masthmagaa.com:

ಕೊರೋನಾ ವೈರಸ್​ಗೆ ಆಕ್ಸ್​ಫರ್ಡ್ ಯುನಿವರ್ಸಿಟಿ ಮತ್ತು ಅಸ್ಟ್ರಝೆನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯ 3ನೇ ಹಂತದ ಮಾನವ ಪ್ರಯೋಗವನ್ನು ಭಾರತದಲ್ಲಿ ಆರಂಭಿಸಲು ಸಿದ್ಧತೆ ನಡೆದಿದೆ. ಅನುಮತಿ ಸಿಗುತ್ತಿದ್ದಂತೇ ಲಸಿಕೆಯ ಪ್ರಯೋಗ ಶುರು ಮಾಡುತ್ತೇವೆ ಜಗತ್ತಿನ ಅತಿ ದೊಡ್ಡ ಲಸಿಕೆ ತಯಾರಕ ಸಂಸ್ಥೆಯಾದ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.

ಬ್ರಿಟನ್​ನ ಆಕ್ಸ್​​ಫರ್ಡ್ ಸಂಶೋಧಕರ ಜೊತೆ ಒಪ್ಪಂದ ಮಾಡಿಕೊಂಡಿರುವ ಪುಣೆ ಮೂಲದ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ದೇಶದಲ್ಲಿ ಲಸಿಕೆಯ ಉತ್ಪಾದನೆ ಮತ್ತು ಅದರ ಮಾನವ ಪ್ರಯೋಗ ನಡೆಸಲಿದೆ. ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಮುಖ್ಯಸ್ಥ ಅದರ್ ಪೂನಾವಾಲಾ, ‘ಲಸಿಕೆಯ ಆರಂಭಿಕ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದು ತುಂಬಾ ಸಂತೋಷದ ವಿಚಾರ’ ಎಂದಿದ್ದಾರೆ.

ದೇಶದಲ್ಲಿ ಮಾನವ ಪ್ರಯೋಗ ನಡೆಸಲು ಬೇಕಾದ ಲೈಸೆನ್ಸ್​ಗೆ ಒಂದು ವಾರದೊಳಗೆ ಅರ್ಜಿ ಸಲ್ಲಿಸುತ್ತೇವೆ. ಅನುಮತಿ ಸಿಕ್ಕಿದ ಕೂಡಲೇ ಲಸಿಕೆಯ ಪ್ರಯೋಗ ಆರಂಭಿಸುತ್ತೇವೆ. ಶೀಘ್ರದಲ್ಲೇ ದೊಡ್ಡ ಪ್ರಮಾಣದಲ್ಲಿ ಲಸಿಕೆಯ ಡೋಸ್​ಗಳನ್ನ ಉತ್ಪಾದಿಸಲು ಶುರು ಮಾಡುತ್ತೇವೆ ಎಂದಿದ್ದಾರೆ.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಆರಂಭಿಕ ಹಂತದ ಮಾನವ ಪ್ರಯೋಗದಲ್ಲಿ ಆಕ್ಸ್​ಫರ್ಡ್​ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತ ಅನ್ನೋದು ಗೊತ್ತಾಗಿದೆ. ಲಸಿಕೆಯು ದೇಹದಲ್ಲಿ ವೈರಾಣು ವಿರುದ್ಧ ಪ್ರತಿಕಾಯ ಸೃಷ್ಟಿಸುವುದಲ್ಲದೆ, ವೈರಾಣುವನ್ನು ಹುಡುಕಿ ಅದರ ಮೇಲೆ ದಾಳಿ ಮಾಡುವ ಟಿ-ಸೆಲ್​ಗಳನ್ನು ಉತ್ಪತ್ತಿ ಮಾಡುತ್ತವೆ. ಈ ಲಸಿಕೆ ಕೊಟ್ಟಾಗ ಸಣ್ಣಪುಟ್ಟ ಅಡ್ಡಪರಿಣಾಮಗಳಾದ ಜ್ವರ, ತಲೆ ನೋವು, ಮಾಂಸಖಂಡದ ನೋವು ಕಾಣಿಸಿಕೊಂಡಿವೆ. ಆದ್ರೆ ಇವೆಲ್ಲವನ್ನು ಈಗಾಗಲೇ ಲಭ್ಯವರುವ ಸಾಮಾನ್ಯ ಔಷಧಗಳ ಮೂಲಕ ನಿವಾರಿಸಲು ಸಾಧ್ಯವಿದೆ ಅಂತ ಸಂಶೋಧಕರು ಹೇಳಿದ್ದಾರೆ. ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್​ನಲ್ಲಿ ಈ ಬಗ್ಗೆ ವಿವರವಾದ ವರದಿ ಪ್ರಕಟವಾಗಿದೆ.

ದೇಶದಲ್ಲಿ ಸದ್ಯ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ‘ಕೋವ್ಯಾಕ್ಸಿನ್’ ಲಸಿಕೆ ಮತ್ತು ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಲಸಿಕೆಗಳ ಮಾನವ ಪ್ರಯೋಗಕ್ಕೆ ಮಾತ್ರ ಅನುಮತಿ ಸಿಕ್ಕಿದೆ. ಈ ಲಸಿಕೆಗಳು ಇನ್ನೂ ಕೂಡ ಆರಂಭಿಕ ಹಂತದ ಪ್ರಯೋಗ ನಡೆಸುತ್ತಿವೆ ಅನ್ನೋದು ಗಮನಾರ್ಹ. ಇದೀಗ ಆಕ್ಸ್​ಫರ್ಡ್​ ಲಸಿಕೆಯ 3ನೇ ಹಂತದ ಮಾನವ ಪ್ರಯೋಗಕ್ಕೆ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಅನುಮತಿ ಕೇಳಲಿದೆ. ಅನುಮತಿ ಸಿಕ್ಕರೆ ದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಜನರ ಮೇಲೆ ಆಕ್ಸ್​ಫರ್ಡ್​ ಲಸಿಕೆಯ ಪ್ರಯೋಗ ನಡೆಯಲಿದೆ. ಯುರೋಪ್ ಮತ್ತು ಆಫ್ರಿಕಾ ಖಂಡದಲ್ಲಿ ಆಕ್ಸ್​ಫರ್ಡ್​ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಮಾನವ ಪ್ರಯೋಗ ನಡೆದಿತ್ತು.

-masthmagaa.com

Contact Us for Advertisement

Leave a Reply