ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್ ಸಂಘಟನೆಯ ಲೀಡರ್ ಸಾವು!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮತ್ತು ಹಕ್ಕಾನಿ ಸಂಘಟನೆ ನಡುವೆ ಮತ್ತೆ ಗಲಾಟೆಯಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ನಿನ್ನೆ ಕಾಬೂಲ್​​ನ ಆಸ್ಪತ್ರೆ ಬಳಿ 2 ಆತ್ಮಾಹುತಿ ದಾಳಿ ಮತ್ತು ಫೈರಿಂಗ್ ನಡೆದಿದಿತ್ತು. ಅದ್ರಲ್ಲಿ ಒಟ್ಟು 25 ಮಂದಿ ಪ್ರಾಣ ಕಳ್ಕೊಂಡಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ರು. ಈ ದಾಳಿಯಲ್ಲಿ ಹಕ್ಕಾನಿ ನೆಟ್ವರ್ಕ್​​ನ ಪ್ರಮುಖ ನಾಯಕನಾಗಿದ್ದ ಹಮದುಲ್ಲಾ ಮುಖಲಿಸ್ ಕೂಡ ಬಲಿಯಾಗಿದ್ದಾನೆ. ಹಕ್ಕಾನಿ ನೆಟ್ವರ್ಕ್​ ಅನ್ನೋ ಉಗ್ರ ಸಂಘಟನೆಯ ಮುಖ್ಯಸ್ಥ ಮತ್ತು ಅಫ್ಘಾನಿಸ್ತಾನದ ಗೃಹಸಚಿವರೂ ಆಗಿರೋ ಸಿರಾಜುದ್ದೀನ್ ಹಕ್ಕಾನಿಗೆ ಈ ಹಮದುಲ್ಲಾ ಮುಖಲಿಸ್​​​ ಮುಖ್ಯ ಸೈನ್ಯ ಸಲಹೆಗಾರನಾಗಿದ್ದ. ಜೊತೆಗೆ ಕಾಬೂಲ್​​ ಪ್ರಾಂತ್ಯಕ್ಕೆ ಕಮಾಂಡರ್ ಕೂಡ ಆಗಿದ್ದ. ಇತ್ತೀಚೆಗೆ ತಾಲಿಬಾನಿಗಳು ಕಾಬೂಲ್​​ಗೆ ವಶಕ್ಕೆ ಪಡೆದಾಗ ಒಂದು ಗುಂಪು ಕಾಬೂಲ್​ನಲ್ಲಿದ್ದ ಅಶ್ರಫ್ ಘನಿ ಅರಮನೆಗೆ ಹೋಗಿ ಪೋಸ್ ಕೊಟ್ಟಿತ್ತು. ಇದ್ರಲ್ಲಿ ಒಬ್ಬ ವ್ಯಕ್ತಿ ಅಧ್ಯಕ್ಷರ ಕುರ್ಚಿಯಲ್ಲಿ ಕೂಡ ಕುಳಿತಿದ್ದ. ಅವನೇ ಈಗ ಹತ್ಯೆಯಾಗಿರೋ ಹಮದುಲ್ಲಾ ಮುಖಲಿಸ್ ಅಂತ ಗೊತ್ತಾಗಿದೆ. ಈ ಹಮದುಲ್ಲಾ ಮುಖಲಿಸ್​​ ತಾಲಿಬಾನ್​ ಸ್ಪೆಷಲ್ ಫೋರ್ಸ್​ ಬದ್ರಿ ಬ್ರಿಗೇಡ್​​ನ ಕಮಾಂಡರ್ ಕೂಡ ಆಗಿದ್ದ. ಇದೇ ಪಡೆಗೆ ಕಾಬೂಲ್ ರಕ್ಷಣೆಯ ಜವಾಬ್ದಾರಿಯನ್ನು ಹೊರಿಸಲಾಗಿತ್ತು. ಇದಕ್ಕೂ ಮುನ್ನ ಮುಖಲಿಸ್​​​​ನನ್ನು ಪಕ್ತಿಕಾ ಮತ್ತು ಖೋಶ್ತ್​​​ ಪ್ರಾಂತ್ಯದ ಗವರ್ನರ್ ಆಗಿ ನೇಮಿಸಲಾಗಿತ್ತು. ಇದ್ರಿಂದ ಹಕ್ಕಾನಿ ನೆಟ್ವರ್ಕ್​ ಗ್ರೂಪ್​​​​ ಮತ್ತು ತಾಲಿಬಾನ್​​ಗೆ ದೊಡ್ಡ ಹೊಡೆತ ಸಿಕ್ಕಂತಾಗಿದೆ. ಈ ಹಕ್ಕಾನಿ ನೆಟ್ವರ್ಕ್​​​ 2015ರಲ್ಲಿ ತಾಲಿಬಾನಿಗಳ ಜೊತೆ ಮೈತ್ರಿ ಮಾಡ್ಕೊಂಡು, ಅಮೆರಿಕ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿತ್ತು. ಅಂದಹಾಗೆ ಈ ಹಕ್ಕಾನಿ ಗ್ರೂಪ್​​​​ ಪಾಕಿಸ್ತಾನ ಮೂಲದಿಂದ ಆಪರೇಟ್ ಮಾಡೋ ಸಂಘಟನೆಯಾಗಿದ್ದು, ಇತ್ತೀಚೆಗೆ ತಾಲಿಬಾನ್ ಸರ್ಕಾರದಲ್ಲಿ ಈ ಸಂಘಟನೆಯ ಸದಸ್ಯರಿಗೆ ದೊಡ್ಡ ದೊಡ್ಡ ಸ್ಥಾನಗಳನ್ನು ಕೊಡಿಸಿದ್ದೇ ಪಾಕಿಸ್ತಾನ ಅಂತ ಸುದ್ದಿಯಾಗಿತ್ತು.

ಇನ್ನು ನಿನ್ನೆ ನಡೆದ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದ್ರೆ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಟೇಕೋವರ್ ಮಾಡಿದ ಬಳಿಕ ಐಎಸ್​ ಉಗ್ರರ ಹಾವಳಿ ಜಾಸ್ತಿಯಾಗ್ತಿದೆ. ಈ ಹಿಂದೆ ನಡೆದ ಇಂಥದ್ದೇ ದಾಳಿಗಳ ಹೊಣೆಯನ್ನು ಇದೇ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಹೀಗಾಗಿ ಈ ಬಾರಿಯೂ ಇದೇ ಸಂಘಟನೆ ದಾಳಿ ನಡೆಸಿರಬಹುದು ಅಂತ ಹೇಳಲಾಗ್ತಿದೆ.)

ಇನ್ನು ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಹಿದ್​​, ಆತ್ಮಾಹುತಿ ದಾಳಿ ಬೆನ್ನಲ್ಲೇ ಉಗ್ರರ ಒಂದು ಗುಂಪು ಆಸ್ಪತ್ರೆ ಆವರಣ ಪ್ರವೇಶಿಸಲು ಯತ್ನಿಸಿತು. ಆದ್ರೆ ತಾಲಿಬಾನ್ ಸ್ಪೆಷಲ್ ಫೋರ್ಸ್​​ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆ ಆವರಣದೊಳಗೆ ಇಳಿದು 15 ನಿಮಿಷದಲ್ಲಿ ಬಂದೂಕುಧಾರಿಗಳ ಗುಂಪನ್ನು ಹೊಡೆದುರುಳಿಸಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply