1950ರ ಗಣರಾಜ್ಯೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ..? ಗೆಸ್ಟ್​ ಯಾರು..? ಎಲ್ಲಿ ನಡೆದಿತ್ತು..?

ನಮ್ಮ ದೇಶ ಜನವರಿ 26, 1950ರಂದು ಗಣರಾಜ್ಯವಾಯಿತು. ಮೊದಲ ಗಣರಾಜ್ಯೋತ್ಸವದ ಮೆರವಣಿಗೆ ಕೂಡ ವಿಜೃಂಭಣೆಯಿಂದ ನಡೆದಿತ್ತು. 1950ರಲ್ಲಿ ಮೊದಲ ಗಣರಾಜ್ಯ ದಿನದ  ಮೆರವಣಿಗೆಯ ನಂತರ ಭಾರತೀಯ ವಾಯುಪಡೆಯ 100ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿದ್ವು. ಗಣರಾಜ್ಯೋತ್ಸವದ ಮೊದಲ ಮೆರವಣಿಗೆ ಬಹಳ ವಿಶೇಷವಾಗಿತ್ತು. ಮೊದಲ ಮೆರವಣಿಗೆಯಲ್ಲಿ ಹಾರ್ವರ್ಡ್, ಡಕೋಟಾ, ಲಿಬರೇಟರ್ಸ್, ಟೆಂಪೆಸ್ಟ್, ಸ್ಪಿಟ್‌ಫೈರ್ ಮತ್ತು ಜೆಟ್‌ಗಳು ಭಾಗಿಯಾಗಿದ್ದವು. ಅದೇ ದಿನ ರಾಯಲ್ ಏರ್ ಫೋರ್ಸ್‌ನಿಂದ ರಾಯಲ್ ಎಂಬ ಪದವನ್ನು ಕೈಬಿಡಲಾಯಿತು. ಮತ್ತು ನಮ್ಮ ಹೆಮ್ಮೆಯ ವಾಯುಪಡೆಗೆ ಭಾರತೀಯ ವಾಯುಪಡೆ ಎಂದು ಹೆಸರಿಡಲಾಯ್ತು.

ಮೊದಲ ಗಣತಂತ್ರದ ಮುಖ್ಯ ಅತಿಥಿ ಯಾರು..?

ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮೊದಲ ಗಣರಾಜ್ಯೋತ್ಸವದ ಹಿಂದಿನ ದಿನ ಆಲ್​ ಇಂಡಿಯಾ ರೇಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಆಗಿನ ಇಂಡೋನೇಷ್ಯಾದ ಅಧ್ಯಕ್ಷ ಸುಕರ್ನೊ ಮೊದಲ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.

ಪರಮವೀರಚಕ್ರ ವಿಜೇತರಿಗೆ ಗೌರವ

ಜನವರಿ 26, 1950 ರಂದು, ಮೊದಲ ಗಣರಾಜ್ಯೋತ್ಸವದ ದಿನ ಜಮ್ಮು ಕಾಶ್ಮೀರ ಕಾರ್ಯಾಚರಣೆಯಲ್ಲಿ ಶೌರ್ಯ ಪ್ರದರ್ಶಿಸಿದ್ದ ನಾಲ್ವರು ಯೋಧರನ್ನು ಗೌರವಿಸಲಾಯ್ತು. ಇವರಲ್ಲಿ ಮೇಜರ್ ಸೋಮನಾಥ್ ಶರ್ಮಾ ಕೂಡ ಒಬ್ಬರು. ಮೊದಲ ಪರಮವೀರಚಕ್ರ ಪ್ರಶಸ್ತಿ ಪಡೆದ ಧೀರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇನ್ನು ಜಮ್ಮು ಕಾಶ್ಮೀರ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ನಾಯಕ್ ಜದುನಾಥ್ ಸಿಂಗ್ ಅವರಿಗೆ ಮರಣೋತ್ತರ ಪರಮವೀರ ಚಕ್ರ ಪ್ರಶಸ್ತಿ ನೀಡಲಾಯ್ತು. ಇನ್ನು ಕ್ಯಾಪ್ಟನ್ ರಾಮ್ ರಘೋಬಾ ರಾಣೆ ಮತ್ತು ಹವಿಲ್ದಾರ್ ಕರಮ್ ಸಿಂಗ್ ವೈಯಕ್ತಿಕವಾಗಿ ಪರಮವೀರ ಚಕ್ರ ಪ್ರಶಸ್ತಿಗಳನ್ನು ಪಡೆದುಕೊಂಡರು.

ರಾಜ್‌ಪಾತ್‌ನಲ್ಲಿ ನಡೆಯಲಿಲ್ಲ ಮೊದಲ ಗಣರಾಜ್ಯೋತ್ಸವ ಪರೇಡ್​..!

ಈಗ ಗಣರಾಜ್ಯೋತ್ಸವ ಪರೇಡ್ ಅಂದಕೂಡಲೇ ದೆಹಲಿಯ ರಾಜ್​ಪಥ್​ ನೆನಪಾಗುತ್ತೆ. ಆದ್ರೆ ಮೊದಲ ಗಣರಾಜ್ಯೋತ್ಸವ ಸಂಭ್ರಮ ರಾಜ್​ಪಥ್​ನಲ್ಲಿ ನಡೆಯಲಿಲ್ಲ. ಬದಲಾಗಿ ಇರ್ವಿನ್ ಆಂಫಿಥಿಯೇಟರ್‌ನಲ್ಲಿ ನಡೆಯಿತು. ಈಗ ಈ ಸ್ಥಳದಲ್ಲಿ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣವಿದೆ. ಈ ಮೊದಲ ಮೆರವಣಿಗೆಯನ್ನು ವೀಕ್ಷಿಸಲು ಸುಮಾರು 15,000 ಜನರು ನೆರೆದಿದ್ದರು. ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮತ್ತು ಇಂಡೋನೇಷ್ಯಾ ಅಧ್ಯಕ್ಷರು ಕೋಚ್‌ನಲ್ಲಿ ಸವಾರಿ ಮಾಡುವ ಮೂಲಕ ಆಂಫಿಥಿಯೇಟರ್‌ಗೆ ಆಗಮಿಸಿದ್ದರು.

Contact Us for Advertisement

Leave a Reply