43 ಸಚಿವರ ಪ್ರಮಾಣ ವಚನ..ಕಂಪ್ಲೀಟ್ ಡೀಟೈಲ್ಸ್​ ಇಲ್ಲಿದೆ ನೋಡಿ…

masthmagaa.com:

ಕೊರೋನಾ ನಿರ್ವಹಣೆ, ಬೆಲೆ ಏರಿಕೆ ವಿರುದ್ಧ ಟೀಕೆಗಳು ಜಾಸ್ತಿಯಾಗ್ತಿದ್ದಂತೆ, ಕೇಂದ್ರ ಸಚಿವ ಸಂಪುಟಕ್ಕೆ ಪ್ರಧಾನಿ ಮೋದಿ ಮೇಜರ್​​ ಆಪರೇಷನ್ ಮಾಡಿದ್ದಾರೆ. ದೊಡ್ಡ ದೊಡ್ಡ ತಲೆಗಳನ್ನೇ ಸಂಪುಟದಿಂದ ಕಿತ್ತೆಸೆದು ಹೊಸ ಮುಖಗಳಿಗೆ ಚಾನ್ಸ್ ಕೊಟ್ಟಿದ್ದಾರೆ. ಒಟ್ಟು 43 ಮಂದಿ ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ಆರೋಗ್ಯ ಸಚಿವರಾಗಿದ್ದ ಡಾ.ಹರ್ಷವರ್ಧನ್​​, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್​, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್​​​, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್, ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ಬಬುಲ್ ಸುಪ್ರಿಯೋ, ಕರ್ನಾಟಕದ ಸದಾನಂದ ಗೌಡ ಸೇರಿದಂತೆ 12 ಮಂದಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಲ್ಲಿ ಡಾ. ಹರ್ಷವರ್ಧನ್ ಕೊರೋನಾ 2ನೇ ಅಲೆ ತಡೆಯುವಲ್ಲಿ, ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಲ್ಲಿ ವಿಫಲರಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿದ್ವು. ಅದೇ ರೀತಿ ಕೊರೋನಾ ಮೊದಲ ಅಲೆ ಸಮಯದಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ಕೂಡಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇನ್ನು ಪ್ರಧಾನಿ ಮೋದಿಯವರ ಹೊಸ ಸಂಪುಟದಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ ನೀಡಲಾಗಿದೆ. ಶೋಭಾ ಕರಂದ್ಲಾಜೆ, ಎ.ನಾರಾಯಣ ಸ್ವಾಮಿ, ರಾಜೀವ್ ಚಂದ್ರಶೇಖರ್, ಭಗವಂತ್ ಖೂಬಾಗೂ ಸಚಿವ ಸ್ಥಾನ ದಕ್ಕಿದೆ. ಆದ್ರೆ ನಾಲ್ವರನ್ನು ರಾಜ್ಯಖಾತೆ ಸಚಿವರನ್ನಾಗಿ ಮಾಡಲಾಗಿದೆ. ಇನ್ನು ಈಗಾಗಲೇ ಸಚಿವರಾಗಿರೋ ಪ್ರಹ್ಲಾದ್ ಜೋಷಿ ಕೂಡ ಸಚಿವರಾಗಿ ಮುಂದುವರಿದಿದ್ದಾರೆ. ಈ ಮೂಲಕ ರಾಜ್ಯದಿಂದ ಕೇಂದ್ರ ಸಂಪುಟದಲ್ಲಿ ಐವರಿಗೆ ಸ್ಥಾನ ಸಿಕ್ಕಂತಾಗಿದೆ.

ಇವರು ಬಿಟ್ರೆ ಪ್ರಮುಖವಾಗಿ ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೊನೋವಾಲ್​​​ ಸೇರಿದಂತೆ ಒಟ್ಟು 43 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ರಾಜ್ಯಖಾತೆಗಳನ್ನು ನೀಡಲಾಗಿದೆ. ಈ ಮೂಲಕ ಈಗಾಗಲೇ ರಾಜ್ಯಖಾತೆಯಲ್ಲಿ ಸಚಿವರಾಗಿರುವವರಿಗೆ ಸಚಿವರಾಗಿ ಭಡ್ತಿ ನೀಡುವ ಸಾಧ್ಯತೆ ಕೂಡ ಇದೆ. ಪ್ರಮಾಣ ವಚನ ಸ್ವೀಕರಿಸಿದ 43 ಮಂದಿ ಪೈಕಿ, 13 ಮಂದಿ ವಕೀಲರು, 6 ಮಂದಿ ವೈದ್ಯರು, ಐವರು ಎಂಜಿನಿಯರ್​ಗಳು, 7 ಮಂದಿ ಸಿವಿಲ್ ಸೇವೆ ಸಲ್ಲಿಸಿರುವವರು, 7 ಮಂದಿ ರಿಸರ್ಚ್ ಡಿಗ್ರಿ ಮಾಡಿದವರು ಮತ್ತು ಬ್ಯುಸಿನೆಸ್​ ವಿಚಾರದಲ್ಲಿ ಪದವಿ ಪಡೆದ ಮೂವರಿದ್ದಾರೆ. 9 ರಾಜ್ಯಗಳ 11 ಮಂದಿ ಮಹಿಳೆಯರು ಕೂಡ ಇವರಲ್ಲಿ ಸೇರಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಹೊಸ ಸಚಿವರಲ್ಲಿ 14 ಮಂದಿ 50 ವರ್ಷ ಒಳಗಿನವರಾಗಿದ್ದಾರೆ. ಜಾತಿ, ಪ್ರದೇಶ, ಅನುಭವದ ಆಧಾರದ ಮೇಲೆ ಸಂಪುಟಕ್ಕೆ ಸರ್ಜರಿ ಮಾಡಲಾಗಿದೆ. ಇದಕ್ಕೂ ಮುನ್ನ ಬಿಜೆಪಿ ನಾಯಕರು, ಸಚಿವರು ಮತ್ತು ಸಂಭಾವ್ಯ ಸಚಿವರ ಜೊತೆ ಪ್ರಧಾನಿ ಮೋದಿ ಲೋಕ ಕಲ್ಯಾಣ ಮಾರ್ಗ್​​​ನಲ್ಲಿ ಸಭೆ ನಡೆಸಿದ್ರು.

-masthmagaa.com

Contact Us for Advertisement

Leave a Reply