ಹುಂಡೇ, ಪೀಟ್ಸಾ, ಕಿಯಾ, KFC ವಿರುದ್ದ ಭಾರತದಲ್ಲಿ ಭುಗಿಲೆದ್ದ ಆಕ್ರೋಶ!

masthmagaa.com:

ಭಾರತದ ಬದ್ಧವೈರಿ ಪಾಕಿಸ್ತಾನದ ಗ್ರಾಹಕರನ್ನ ಸೆಳೆಯಲು ಅಲ್ಲಿನ ಕಾರು ಕಂಪನಿಗಳಾದ ಹ್ಯುಂಡೈ ಮೋಟಾರ್ಸ್ ಮತ್ತು ಕಿಯಾ ಕಾರ್ಪೊರೇಷನ್​ ಹಾಗೂ ಫಾಸ್ಟ್​ ಫುಡ್​ ರೆಸ್ಟೊರೆಂಟ್​ಗಳಾದ ಕೆಎಫ್​ಸಿ ಮತ್ತು ಪಿಜ್ಜಾ ಹಟ್​ ಮಾಡಿದ ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳಿಗೆ ಭಾರತದಲ್ಲಿ ಭಾರಿ ವಿರೋಧ ಕೇಳಿ ಬಂದಿದೆ. ಬಾಯ್ಕಾಟ್ ಹ್ಯುಂಡೈ, ಬಾಯ್ಕಾಟ್​ ಕಿಯಾ, ಬಾಯ್ಕಾಟ್ ಕೆಎಫ್​ಸಿ, ಬಾಯ್ಕಾಟ್​ ಪಿಜ್ಜಾ ಹಟ್​ ಅನ್ನೋ ಅಭಿಯಾನ ಜೋರಾಗಿ ನಡೀತಿದೆ. ಇದರ ಬೆನ್ನಲ್ಲೇ ಅದೇ ಬ್ರಾಂಡ್​ನ ಭಾರತದ ಕಂಪನಿಗಳು ಒಂದೊಂದಾಗೇ ಕ್ಷಮೆ ಕೇಳಿವೆ. ಹ್ಯುಂಡೈ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿ, ನಾವು ಭಾರತದ ಮಾರ್ಕೆಟ್​ಗೆ ಕಮಿಟ್​ ಆಗಿದ್ದೀವಿ. ಇಲ್ಲಿನ ರಾಷ್ಟ್ರೀಯತೆಗೆ ಗೌರವ ಕೊಡ್ತೀವಿ. ಪಾಕಿಸ್ತಾನದಲ್ಲಿ ಮಾಡಿದ ಪೋಸ್ಟ್​ ನಮ್ಮ ಕಮಿಟ್​​ಮೆಂಟ್​ಗೆ ವಿರುದ್ಧವಾಗಿವೆ. ಇದನ್ನ ನಾವು ಖಂಡಿಸ್ತೀವಿ ಅಂತ ಹೇಳಿತ್ತು. ಆದ್ರೆ ಅದು ಇದು ಅಂತ ಉದ್ದನೆಯ ಹೇಳಿಕೆ ಬಿಡುಗಡೆ ಮಾಡೋ ಬದಲು, ‘ನಮ್ಮನ್ನ ಕ್ಷಮಿಸಿ ಅಂತ ಕೇಳ್ಬೋದಿತ್ತು’ ಅಂತ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಕಿಡಿಕಾರಿದ್ರು. ಇದೀಗ ಕೆಎಫ್​ಸಿ ಮತ್ತು ಪಿಜ್ಜಾ ಹಟ್​​ ಕಂಪನಿಗಳು ಕೂಡ ಕ್ಷಮೆ ಕೇಳಿವೆ. ಕೆಎಫ್​ಸಿ ಇಂಡಿಯಾ ಟ್ವೀಟ್​ ಮಾಡಿ, ಭಾರತದ ಹೊರಗೆ ಕೆಎಫ್​ಸಿ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್​ಗೆ ನಾವು ಕ್ಷಮೆಯಾಚಿಸ್ತೀವಿ. ನಾವು ಭಾರತವನ್ನ ಗೌರವಿಸ್ತೀವಿ ಮತ್ತು ಎಲ್ಲಾ ಭಾರತೀಯರಿಗೆ ಹೆಮ್ಮೆಯಿಂದ ಸೇವೆ ಸಲ್ಲಿಸಲು ಬದ್ಧವಾಗಿದ್ದೀವಿ ಅಂತ ಹೇಳಿದೆ. ಅಂದ್ಹಾಗೆ ಇದೆಲ್ಲಾ ಶುರುವಾಗಿದ್ದು ಫೆಬ್ರವರಿ 5ನೇ ತಾರೀಖು.. ಫೆಬ್ರವರಿ 5ನ್ನ ಪಾಕಿಸ್ತಾನದಲ್ಲಿ ‘ಕಾಶ್ಮೀರ ಸಾಲಿಡಾರಿಟಿ ಡೇ’ ಅಥವಾ ‘ಕಾಶ್ಮೀರ ಒಗ್ಗಟ್ಟಿನ ದಿನ’ ಅಂತ ಸೆಲಬ್ರೇಟ್​ ಮಾಡಲಾಗುತ್ತೆ. ಕಾಶ್ಮೀರವನ್ನ ಸ್ವತಂತ್ರ ಮಾಡೋದು, ಅಲ್ಲಿನ ಪ್ರತ್ಯೇಕತಾವಾದಿಗಳ ಜೊತೆಗೆ ನಾವಿದ್ದೀವಿ ಅನ್ನೋದನ್ನ ತೋರಿಸೋಕೆ ಪಾಕಿಸ್ತಾನ ಈ ದಿನವನ್ನ ಆಚರಿಸುತ್ತೆ. ಇದನ್ನ ಕಾಶ್ಮೀರ್​ ಡೇ ಅಂತಾನೂ ಕರೀತಾರೆ. ಪಾಕಿಸ್ತಾನದಲ್ಲಿ ಆವತ್ತು ನ್ಯಾಷನಲ್​​ ಹಾಲಿಡೇ ಕೂಡ ಹೌದು. ಈ ಹಿನ್ನೆಲೆ ಫೆಬ್ರವರಿ 5ನೇ ತಾರೀಖು ಪಾಕಿಸ್ತಾನದ ಹ್ಯುಂಡೈ ಅಫೀಷಿಯಲ್ ಅನ್ನೋ ಟ್ವಿಟ್ಟರ್​ ಅಕೌಂಟ್​​, ನಾವು ಕಾಶ್ಮೀರದ ಸ್ವಾತಂತ್ರ್ಯಕ್ಕೆ ಸಪೋರ್ಟ್ ಕೊಡಣ ಅಂತ ಟ್ವೀಟ್​ ಮಾಡಿತ್ತು. ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ಸ್ ಬೇರೆ ಬೇರೆ ದೇಶಗಳಲ್ಲಿ ಬ್ರಾಂಚ್​​​ಗಳನ್ನ ಹೊಂದಿದೆ. ಕಿಯಾ ಕಂಪನಿ ಕೂಡ ಈ ಹ್ಯುಂಡೈ ಮೋಟಾರ್ಸ್​ನದ್ದೇ.. ಪಾಕಿಸ್ತಾನದಲ್ಲೂ ಕಿಯಾ ಬ್ರಾಂಚ್​ ಇದೆ. ಫೆಬ್ರವರಿ 5ನೇ ತಾರೀಖು ‘ಕಿಯಾ ಮೋಟಾರ್ಸ್ ಕ್ರಾಸ್​​ರೋಡ್ಸ್ ಹೈದರಾಬಾದ್’​ ಅನ್ನೋ ಪಾಕಿಸ್ತಾನದ ಟ್ವಿಟ್ಟರ್ ಅಕೌಂಟ್​​ನಿಂದ ಟ್ವೀಟ್​ ಮಾಡಿ, ಕಾಶ್ಮೀರ್​ ಸಾಲಿಡಾರಿಟಿ ಡೇಗೆ ಕಿಯಾ ಸಪೋರ್ಟ್​ ಮಾಡಿತ್ತು. ಪಾಕಿಸ್ತಾನದಲ್ಲಿ ಹೈದರಾಬಾದ್​ ಎಲ್ಲಿಂದ ಬಂತು ಅಂತ ಯೋಚ್ನೆ ಮಾಡ್ಬೇಡಿ. ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲೊಂದು ಹೈದರಾಬಾದ್​ ಇದೆ. ಅಲ್ಲಿರೋ ಕಂಪನಿಯ ಅಕೌಂಟ್​ನಿಂದ ಈ ಟ್ವೀಟ್​ ಬಂದಿದೆ. ಇದಾದ್ಮೇಲೆ ಫಾಸ್ಟ್​ ಫುಡ್​ ಅಥವಾ ಕ್ವಿಕ್​ ಸರ್ವಿಸ್​ ರೆಸ್ಟೋರೆಂಟ್​ಗಳಾದ ಕೆಎಫ್​​ಸಿ ಮತ್ತು ಪಿಜ್ಜಾ ಹಟ್​ ಕೂಡ ಇಂಥಾದ್ದೇ ಪೋಸ್ಟ್​ಗಳನ್ನ ಹಾಕಿ, ಕಾಶ್ಮೀರ್​ ಸಾಲಿಡಾರಿಟಿ ಡೇಗೆ ಸಪೋರ್ಟ್ ಮಾಡಿದ್ವು. ಕೆಎಫ್​ಸಿ ಮತ್ತು ಪಿಜ್ಜಾ ಹಟ್​ ಎರಡೂ ಕೂಡ ಅಮೆರಿಕ ಮೂಲದ Yum! Brandsನ ಅಂಗ ಸಂಸ್ಥೆಗಳಾಗಿವೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇವುಗಳ ಬ್ರಾಂಚ್​ ಇವೆ. ಪಾಕಿಸ್ತಾನಕ್ಕಿಂತ ಎಷ್ಟೋ ಪಟ್ಟು ದೊಡ್ಡ ದೇಶವಾಗಿರೋ, ಎಷ್ಟೋ ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರೋ ಭಾರತ ಈ ಕಂಪನಿಗಳಿಗೆ ದೊಡ್ಡ ಮಾರ್ಕೆಟ್​. ಹ್ಯುಂಡೈ ಕಂಪನಿಗೆ ದಕ್ಷಿಣ ಕೊರಿಯಾ ಬಿಟ್ರೆ ಭಾರತವೇ ದೊಡ್ಡ ಮಾರ್ಕೆಟ್​. 2021ರಲ್ಲಿ ಸುಮಾರು 6 ಲಕ್ಷ ಕಾರುಗಳನ್ನ ಸೇಲ್​ ಮಾಡಿದೆ ಹ್ಯುಂಡೈ ಇಂಡಿಯಾ. ಆದ್ರೆ ಪಾಕಿಸ್ತಾನದಲ್ಲಿ ಸುಮಾರು 2 ಲಕ್ಷ ಕಾರು ಸೇಲ್​ ಆಗಿತ್ತು.
ಇನ್ನು ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋಥರ ಭಾರತೀಯರಿಂದ ಭಾರಿ ವಿರೋಧ ಕೇಳಿ ಬಂದ ಬೆನ್ನಲ್ಲೇ ಪಾಕಿಸ್ತಾನದ Kia Motors Crossroads Hyderabad ಪ್ರತ್ಯೇಕತವಾದಿಗಳಿಗೆ ಸಪೋರ್ಟ್ ಮಾಡಿದ್ದ ಟ್ವೀಟ್ ಅನ್ನ ಡಿಲಿಟ್​ ಮಾಡಿದೆ. KFC Pakistan ಮತ್ತು PizzaHutPak ಕೂಡ ತಮ್ಮ ಟ್ವೀಟ್​ ಮತ್ತು ಇನ್​ಸ್ಟಾಗ್ರಾಂ ಪೋಸ್ಟ್​ಗಳನ್ನ​ ಡಿಲಿಟ್​ ಮಾಡಿವೆ. HyundaiPakistanOfficial ಅಕೌಂಟ್​ನ ಟ್ವೀಟ್​ಗಳು ಪ್ರೊಟೆಕ್ಟ್ ಆಗಿರೋದ್ರಿಂದ ಅದು ಮಾಡಿದ ಟ್ವೀಟ್ ಡಿಲಿಟ್​ ಆಗಿದಿಯಾ ಅನ್ನೋದು ಸ್ಪಷ್ಟವಿಲ್ಲ.
ಹ್ಯುಂಡೈ, ಕಿಯಾ, ಕೆಎಫ್​ಸಿ, ಪಿಜ್ಜಾ ಹಟ್​ ಮಾತ್ರವಲ್ಲದೇ Suzuki Pakistan, Isuzu Pakistan ಕೂಡ ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್​​ನಲ್ಲಿ ಕಾಶ್ಮೀರ್​ ಸಾಲಿಡಾರಿಟಿ ಡೇಗೆ ಸಪೋರ್ಟ್ ಮಾಡುವಂತೆ ಪೋಸ್ಟ್​ಗಳನ್ನ ಹಾಕಿದ್ವು. ಸಾಕಷ್ಟು ವಿರೋಧ ಕೇಳಿ ಬಂದ ಬೆನ್ನಲ್ಲಾ ಇವುಗಳು ಕೂಡ ತಮ್ಮ ಪೋಸ್ಟ್ ಅನ್ನ ಡಿಲಿಟ್​ ಮಾಡಿವೆ. ಆದ್ರೆ ಸುಜುಕಿ ಇಂಡಿಯಾದಿಂದ ಇದುವರೆಗೆ ಯಾವ್ದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೊಂದುಕಡೆ ಹಿಂದಿನ ವರ್ಷಗಳಲ್ಲಿ ಬೇರೆ ಬೇರೆ ಕಂಪನಿಗಳು ಫೆಬ್ರವರಿ 5ರಂದು ಮಾಡಿದ ಪೋಸ್ಟ್​ಗಳು ಕೂಡ ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗಿವೆ. ಅದು ಅಟ್ಲಾಸ್​ ಹೋಂಡಾದ್ದಾಗಿರಬಹುದು, ಡೊಮಿನೋಸ್​ ಪಿಜ್ಜಾದ್ದಾಗಿರಬಹುದು, ಇತ್ಯಾದಿ ಇತ್ಯಾದಿ.
ಇನ್ನು ಪಾಕಿಸ್ತಾನದ ಸೋಷಿಯಲ್​ ಮೀಡಿಯಾ ಅಕೌಂಟ್​​ಗಳಲ್ಲಿ ಪೋಸ್ಟ್​ ಡಿಲಿಟ್​ ಆದ್ರೂ, ಭಾರತದ ಕಂಪನಿಗಳು ಸ್ವಾರಿ ಕೇಳಿದ್ರೂ, ಆ ಕಂಪನಿಗಳ ಜಾಗತಿಕ ಸೋಷಿಯಲ್ ಮೀಡಿಯಾ ಹ್ಯಾಂಡಲ್​ಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಂದ್ರೆ ಹ್ಯುಂಡೈ ವರ್ಲ್ಡ್​ವೈಡ್​​ ಅಥವಾ ಕಿಯಾ ವರ್ಲ್ಡ್​ವೈಡ್​ ಅಕೌಂಟ್​​ಗಳಲ್ಲಿ ಕಾಶ್ಮಿರದ ಬಗ್ಗೆ ತಮ್ಮ ನಿಲುವೇನು ಅನ್ನೋದನ್ನ ಸ್ಪಷ್ಟಪಡಿಸಿಲ್ಲ. ಅದನ್ನ ಸ್ಪಷ್ಟಪಡಿಸಿದ್ರೆ ಎಲ್ಲವೂ ಕ್ಲಿಯರ್ ಆಗ್ತಿತ್ತು ಅನ್ನೋದು ಭಾರತೀಯರ ವಾದ. ಭಾರತದ Federation of Automobile Dealers Association ಕೂಡ ಇದೇ ವಾದವನ್ನ ಮುಂದಿಟ್ಟಿದೆ. ಅಲ್ಲದೆ ಹ್ಯುಂಡೈ ಮತ್ತು ಕಿಯಾಗೆ ತಮ್ಮ ನಿಲುವೇನು ಅನ್ನೋದನ್ನ ಸ್ಪಷ್ಟಪಡಿಸುವಂತೆ ನೋಟಿಸ್​ ಕೊಟ್ಟಿದೆ.
ಇದೆಲ್ಲದರ ನಡುವೆ ಫೆಬ್ರವರಿ 5ನೇ ತಾರೀಖು ಪಾಕಿಸ್ತಾನದಲ್ಲಿ ಕಾಶ್ಮೀರ್​ ಸಾಲಿಡಾರಿಟಿ ಡೇ ಆಚರಿಸಿದ್ರೆ, ಇತ್ತ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಫ್ರಾಡ್​ ಡೇ ಅಂತ ಆಚರಿಸಲಾಗಿತ್ತು. ಪಿಒಕೆನ ಬಾಘ್​, ಮೊಂಗ್​ ಮತ್ತು ಹಜಿರಾ ಎಂಬಲ್ಲಿ ಪ್ರತಿಭಟನೆಗಳು ನಡೆದಿದ್ವು. ಮೆರವಣಿಗೆಯಲ್ಲಿ ಭಾಗವಹಿಸಿದ ಕೆಲವರು ಮಾತನಾಡಿ, ಶ್ರೀನಗರದಲ್ಲಿ ಇಸ್ಲಮಾಬಾದ್​ಗಿಂತ ಒಳ್ಳೇ ಫೆಸಿಲಿಟಿ ಇವೆ. ಶ್ರೀನಗರದಲ್ಲಿರೋ ಯುನಿವರ್ಸಿಟಿ ರೀತಿ ಇಸ್ಲಮಾಬಾದ್​, ರಾವಲ್​ಪಿಂಡಿಯಲ್ಲಿಲ್ಲ. ನಮ್ಮ ಸಂಪತ್ತು ಪಾಕಿಗಳು ಲೂಟಿ ಹೊಡೆದಿದ್ದಾರೆ. ನಮ್ಮ ನದಿಗಳನ್ನ ಅವರ ಕಡೆ ತಿರುಗಿಸಿದ್ದಾರೆ ಅಂತ ಪಾಕ್​ ವಿರುದ್ಧ ಕಿಡಿಕಾರಿದ್ರು. ಇನ್ನೂ ಕೆಲಬವರು, ಕಾಶ್ಮೀರ ವಿಚಾರವನ್ನ ಪಾಕಿಸ್ತಾನ ರಾಜಕೀಯ ಲಾಭಕ್ಕೆ ಮತ್ತು ಭಾರತ ವಿರುದ್ಧ ದ್ವೇಷವನ್ನ ಪ್ರಚಾರ ಮಾಡಲು ಬಳಸಿಕೊಳ್ತಿದೆ ಅಂತ ಕಿಡಿಕಾರಿದ್ರು.

-masthmagaa.com

Contact Us for Advertisement

Leave a Reply