕ್‌ ಖರ್ಗೆ

masthmagaa.com:

ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರೊ ಕಾಂಗ್ರೆಸ್‌ ಕೆಲ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳೋಕೆ ಮುಂದಾಗಿದೆ. ಹೌದು, ಬಿಜೆಪಿಯ ವಿವಾದಾತ್ಮಕ ಕಾನೂನುಗಳಾದ ಹಿಜಬ್‌ ಬ್ಯಾನ್‌, ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟ ಕಾನೂನುಗಳನ್ನ ಹಿಂಪಡೆಯೋಕೆ ಮುಂದಾಗಿದೆ. ಅಮ್ನೆಸ್ಟಿ ಇಂಡಿಯಾ ಸಂಸ್ಥೆ, ಕಾಂಗ್ರೆಸ್‌ ಸರ್ಕಾರದ ಮುಂದೆ 3 ಬೇಡಿಕೆಗಳನ್ನ ಇಟ್ಟಿದೆ. ಶಾಲೆಗಳಲ್ಲಿ ಹಿಜಬ್‌ ಬ್ಯಾನ್‌ ವಾಪಾಸ್‌ ಪಡೆಯೋದು, ಗೋಹತ್ಯೆಗೆ ಅನುಮತಿ ನೀಡೋದು ಹಾಗೂ ಮುಸ್ಲಿಂ ಶಾಪ್‌ಗಳನ್ನ ನಿಷೇಧಿಸುವ ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳೋದು. ಹೀಗೆ ರಾಜ್ಯದಲ್ಲಿ ಮಾನವ ಹಕ್ಕುಗಳನ್ನ ಎತ್ತಿ ಹಿಡಿಯಲು ಈ ಮೂರು ಕ್ರಮಗಳನ್ನ ಮೊದಲು ತೆಗೆದುಕೊಳ್ಳುವಂತೆ ಟ್ವೀಟ್‌ ಮಾಡಿ ಕಾಂಗ್ರೆಸ್‌ಗೆ ಹೇಳಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್‌ ಹಿಜಬ್‌ ಬ್ಯಾನ್‌, ಗೋಹತ್ಯೆಗೆ ಸಂಬಂಧಪಟ್ಟ ಕಾನೂನುಗಳನ್ನ ಹಿಂಪಡೆಯುವ ಕುರಿತು ಸೂಚನೆ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಮಾತಾಡಿದ ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯದ ಪ್ರಗತಿಗೆ ಅಡ್ಡಿಯಾಗಿರುವ ಕಾನೂನುಗಳನ್ನ ವಾಪಾಸ್‌ ಪಡೆಯುತ್ತೇವೆ. ಅಲ್ದೇ ಬಿಜೆಪಿ ಆಡಳಿತದ ಎಲ್ಲ ವಿಧೇಯಕಗಳನ್ನ ಪರಿಶೀಲಿಸುತ್ತೇವೆ. ನಾಗ್ಪುರದಲ್ಲಿ ಕುಳಿತಿರುವ ಜನರ ಆದೇಶದ ಮೇರೆಗೆ ಪರಿಚಯಿಸಲಾದ ಯಾವುದೇ ಮಸೂದೆಗಳು ಅಥವಾ ಕಾನೂನುಗಳು ನಮಗೆ ಬೇಡ ಅಂತ RSS ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ನಾವು ಕರ್ನಾಟಕವನ್ನ ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೀವಿ ಅಂತ ಭರವಸೆ ನೀಡಿದ್ದೇವೆ. ಈ ನಿಟ್ಟಿನಲ್ಲಿ ಯಾರೇ ಕೋಮು ಪ್ರಚೋದನೆ ಮಾಡಿದ್ರೂ ಕಠಿಣ ಕ್ರಮ ತೆಗೆದುಕೊಳ್ತೀವಿ. ಒಂದು ವೇಳೆ ರಾಜ್ಯದಲ್ಲಿ ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್‌ಎಸ್‌ಎಸ್ ಅನ್ನೊದನ್ನ ನಾವು ಪರಿಗಣಿಸಲ್ಲ. ಅಂತಹ ಸಂಘಟನೆಗಳನ್ನ ಸರ್ಕಾರ ನಿಷೇಧಿಸುತ್ತೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದಿದ್ದಾರೆ. ಜೊತೆಗೆ ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೇ ಕೆಲವು ಅಂಶಗಳು ಮುಕ್ತವಾಗಿ ಸಂಚರಿಸುತ್ತಿವೆ. ಕಳೆದ 3 ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಬಿಜೆಪಿಯವ್ರ ಹಿಜಬ್‌ ಬ್ಯಾನ್‌ ಕ್ರಮ ಅಸಂವಿಧಾನಿಕವಾಗಿದೆ. ನಾವು ಸಾಂವಿಧಾನಿಕ ಮಾರ್ಗದಲ್ಲಿ ಯಾವುದು ಸರಿ ಅದನ್ನ ನಾವು ಮಾಡ್ತೀವಿ. ಹಿಜಬ್‌ ಧರಿಸೋದು ಒಬ್ಬರ ವೈಯಕ್ತಿಕ ವಿಷಯ. ಅದರ ಕುರಿತು ಯಾರು ಏನು ಹೇಳಂಗಿಲ್ಲ ಅಂತ ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರಿಸ್‌ ಹೇಳಿದ್ದಾರೆ. ಇತ್ತ ಪ್ರಿಯಾಂಕ್‌ ಖರ್ಗೆ ಮಾತಿಗೆ ಪ್ರತಿಕ್ರಯಿಸಿರೋ ಬಿಜೆಪಿ ಸದಸ್ಯ ಸರ್ಕಾರ ನಿರ್ಧಾರ ಖಂಡಿಸಿ ನಾವು ಹೋರಾಟ ಮಾಡ್ತೀವಿ. ರಾಜ್ಯದಲ್ಲಿ ಎಲ್ಲರನ್ನೂ ಮತಾಂತರ ಮಾಡಲು ಅವಕಾಶ ಕೊಡ್ತೀರಾ. ನಮ್ಮ ಸಂಸ್ಕೃತಿಯನ್ನ ನಾವು ಉಳಿಸಿಕೊಳ್ಳಬೇಕು ಅಂತ ಹೇಳಿದ್ದಾರೆ. ಕಾಂಗ್ರೆಸ್‌ಗೆ ಬೆಂಬಲವಾಗಿ ಮಾತಾಡಿದ AIMIMನ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಬಿಜೆಪಿ ತಂದ ಹಿಜಬ್‌ ಬ್ಯಾನ್‌ ಅಸಂವಿಧಾನಿಕವಾಗಿದೆ ಅಂತ ನಾವು ಹೇಳ್ತಾನೇ ಬಂದಿದ್ವಿ. ಆರ್ಟಿಕಲ್‌ 29ರ ಉಲ್ಲಂಘನೆಯಾಗಿದ್ದು, ಹಿಜಾಬ್‌ ಬ್ಯಾನ್‌ನ್ನ ವಾಪಾಸ್‌ ಪಡೆಯಬೇಕು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply