ಚೀನಾದ ಹಡಗಿಗೆ ಲಂಕಾ ನಿರ್ಬಂಧ: ಭಾರತದ ವಿರುದ್ದ ಡ್ರ್ಯಾಗನ್‌ ಕಿಡಿ!

masthmagaa.com:

ಭಾರತದ ಮಾತು ಕೇಳಿ ಚೀನಾದ ಹಡಗಿಗೆ ಶ್ರೀಲಂಕಾ ಸರ್ಕಾರ ನಿರ್ಬಂಧ ಹೇರಿದ್ದಕ್ಕೆ ಇದೀಗ ಚೀನಾ ಭಾರತದ ವಿರುದ್ದ ಗುಟುರು ಹಾಕಿದೆ. ಭಾರತದ ಈ ನಡೆ ಅರ್ಥಹೀನ ಹಾಗೂ ಬುದ್ದಿಗೇಡಿ ನಡೆ ಅಂತ ಆಕ್ರೋಶ ಹೊರಹಾಕಿದೆ. ಈ ಬಗ್ಗೆ ಮಾತನಾಡಿರೋ ಚೀನಾದ ವಿದೇಶಾಂಗ ವಕ್ತಾರ ವಾಂಗ್‌ವೆನ್‌ ಬೆನ್‌ ʻನಾನು ಮತ್ತೆ ಮತ್ತೆ ಹೇಳೋಕೆ ಬಯಸ್ತೀನಿ. ಶ್ರೀಲಂಕಾ ಹಿಂದೂ ಮಹಾಸಾಗರದಲ್ಲಿ ಒಂದು ಸಾರಿಗೆ ಕೇಂದ್ರ. ಅಂದ್ರೆ ಓಡಾಡೋಕೆ ಇರೋ ಜಾಗ. ಚೀನಾ ಸೇರಿದಂತೆ ಹಲವು ದೇಶಗಳ ಈ ರೀತಿಯ ವೈಜ್ಞಾನಿಕ ಹಡಗುಗಳು ಶ್ರೀಲಂಕಾದಲ್ಲಿ ಬಂದು ಲ್ಯಾಂಡ್‌ ಆಗಿವೆ. ಶ್ರೀಲಂಕಾ ಒಂದು ಸಾರ್ವಭೌಮ ರಾಷ್ಟ್ರ. ತನ್ನ ಅಭಿವೃದ್ದಿಗೆ, ತನ್ನ ಹಿತಾಸಕ್ತಿಗೆ ಅದು ಬೇರೆ ದೇಶಗಳ ಜೊತೆಗೆ ಸಹಕಾರ, ಸಂಬಂಧವನ್ನ‌ ಬೆಳೆಸಬಹುದು. ಚೀನಾ ಮತ್ತು ಶ್ರೀಲಂಕಾದ ಸಹಕಾರವನ್ನು ಎರಡು ದೇಶಗಳು ಸ್ವತಂತ್ರವಾಗಿ ಆಯ್ಕೆ ಮಾಡುತ್ತವೆ.. ಇದು ಮೂರನೇ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿಲ್ಲ ಅಂತ ಹೇಳಿದ್ದಾರೆ. ಅಲ್ದೇ ಭದ್ರತೆ ದೃಷ್ಟಿಯನ್ನ ಇಟ್ಕೊಂಡು ಶ್ರೀಲಂಕಾದ ಮೇಲೆ ಒತ್ತಡ ಹೇರುವುದು ಅರ್ಥಹೀನ.. ಚೀನಾದ ಕೆಲಸಗಳನ್ನ ಸರಿಯಾದ ರೀತಿಯಲ್ಲಿ ನೋಡಬೇಕು. ಚೀನಾ – ಶ್ರೀಲಂಕಾ ನಡುವಿನ ವಿನಿಮಯಗಳಿಗೆ, ನಮ್ಮ ಸಂಬಂಧಗಳಿಗೆ ತೊಂದರೆ ಕೊಡೋದನ್ನ ಇದಕ್ಕೆ ಸಂಬಂಧ ಪಟ್ಟ ಪಕ್ಷದವರು ಈ ಕೂಡಲೇ ನಿಲ್ಲಿಸಬೇಕು ಅಂತ ಭಾರತದ ಹೆಸರನ್ನ ಹೇಳದೇ ವಾಗ್ದಾಳಿ ಮಾಡಿದ್ದಾರೆ. ಇದರ ನಡುವೆಯೇ ಹಡಗಿನ ಪ್ರವೇಶದ ಕುರಿತು ಶ್ರೀಲಂಕಾ ಜೊತೆಗೆ ಚೀನಾ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಅಂತ ಲಂಕಾ ಆಡಳಿತ ಹೇಳಿದೆ. ಆದ್ರೆ ಇಲ್ಲಿ ಯಾವ ನಿರ್ಧಾರಕ್ಕೆ ಬರಲಾಗಿದೆ ಅನ್ನೋದ್ರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ಅಂದಹಾಗೆ ಚೀನಾಗೆ ಸೇರಿದ ಬಾಹ್ಯಾಕಾಶ ಪತ್ತೆದಾರಿ ಹಡಗು ʻಯುವಾನ್‌ ವಾಂಗ್‌ 5′, ಜುಲೈ 13ನೇ ತಾರೀಖು ಚೀನಾದ ಜಿಯಾಂಗ್‍ ಬಂದರಿನಿಂದ ಶ್ರೀಲಂಕಾದ ಹಂಬಂತೋಟ ಅಂದ್ರೆ ಶ್ರೀಲಂಕಾದವರ ಹತ್ರ ಕಿತ್ಕೊಂಡು ಚೀನಾ ಅಡ ಇಟ್ಕೋಂಡಿರೋ ಪೋರ್ಟ್‌ಗೆ ಬರುತ್ತೆ. ಈ ಹಡಗು ಅತ್ಯಾಧುನಿಕ ಟೆಕ್ನಾಲಜಿ ಹೊಂದಿದ್ದು ಬಾಹ್ಯಾಕಾಶ, ಸೈಬರ್‌ ಮಾಹಿತಿ, ಎಲೆಕ್ಟ್ರಾನಿಕ್, ಸಂವಹನ ಮತ್ತು ಸೈಕಾಲಾಜಿಕಲ್‌ ಯುದ್ಧ ಕಾರ್ಯಾಚರಣೆಗಳಲ್ಲಿ ಚೀನಾ ಸೇನೆಗೆ ಸಹಾಯ ಮಾಡುತ್ತೆ. ಇಂತಹ ಹಡಗು ಭಾರತದ ಹತ್ತಿರಕ್ಕೆ ಬರೋದ್ರಿಂದ ಇದಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಚೀನಾದ ಈ ಹಡಗಿನ ಪ್ರಯಾಣ ಭಾರತದ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳಗಳ ಮೇಲೆ ಕಣ್ಣಿಡೋಕೆ ದುರಪಯೋಗ ಆಗ್ಬೋದು ಅಂತ ಹೇಳಿ ಶ್ರೀಲಂಕಾಗೆ ತೀವ್ರ ಒತ್ತಡ ಹೇರಿತ್ತು. ಯಾಕಂದ್ರೆ ಈ ಹಡಗು ದಕ್ಷಿಣ ಭಾರತದ ಪ್ರಮುಖ ಮಿಲಿಟರಿ ಮತ್ತು ಪರಮಾಣು ನೆಲೆಗಳಾಗಿರೋ ಕಲ್ಪಾಕ್ಕಂ, ಕೂಡಂಕುಳಂಗಳಲ್ಲಿ ಆಗುವ ಬೆಳವಣಿಗೆಗಳನ್ನ ಕೂಡ ಇದರಿಂದ ಮಾನಿಟರ್‌ ಮಾಡ್ಬೋದು ಅಂತ ಹೇಳಲಾಗುತ್ತೆ. ಅಲ್ದೇ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಹಲವು ಬಂದರುಗಳನ್ನ ಕೂಡ ಈ ಹಡಗಿನ ರಾಡರ್‌ಗಳು ಪತ್ತೆಹಚ್ಚಬಲ್ಲವು ಅಂತ ಕೆಲ ಸಂಶೋಧಕರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಈ ಕಾರಣದಿಂದ ಭಾರತ ಇದಕ್ಕೆ ತೀವ್ರ ಒತ್ತಡ ಹೇರಿತ್ತು. ಆರಂಭದಲ್ಲಿ ಈ ಹಡಗು ದುರಪಯೋಗ ಆಗಲ್ಲ ಅಂತ ಲಂಕಾ ಹೇಳಿತ್ತು. ಆದ್ರೆ ಯಾವಾಗ ಭಾರತದಿಂದ ಕಠಿಣ ಸಂದೇಶ ಹೋಯ್ತೋ ಆಗ ಚೀನಾದ ಹಡಗಿಗೆ ಲಂಕಾ ಸರ್ಕಾರ ತಾತ್ಕಲಿಕ ನಿರ್ಬಂಧ ಹೇರಿ, ನಾವು ಹೇಳೋವರೆಗೂ ನೀವು ಬರೋದು ಬೇಡ ಅಂತ ಹೇಳಿತ್ತು. ಇದರ ಬೆನ್ನಲ್ಲೇ ಈಗ ಚೀನಾ, ಭಾರತದ ನಡೆ ವಿರುದ್ದ ಅಸಮಾಧಾನ ಹೊರಹಾಕಿದೆ.

 

-masthmagaa.com

Contact Us for Advertisement

Leave a Reply