ಚಂದ್ರನ ಮೇಲೆ ನಿಂತು ಮೊದಲು ಸುಸು ಮಾಡಿದ್ದು ಯಾರು ಗೊತ್ತಾ..?

URGENT ಆದ್ರೆ ಎಲ್ಲರೂ ಸುಸು ಮಾಡೋಕೆ ಜಾಗ ಹುಡುಕುತ್ತೇವೆ. ನಮ್ಮವರಂತೂ ಕೇಳೋದೇ ಬೇಡ. ರಸ್ತೆಯಲ್ಲಿಯೇ ಫುಲ್ ಟ್ರಾಫಿಕ್ ಜಾಮ್ ಆಗಿ ನಿಂತುಕೊಂಡಿದ್ದರೂ ಬದಿಯಲ್ಲಿ ನಿಂತ್ಕೊಂಡು ಮಾಡಿಬಿಡುತ್ತಾರೆ. ಇದಕ್ಕೆ ಸಣ್ಣ, ದೊಡ್ಡ ವ್ಯಕ್ತಿಗಳು ಅಂತ ಏನು ಇಲ್ಲ, ಪ್ರಕೃತಿಯ ಕರೆ ಬಂದರೆ ಯಾರಿಗೂ ತಡಿಯೋಕೆ ಆಗಲ್ಲ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ, ಎಲ್ಲಾ ಬಿಟ್ಟು ಚಂದ್ರನ ಮೇಲೆ ಸುಸು ಮಾಡಿದ ಮನುಷ್ಯನ ಬಗ್ಗೆ ನಿಮಗೆ ಗೊತ್ತಾ. ಫಸ್ಟ್ ಆಫ್ ಆಲ್ ಅದು ಹೇಗೆ ಸಾಧ್ಯ ಆಯ್ತು? ವಿಚಾರ ಬಹಳ ಸಿಲ್ಲಿ ಅನಿಸಿದರೂ ಇದರ ಕಹಾನಿ ಬಹಳ ಇಂಟರೆಸ್ಟಿಂಗ್ ಆಗಿದೆ.. ಹೀಗಾಗಿ ಕೊನೆಯವರೆಗೂ ಓದಿ..

ಸ್ನೇಹಿತರೆ..ಭೂಮಿ ಮೇಲೆ ಮನುಷ್ಯರು ಇದ್ದೇವೆ. ಒಬ್ಬರ ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಅದೇ ಕಾರಣಕ್ಕೆ ಎರಡು ಮಹಾಯುದ್ಧ ಬೇರೆ ಆಗೋಯ್ತು. ಒಬ್ಬರನ್ನೊಬ್ಬರು ಸಾಯಿಸಿಕೊಂಡಿದ್ದೂ ಆಯಿತು. ಎರಡು ಮಹಾಯುದ್ಧ ಆದಮೇಲೆ ಸುಮ್ನೆ ಈತರ ಒಬ್ಬರನ್ನೊಬ್ಬರು ಸಾಯಿಸಿಕೊಂಡು ಹೋಗೋದು ಪ್ರಯೋಜನ ಇಲ್ಲ ಅಂತ ಮನುಷ್ಯನ ಮೆದುಳಿಗೆ ಹೊಳೀತು. ಹಾಗಾಗಿ ವಿಶ್ವಸಂಸ್ಥೆ ಅಂತ ಮಾಡಿಕೊಂಡ್ವಿ. ಹಾಗಾಗಿ ಇದುವರೆಗೂ ಮೂರನೇ ಮಹಾಯುದ್ಧ ಆಗಿಲ್ಲ. ಆದ್ರೆ ಬೇರೆ ತರಹದ ಯುದ್ಧ ಅಥವಾ ಪೈಪೋಟಿ ಖಂಡಿತ ನಡೆದುಕೊಂಡೇ ಬಂದಿದೆ.

ಅದು 1950ರ ಸಮಯ. ಆಗ ಜಗತ್ತಲ್ಲಿ ಎರಡು ಪ್ರಬಲ ಶಕ್ತಿಗಳು. ಒಂದು ಬಂಡವಾಳಶಾಹಿ ದೇಶ ಅಮೆರಿಕ ಮತ್ತೊಂದು ಕಮ್ಯುನಿಸ್ಟ್ ಒಕ್ಕೂಟವಾದ ಸೋವಿಯತ್ ಯೂನಿಯನ್.. ಸೋವಿಯತ್ ಯೂನಿಯನ್ ಅಂದರೆ ಈಗಿನ ರಷ್ಯಾ ಅಂತ ಅಂದುಕೊಳ್ಳಿ ಸಾಕು. ಇವೆರಡರ ಮಧ್ಯೆ ಆಗ ಬಹಳ ಕಾಂಪಿಟೇಷನ್. ಯುದ್ಧ ಮಾಡಲ್ಲ ಅಂತ ನಿರ್ಧಾರ ಮಾಡಿ ಆಗಿತ್ತಲ್ಲಾ? ಸೋ ಯುದ್ಧ ಒಂದು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಲ್ಲೂ ಎರಡು ದೇಶಗಳ ಮಧ್ಯೆ ಭಯಂಕರ ಸ್ಪರ್ಧೆ. ತಾನು ಮೊದಲು ಮಾಡಬೇಕು, ತಾನು ಮೊದಲು ಮಾಡಬೇಕು ಅನ್ನೋ ಮಿಂಚಿನ ಓಟ. ಅದೇ ಸಂದರ್ಭದಲ್ಲಿ ರಷ್ಯಾ ಒಂದು ಭಯಂಕರ ಕೆಲಸ ಮಾಡಿತ್ತು.

1961, ಅಂತರಿಕ್ಷಕ್ಕೆ ಮಾನವ ಸಹಿತ ಜಿಗಿದ ರಷ್ಯಾ!
ಸಾವಿರದ 1961ರಲ್ಲಿ ರಷ್ಯಾ ಬಾಹ್ಯಾಕಾಶಕ್ಕೆ ಮಾನವನನ್ನ ಕಳಿಸಿ ಬಿಟ್ಟಿತ್ತು. ಯೂರಿ ಗಗಾರಿನ್ ಈ ಮೂಲಕ ಬಾಹ್ಯಾಕಾಶಕ್ಕೆ ಹೋದ ಮೊದಲ ಮಾನವ ಎನಿಸಿಕೊಂಡರು. ಇದನ್ನು ಕಂಡು ಅಮೆರಿಕಕ್ಕೆ ಉರಿಯ ಬಾರದ ಜಾಗದಲ್ಲೆಲ್ಲ ಉರಿ ಹತ್ತಿಕೊಳ್ತು. ತಡಿಯಪ್ಪ ರಷ್ಯಾ ಮಾಮ, ನಮ್ಮತ್ರನೂ ಆಗುತ್ತೆ ಅಂತಾ ಇಪ್ಪತ್ಮೂರೇ ದಿನಗಳ ಅಂತರದಲ್ಲಿ ತಾನೂ ಕೂಡ ಬಾಹ್ಯಾಕಾಶಕ್ಕೆ ಮಾನವನನ್ನ ಕಳಿಸ್ತು. ಅಲೆನ್ ಶೆಫರ್ಡ್ ಈ ಮೂಲಕ ಸ್ಪೇಸ್ ಗೆ ಹೋದ ಎರಡನೇ ಮಾನವ ಎನಿಸಿಕೊಂಡರು.

ಆದರೆ ಸೋವಿಯತ್ ರಷ್ಯಾ ಅಮೆರಿಕದ ಕಡೆ ನೋಡಿ ಪೆಕಪೆಕಾ ಅಂತ ನಕ್ಕಿತ್ತು. ಡುಬಾಕ್ ನನ್ ಮಕ್ಳಾ.. ಫಸ್ಟ್ ಯಾವತ್ತೂ ಫಸ್ಟೇ. ನಾವು ಮಾಡಿದ್ಮೇಲೆ ನೀವು ಮಾಡಿದ್ರೆ ಏನು ಸುಖ ಅಂತ ಚೇಡಿಸಿಬಿಟ್ಟಿತ್ತು. ರಷ್ಯಾದ ಈ ಕುಹಕ ಅಮೆರಿಕವನ್ನ ಇನ್ನಿಲ್ಲದಂತೆ ಕೆಣಕಿ ಬಿಟ್ಟಿತು. ಮಾನವ ಕುಲದಲ್ಲಿ ಯಾರೂ ಯೋಚನೆ ಮಾಡಿರದ ಸಾಹಸ ಮಾಡಲು ಅಮೆರಿಕ ಮುಂದಾಯಿತು. ಬರೀ ಸ್ಪೇಸ್ ಯಾಕೆ, ನಾವು ಚಂದ್ರನ ಮೇಲೆಯೇ ಕಾಲಿಡುತ್ತೇವೆ ಅಂತ ರೊಚ್ಚಿಗೆದ್ದು ಪ್ಲಾನ್ ಮಾಡಿತು.

16 ಜುಲೈ 1969! ಅಪೋಲೋ 11ರ ಉಡಾವಣೆ!
ಎಕ್ಸಾಕ್ಲಿ 50 ವರ್ಷಗಳ ಹಿಂದೆ… 16 ಜುಲೈ 1969 ರಂದು ಅಮೆರಿಕ ಅಪೋಲೋ 11 ಗಗನ್ ನೌಕೆಯನ್ನು ಚಂದ್ರನತ್ತ ಉಡಾವಣೆ ಮಾಡಿತು. ಜಗತ್ತನ್ನ ಬೆಚ್ಚಿ ಬೀಳಿಸಿದ್ದು ಏನು ಅಂದ್ರೆ, ಈ ಬಾರಿ ಗಗನನೌಕೆ ಯಲ್ಲಿ ಮೂವರು ಮಾನವರಿದ್ದರು. ಕಮಾಂಡರ್ ನೀಲ್ ಆರ್ಮ್ ಸ್ಟ್ರಾಂಗ್. ಲೂನಾರ್ ಮಾಡ್ಯೂಲ್ ಪೈಲೆಟ್ ಬಝ್ ಎಲ್ಡ್ರಿನ್, ಕಮಾಂಡ್ ಮಾಡ್ಯೂಲ್ ಪೈಲೆಟ್ ಮೈಕೆಲ್ ಕಾಲಿನ್ಸ್. ಈ ಮೂವರನ್ನ ಹೊತ್ತ ಅಪೋಲೋ 11 ಗಗನನೌಕೆ ಅಮೆರಿಕದ ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್ ನಿಂದ ಚಂದ್ರನತ್ತ ಹಾರಿತ್ತು. ಇದರ ರಾಕೆಟ್ನ ಹೆಸರಾಗಿತ್ತು ಸ್ಯಾಟರ್ನ್-5. ಅಂದ್ರೆ ಶನಿ ಅಂತ. ಚಂದ್ರನತ್ತ ಹೋಗುವ ರಾಕೆಟ್ ಗೆ ಶನಿ ಅಂತ ಯಾಕೆ ಹೆಸರಿಟ್ಟಿದ್ರೋ ಗೊತ್ತಿಲ್ಲ. ಸ್ಯಾಟಲೈಟ್ ರಾಕೆಟ್ನಲ್ಲಿ ಒಟ್ಟು ಮೂರು ಹಂತ ಇತ್ತು. ಚಂದ್ರನ ಹತ್ತಿರ ಹತ್ತಿರ ತಲುಪಿದಾಗ ರಾಕೆಟ್ ತನ್ನ ಕೆಲಸ ಮುಗಿಸಿ ಕಳಚಿಕೊಳ್ತು. ಈಗ ಉಳಿದಿದ್ದು ಅಪೋಲೋ ಗಗನನೌಕೆ ಮಾತ್ರ. ಚಂದಿರನಿಗೆ ಇನ್ನಷ್ಟು ಹತ್ತಿರ ಹೋದ ಬಳಿಕ ಅಪೋಲೋ ಗಗನನೌಕೆ ಕೂಡ ಎರಡು ಭಾಗ ಆಯ್ತು. ಒಂದನೇದು ಕಮಾಂಡ್ ಮಾಡ್ಯೂಲ್ ಕೊಲಂಬಿಯ. ಚಂದ್ರನ ಸುತ್ತ ರೌಂಡ್ ಹೊಡಿತಾ ಇರೋದು ಇದರ ಕೆಲಸವಾಗಿತ್ತು. ಇದರಲ್ಲಿ ಇದ್ದರು ಮೈಕೆಲ್ ಕಾಲಿನ್ಸ್. ಇನ್ನೊಂದು ಲೂನಾರ್ ಮಾಡ್ಯೂಲ್ ಈಗಲ್. ಇದು ಚಂದ್ರನ ಮೇಲೆ ಹೋಗಿ ಇಳಿಯುವ ಮಾಡ್ಯೂಲ್ ಆಗಿತ್ತು. ಇದರಲ್ಲಿ ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಬಝ್ ಎಲ್ಡ್ರಿನ್… ಈ ಇಬ್ಬರು ಗಗನಯಾತ್ರಿಗಳಿದ್ದರು.

20 ಜುಲೈ 1969. ಇತಿಹಾಸ ಸೃಷ್ಟಿ!
ಲಾಂಚ್ ಆದ ನಾಲ್ಕೇ ದಿನಕ್ಕೆ ಅಪೋಲೋ 11 ಚಂದ್ರನನ್ನ ತಲುಪಿತ್ತು. ಲೂನಾರ್ ಮಾಡ್ಯೂಲ್ ಈಗಲ್ ಚಂದ್ರನ ಮೇಲೆ ಬಂದು ಇಳಿದಿತ್ತು. ಸೀನಿಯರ್ ಕ್ರೂ ಆಗಿದ್ದ ನೀಲ್ ಆರ್ಮ್‍ಸ್ಟ್ರಾಂಗ್, ಮಾಡ್ಯೂಲ್‍ನ ಮೆಟ್ಟಿಲುಗಳಿಂದ ಇಳಿದು ಮೊದಲು ಚಂದ್ರನ ಮೇಲೆ ಕಾಲಿಟ್ಟರು. ಮಾನವಕುಲದ ಅತಿದೊಡ್ಡ ಇತಿಹಾಸವನ್ನು ಬರೆದುಬಿಟ್ಟರು. ಆಗ ಬಝ್ ಎಲ್ಡ್ರಿನ್ ಲೂನಾರ್ ಮಾಡ್ಯೂಲ್‍ನ ಕಿಟಕಿಯಲ್ಲಿ ಕುಳಿತು ನೋಡುತ್ತಿದ್ದರು. ನಂತರ ನಡೆದಿದ್ದು ಮತ್ತೊಂದು ದೊಡ್ಡ ವಿಚಿತ್ರ. ಅದನ್ನ ಸಂದರ್ಶನವೊಂದರಲ್ಲಿ ಬಝ್ ಎಲ್ಡ್ರಿನ್ ಸ್ವತಃ ಹೇಳಿದ್ದಾರೆ ಕೇಳಿ.

‘ನಾನು ಒಳಗೆ ಕುಳಿತುಕೊಂಡು ನೋಡುತ್ತಿದ್ದೆ. ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಇಳಿದು ಆಗಲೇ ಇಪ್ಪತ್ತು ನಿಮಿಷ ಕಳೆದಿತ್ತು. ಅವರು ನಿರಂತರವಾಗಿ ಸ್ಯಾಂಪಲ್ ಗಳನ್ನು ಸಂಗ್ರಹ ಮಾಡುತ್ತಿದ್ದರು. ಆಗ ಕಡೆಗೆ ನಾನು ಕೂಡ ಕೆಳಗೆ ಇಳಿದೆ. ನನಗೆ ವಿಪರೀತ ಜೋರಾಗಿ ಸುಸು ಬರುತ್ತಿತ್ತು. ನಮ್ಮ ಸೊಂಟಕ್ಕೆ ಒಂದು ಬ್ಯಾಗನ್ನ ಕಟ್ಟಿದ್ದರು. ಆದರೆ ಹೆಸರು ಯುಸಿಡಿ. ಅಂದರೆ ಯೂರಿನ್ ಕಲೆಕ್ಷನ್ ಡಿವೈಸ್. ಬಾಹ್ಯಾಕಾಶದಲ್ಲಿ ನೌಕೆಯಿಂದ ಹೊರಗಿದ್ದಾಗ ಪ್ಯಾಂಟ್ ಬಿಚ್ಚುವಂತಿಲ್ಲ. ಹಾಗಾಗಿ ಎಲ್ಲವೂ ಈ ಬ್ಯಾಗಿನಲ್ಲಿ ಆಗಬೇಕಿತ್ತು. ನನಗೆ ತಡೆಯಲಾಗದೆ ಸುಸು ಮಾಡಿಬಿಟ್ಟೆ.’
-ಬಝ್ ಎಲ್ಡ್ರಿನ್, ಲೂನಾರ್ ಮಾಡ್ಯೂಲ್ ಪೈಲಟ್

ಈ ರೀತಿ ಚಂದ್ರನ ಮೇಲೆ ಕಾಲಿಟ್ಟ ಮೊದಲಿಗ ನೀಲ್ ಆರ್ಮ್‍ಸ್ಟ್ರಾಂಗ್ ಆದರೂ, ಮೊದಲು ಸುಸು ಮಾಡಿದ ವ್ಯಕ್ತಿ ಮಾತ್ರ ಬಝ್ ಎಲ್ಡ್ರಿನ್ ಆದರು. ಇಲ್ಲಿ ಬಝ್ ಎಲ್ಡ್ರಿನ್ ಮಾಡಿದ ಸುಸು ಚಂದ್ರನ ಮೇಲೆ ಬಿದ್ದಿಲ್ಲ. ಆದರೆ ಚಂದ್ರನ ಮೇಲೆ ನಿಂತುಕೊಂಡು ಮೂತ್ರ ವಿಸರ್ಜಿಸಿದ ಇತಿಹಾಸವನ್ನಂತೂ ಅವರು ಸೃಷ್ಟಿ ಮಾಡಿದರು. ಎಂತೆಂತಹ ವಿಚಿತ್ರ ಇತಿಹಾಸಗಳು ಸೃಷ್ಟಿಯಾಗುತ್ತವೆ ನೋಡಿ.

Contact Us for Advertisement

Leave a Reply