ಭಾರತದಲ್ಲಿ ಆಕ್ಸ್​ಫರ್ಡ್ ಲಸಿಕೆಗೆ ಅನುಮತಿ: ಮೈಸೂರಿನಲ್ಲಿ ನಡೆಯುತ್ತಾ ಪ್ರಯೋಗ..?

masthmagaa.com:

ಕೊರೋನಾ ವೈರಸ್​ಗೆ ಆಕ್ಸ್​ಫರ್ಡ್ ಯುನಿವರ್ಸಿಟಿ​ ಮತ್ತು ಅಸ್ಟ್ರಾಝೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ ಲಸಿಕೆಯ 2 ಮತ್ತು 3ನೇ ಹಂತದ ಮಾನವ ಪ್ರಯೋಗ ಭಾರತದಲ್ಲಿ ನಡೆಸಲು ಅನುಮತಿ ಸಿಕ್ಕಿದೆ. ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ಕಂಪನಿಯಾದ ಪುಣೆ ಮೂಲದ ಸಿರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ‘ಕೋವಿಶೀಲ್ಡ್​’ ಲಸಿಕೆಯ ಮಾನವ ಪ್ರಯೋಗ ನಡೆಸಲಿದೆ. ಇದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ‘ಕೋವಿಶೀಲ್ಡ್​’ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಮಾನವ ಪ್ರಯೋಗ ಯಶಸ್ವಿಯಾಗಿದೆ. ಈ ಲಸಿಕೆಯು ಸುರಕ್ಷಿತ ಮತ್ತು ಕೊರೋನಾ ವೈರಸ್​ ವಿರುದ್ಧ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ರೂಪಿಸುತ್ತದೆ ಅಂತ ಸಂಶೋಧಕರು ಈಗಾಗಲೇ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿತ್ತು. ಬ್ರಿಟನ್, ಅಮೆರಿಕ, ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲೂ ಆಕ್ಸ್​ಫರ್ಡ್​ ಲಸಿಕೆಯ ಕೊನೆಯ ಹಂತದ ಮಾನವ ಪ್ರಯೋಗ ನಡೆಯುತ್ತಿದೆ.

ಈಗ ಭಾರತದಲ್ಲೂ ಲಸಿಕೆಯ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ಅನುಮತಿ ಸಿಕ್ಕಿರೋದ್ರಿಂದ ವರ್ಷಾಂತ್ಯದಲ್ಲಿ ಲಸಿಕೆ ಸಿಗುವ ಭರವಸೆ ಮೂಡಿದೆ. ದೇಶದ 17 ಕಡೆ ಈ ಲಸಿಕೆಯ ಮಾನವ ಪ್ರಯೋಗ ನಡೆಸಲು ಸಿರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ಲಾನ್ ಮಾಡಿದೆ. ಮೂಲಗಳ ಪ್ರಕಾರ ದೆಹಲಿಯ ಏಮ್ಸ್, ಮೈಸೂರಿನ ಜೆಎಸ್​ಎಸ್​ ಅಕಾಡೆಮಿ ಆಫ್ ಹೈಯರ್ ಎಡುಕೇಷನ್ ಅಂಡ್ ರಿಸರ್ಚ್​, ಪುಣೆಯ ಬಿ.ಜೆ. ಮೆಡಿಕಲ್ ಕಾಲೇಜು ಸೇರಿದಂತೆ ಪಾಟ್ನಾ, ಚಂಡೀಗಢ, ಗೋರಖ್​ಪುರ, ವಿಶಾಖಪಟ್ಟಣ ಮುಂತಾದ ಕಡೆಗಳಲ್ಲಿ ಲಸಿಕೆಯ ಪ್ರಯೋಗ ನಡೆಯಲಿದೆ. ಇದಕ್ಕಾಗಿ 18 ವರ್ಷ ಮೇಲ್ಪಟ್ಟ ಸುಮಾರು 1,600 ಸ್ವಯಂ ಸೇವಕರನ್ನು ನೋಂದಾಯಿಸಿಕೊಳ್ಳಲಾಗುವುದು ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply