ಜೆಎನ್​​ಯು ಇತಿಹಾಸ ನಿಮಗೆ ಗೊತ್ತಾ..? ಯಾಕೆ ಇಲ್ಲಿ ಯಾವಾಗಲೂ ಗಲಾಟೆ..?

ಹಾಯ್ ಫ್ರೆಂಡ್ಸ್…
ಜೆಎನ್​​ಯು… ಹಾಗೆ ನೋಡಿದರೆ ಇದೊಂದು ಯೂನಿವರ್ಸಿಟಿ… ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್.ಜೈ ಶಂಕರ್, ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್, ಕೇಂದ್ರ ಸಚಿವೆ ಮನೇಕಾ ಗಾಂಧಿ, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ಕಮ್ಯುನಿಸ್ಟ್ ನಾಯಕ ಪ್ರಕಾಶ್ ಕಾರಟ್, ಸೀತಾರಾಮ್ ಯೆಚೂರಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಗಳು ಶರ್ಮಿಷ್ಠಾ ಮುಖರ್ಜಿ, ಗ್ರಾಮೀಣ ಆರ್ಥಿಕತೆಯ ಅತಿದೊಡ್ಡ ಬರಹಗಾರ ಪಿ.ಸಾಯಿನಾಥ್ ಹಾಗೂ ಇನ್ನೂ ಲೆಕ್ಕವಿಲ್ಲದಷ್ಟು ದೊಡ್ಡ ದೊಡ್ಡ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿದ ವಿಶ್ವವಿದ್ಯಾಲಯ. ಆದರೆ ಇತ್ತೀಚಿಗೆ ಈ ಯೂನಿವರ್ಸಿಟಿ ಸದಾ ಸುದ್ದಿ ಮಾಡುವುದು ಒಂದಲ್ಲ ಒಂದು ಗಲಾಟೆಯಿಂದ. ಈ ಸಲವಂತೂ ಜೆಎನ್​​ಯು ಗಲಾಟೆ ಎಲ್ಲಾ ಲಿಮಿಟ್ಸ್ ಮೀರಿದೆ. ಇಡೀ ದೇಶಕ್ಕೆ ಏನಪ್ಪಾ ಇದು ಜೆಎನ್​​ಯುದು ಯಾವಾಗಲೂ ಕಿರಿಕಿರಿ. ಇವರದ್ದು ಒಂದೇನಾ ಸೀಮೆಯಲ್ಲಿ ಇಲ್ದೆ ಇರೋ ಯುನಿವರ್ಸಿಟಿ… ಬರೀ ಕಿರಿಕ್ ಪಾರ್ಟಿಗಳು ಅಂತ ಅನಿಸ್ತಾ ಇದೆ. ಸೋ ಇಂಥ ಸಂದರ್ಭದಲ್ಲಿ ಜೆಎನ್​​ಯುನಲ್ಲಿ ಏನಾಯ್ತು? ಹೇಗಾಯಿತು?ಜೆಎನ್​​ಯು ಭಯಾನಕ ಇತಿಹಾಸ ಏನು? ಜೆಎನ್​​ಯು ನಾವು-ನೀವು ಓದಿದ ಮಾಮೂಲಿ ಯುನಿವರ್ಸಿಟಿಗಳಂತೆ ಅಲ್ಲ ಯಾಕೆ..?ಈ ಎಲ್ಲ ಮಾಹಿತಿಯನ್ನು ನೀಡುತ್ತಾ ಹೋಗುತ್ತೇವೆ. ಈ ಮಾಹಿತಿ ನೀವು ಅಂದುಕೊಂಡಿದ್ದಕ್ಕಿಂತಲೂ ಸಖತ್ ರೋಚಕವಾಗಿದೆ. ಸೋ ಕಡೆತನಕ ಮಿಸ್ ಮಾಡದೆ ನೋಡಿ..

ಕ್ಯಾಂಪಸ್‌ನಲ್ಲಿ ಈಗ ನಡೆದಿದ್ದೇನು?
ಉಳಿದ ವಿಚಾರಗಳಿಗೆ ಹೋಗುವ ಮುನ್ನ, ಜೆಎನ್​​ಯು ಕ್ಯಾಂಪಸ್​​ನಲ್ಲಿ ಈಗ ಏನು ನಡೆದಿದೆ ಅಂತ ಒಂದು ರಿಕ್ಯಾಪ್ ಮಾಡಿಬಿಡುತ್ತೇವೆ ನೋಡಿ. ಹೇಳಿಕೇಳಿ ಜೆಎನ್​​ಯು ಎಡಪಂಥೀಯ ಕೋಟೆ. ಇಲ್ಲಿನ ವಿದ್ಯಾರ್ಥಿ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳಾದ SFI, AISA, DFSಗಳದ್ದೇ ಪ್ರಾಬಲ್ಯ. ಎಬಿವಿಪಿ ಮತ್ತಿತರ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳ ಶಕ್ತಿ ಅಷ್ಟಕಷ್ಟೆ. ಇಲ್ಲಿ ಲೆಫ್ಟಿಸ್ಟ್ ವಿದ್ಯಾರ್ಥಿಗಳ ಅಬ್ಬರ ಯಾವ ಮಟ್ಟಕ್ಕೆ ಮಿತಿಮೀರಿದೆ ಎಂದರೆ ಯುನಿವರ್ಸಿಟಿ ಅಡ್ಮಿನಿಸ್ಟ್ರೇಷನ್ ಗಿಂತ ಇವರ ಮಾತು ನಡೆಯುವುದೇ ಜಾಸ್ತಿ. ಅಡ್ಮಿನಿಸ್ಟ್ರೇಷನ್ ಮತ್ತು ಬೋಧಕ ಸಿಬ್ಬಂದಿ‌ ಅಂದ್ರೆ ಲೆಕ್ಚರರ್ ಗಳಲ್ಲೂ ಲೆಫ್ಟಿಸ್ಟ್​​​​ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದುರೀತಿ ಕಮ್ಯುನಿಸಮ್​​ನ ಲ್ಯಾಬೋರೇಟರಿ ಥರ ಈ ಜೆಎನ್​​ಯು . ಇಂತಹ ಕಮ್ಯುನಿಸಂ ಕೋಟೆಯನ್ನು ಒಡೆಯಬೇಕು ಅಂತ ಆರ್​ಎಸ್​​ಎಸ್​​ನ ವಿದ್ಯಾರ್ಥಿ ಘಟಕವಾದ ಎಬಿವಿಪಿ ಮತ್ತಿತರ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಲವು ಬಾರಿ ಪ್ರಯತ್ನ ನಡೆಸಿವೆ. ಆದರೆ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಕೆಲದಿನಗಳ ಹಿಂದೆ ಸಡನ್ನಾಗಿ ‘Left Terror down down’ ಅನ್ನೋ ಹೆಸರಿನ ವಾಟ್ಸಪ್ ಗ್ರೂಪ್ ಶುರುವಾಯಿತು. ಇದರಲ್ಲಿ ‘ಹೊಡೆಯಲು ಇದು ಸರಿಯಾದ ಸಂದರ್ಭ’ ‘ಲೆಫ್ಟಿಸ್ಟ್‌ಗಳ ಆಟ ಜಾಸ್ತಿ ಆಯ್ತು, ಇದಕ್ಕೆ ಬ್ರೇಕ್ ಹಾಕಲೇಬೇಕು’ ‘ದೇಶ ವಿರೋಧಿಗಳನ್ನು ಬಡಿದು ಹಾಕಬೇಕು’ ಅಂತೆಲ್ಲ ಚಾಟ್ ಮಾಡಲಾಗಿದೆ.

ನಂತರ ಇದ್ದಕ್ಕಿದ್ದ ಹಾಗೆ ಸಂಜೆ 3.45ರ ವೇಳೆಗೆ ಕ್ಯಾಂಪಸ್ ಗೆ ನುಗ್ಗಿದ ನೂರಕ್ಕೂ ಅಧಿಕ ಮುಸುಕುಧಾರಿಗಳು ಎಡಪಂಥೀಯ ವಿದ್ಯಾರ್ಥಿಗಳನ್ನು ಒಬ್ಬೊಬ್ಬರನ್ನೇ ಹಿಡಿದು ಹೊಡೆಯಲು ಶುರುಮಾಡುತ್ತಾರೆ. ನಂತರ JNUTA ಅಂದ್ರೆ ಜೆಎನ್ಯು ಸ್ಟಾಫ್ ಅಸೋಸಿಯೇಷನ್, ಪೆರಿಯಾರ್ ಹಾಸ್ಟೆಲ್ ಹಾಗೂ ಕ್ಯಾಂಪಸ್ ನ ಇತರ ಭಾಗಗಳಲ್ಲಿ ಓಡಾಡಿ ಎಡಪಂಥೀಯ ವಿಚಾರಧಾರೆಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಹೊಡೆಯಲಾಗಿದೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. Universityಯ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷೆ ಐಶೆ ಘೋಶ್ ಬುರುಡೆಗೆ ಸರಿಯಾಗಿ ಏಟು ಬಿದ್ದಿದೆ. ದಿಲ್ಲಿಯ ಏಮ್ಸ್ ಮತ್ತು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಬಿವಿಪಿ ವಿದ್ಯಾರ್ಥಿಗಳು ಇದನ್ನು ಮಾಡಿದ್ದಾರೆ ಅಂತ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಆರೋಪ ಮಾಡುತ್ತಿವೆ. ಆದರೆ ಎಬಿವಿಪಿ ಇದನ್ನು ನಿರಾಕರಿಸಿದೆ. ನಮ್ಮ ಮೇಲೆ ಎಡಪಂಥೀಯ ವಿದ್ಯಾರ್ಥಿಗಳು ದಾಳಿ ಮಾಡಿದ್ದಾರೆ. ಅವರೇ ನಮಗೆ ಹೊಡೆದಿದ್ದಾರೆ. ನಮ್ಮ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ವಾದಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತನಿಖೆಗೆ ಆದೇಶ ನೀಡಿದ್ದಾರೆ.

JNU ಯಾವಾಗಲೂ ಯಾಕೆ ಹೀಗೆ?
ಈ ಯೂನಿವರ್ಸಿಟಿಯ ಹಣೆಬರಹನೇ ಇಷ್ಟು. ಯಾವಾಗಲೂ ಬರಿ ಗಲಾಟೆ, ಪ್ರತಿಭಟನೆ, ಕೋಲಾಹಲ. ಭಯೋತ್ಪಾದಕ ಅಫ್ಜಲ್ ಗುರು ಗೆ ಜಿಂದಾಬಾದ್ ಹೇಳುವುದರಿಂದ ಹಿಡಿದು, ಭಾರತ್ ತೇರೆ ತುಕಡೆ ಕರೆಂಗೆ ಅಂತ ದೇಶವಿರೋಧಿ ಘೋಷಣೆ ಕೂಗು ತನಕ, ಒಂದು ಶೈಕ್ಷಣಿಕ ಕ್ಯಾಂಪಸ್​​ನಲ್ಲಿ ಏನೆಲ್ಲಾ ನಡೆಯಬಾರದೋ ಅದೆಲ್ಲವೂ ಈ ಕ್ಯಾಂಪಸ್​​ನಲ್ಲಿ ನಡೆದಿದೆ. ಕಾಲೇಜು ಗಲಾಟೆಯಿಂದಲೇ ಫೇಮಸ್ ಆಗಿ ಎಷ್ಟು ಜನ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಕನ್ಹಯ್ಯ ಕುಮಾರ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ದೇಶವನ್ನು ತುಂಡು ಮಾಡ್ತೀವಿ ಅಂತ ಘೋಷಣೆ ಕೂಗಿ ದೇಶದ್ರೋಹದ ಆರೋಪ ಹೊತ್ತಿದ್ದ ಉಮರ್ ಖಾಲಿದ್ ಕೂಡಾ ಕೂಡ ಇದೇ ಗ್ಯಾಂಗ್. ಇಂತಾ JNU ಶುರುವಾಗಿದ್ದು 1969ರಲ್ಲಿ… ಇದು ದೇಶದಲ್ಲೇ ಅತ್ಯಂತ ಕ್ವಾಲಿಟಿ ಯುನಿವರ್ಸಿಟಿ. ವಿಶ್ವವಿದ್ಯಾಲಯಗಳ ಗುಣಮಟ್ಟ ದೃಢೀಕರಿಸುವ ಎನ್ಎಎಸಿಸಿ ಅಥವಾ ನ್ಯಾಕ್, ಈ ಯುನಿವರ್ಸಿಟಿಗೆ ನಾಲ್ಕರಲ್ಲಿ ಮೂರುವರೆ ಸ್ಟಾರ್ ನೀಡಿದೆ. ಅಷ್ಟು ಸುವ್ಯವಸ್ಥಿತ ಹೈಟೆಕ್ ಯುನಿವರ್ಸಿಟಿ ಇದು. ಇಲ್ಲಿನ ಲೈಬ್ರರಿ ವಿಶ್ವದಲ್ಲೇ ಅತ್ಯಂತ ವಿಶಾಲ ಮತ್ತು ಶ್ರೇಷ್ಠ ಲೈಬ್ರರಿಗಳಲ್ಲಿ ಒಂದು. ಅತ್ಯಂತ ಪರಣಿತ ಲೆಕ್ಚರರ್ ಗಳನ್ನು ಹೊಂದಿದೆ ಈ ವಿಶ್ವವಿದ್ಯಾಲಯ. ಈ ಯೂನಿವರ್ಸಿಟಿಯಲ್ಲಿ ಸೀಟ್ ಪಡೆಯಲು ಎಂಟ್ರೆನ್ಸ್ ಟೆಸ್ಟ್ ಬರೆಯಬೇಕು. ಆದರೆ ನಿಮಗೆಲ್ಲಾ ಆಶ್ಚರ್ಯ ಆಗಬಹುದು ಒಬ್ಬ ಕಮ್ಯುನಿಸ್ಟ್ ಶಾಸಕ ಆಯ್ಕೆಯಾಗಲು ಸಾಧ್ಯವಾಗದ ದಿಲ್ಲಿಯಂತಹ ಜಾಗದಲ್ಲಿ ಅದು ಹೇಗೆ ಈ ಒಂದು ಯೂನಿವರ್ಸಿಟಿ ಮಾತ್ರ ಕಮ್ಯುನಿಸ್ಟ್ ಕೋಟೆಯಾಗಿ ಬದಲಾಗಿದೆ ಅಂತ. ಇದಕ್ಕೆ ಉತ್ತರ ಪಡೆಯಲು ಇಂದಿರಾಗಾಂಧಿ ಕಾಲಕ್ಕೆ ಹೋಗಬೇಕು. 1969ರಲ್ಲಿ ಈ ಯುನಿವರ್ಸಿಟಿ ಶುರುವಾದಾಗ, ಇದನ್ನು ಎಡಪಂಥೀಯ ವಿಚಾರಧಾರೆಗಳ ಲ್ಯಾಬೋರೇಟರಿಯಾಗಿ ರೂಪಿಸಬೇಕು ಅನ್ನೋದು ಇಂದಿರಾಗಾಂಧಿ ಸರ್ಕಾರದ ಯೋಜನೆಯಾಗಿತ್ತು. ಯಾವ ರೀತಿ ಎಂದರೆ, ಭಾರತದಲ್ಲೇ ಅತ್ಯಂತ ಉನ್ನತ ದರ್ಜೆಯ ಯುನಿವರ್ಸಿಟಿ ಆಗಿ ಇದನ್ನ ಕಟ್ಟಬೇಕು. ಆಗ ಇಡೀ ಭಾರತದ ಮೂಲೆ ಮೂಲೆಯಿಂದಲೂ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅವರು ಶಿಕ್ಷಣ ಮುಗಿಸಿ ವಾಪಸ್ ಹೋಗುವ ವೇಳೆಗೆ ಅವರಲ್ಲಿ ಎಡಪಂಥೀಯ ವಿಚಾರಧಾರೆ ತುಂಬಬೇಕು. ಈ ಮೂಲಕ ಕಾಂಗ್ರೆಸ್​​ನ  ಸೆಂಟರ್ ಲೆಫ್ಟ್ ಐಡಿಯಾಲಜಿ, ಅಂದ್ರೆ ಮಧ್ಯಮ ಎಡಪಂಥೀಯ ಸಿದ್ದಾಂತ ದೇಶದ ಮೂಲೆ ಮೂಲೆಗೂ ತಲುಪಬೇಕು. ದೇಶದ ಬೌದ್ಧಿಕ ವಲಯದಲ್ಲಿ ಎಡಪಂಥೀಯ ತಲೆಗಳ ಸೃಷ್ಟಿ ಆಗಬೇಕು ಅನ್ನೋದು ಲೆಕ್ಕಾಚಾರವಾಗಿತ್ತು. ಇದರ ಪರಿಣಾಮ ಇವತ್ತಿಗೂ ಜೆಎನ್ಯು ಎಡಪಂಥೀಯ ಕೋಟೆಯಾಗಿ ಉಳಿದುಕೊಂಡಿದೆ. ಹಾಗೂ ಇಲ್ಲಿ ಏನೇ ಗಲಾಟೆ ಯಾದರೂ ಕಾಂಗ್ರೆಸ್ ಪಕ್ಷ ಎಡಪಂಥೀಯ ವಿದ್ಯಾರ್ಥಿಗಳ ಸಪೋರ್ಟ್ ಗೆ ನಿಲ್ಲುತ್ತದೆ.

ಸಂಘರ್ಷ ಶುರುವಾಗಿದ್ದು ಯಾಕೆ!
2014ರವರೆಗೆ ಎಲ್ಲವೂ ಸರಿಯಿತ್ತು. JNUನಲ್ಲಿ ಕಮ್ಯುನಿಸ್ಟ್ ದರ್ಬಾರ್ ಯಾವುದೇ ಅಡೆತಡೆಯಿಲ್ಲದೆ ಮುಂದುವರೆದಿತ್ತು. ಆದರೆ 2014ರಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಬಳಿಕ ಆರೆಸ್ಸೆಸ್ ಮತ್ತು ಅದರ ಸಂಘ-ಸಂಸ್ಥೆಗಳಲ್ಲಿ ಹೊಸ ಶಕ್ತಿ ಬಂದಿತ್ತು. ಇಡೀ ದೇಶದಲ್ಲಿ ಒಂದಾದಮೇಲೊಂದರಂತೆ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತಾ ಹೋದರೆ, ಒಂದಾದ ಮೇಲೊಂದರಂತೆ ಸರ್ಕಾರಿ ಸಂಘ ಸಂಸ್ಥೆಗಳ ಮೇಲೆ ಆರೆಸ್ಸೆಸ್​  ಮತ್ತು ಅಂಗಸಂಸ್ಥೆಗಳ ನಿಯಂತ್ರಣ ಶುರುವಾಯಿತು. ಆದರೆ ಜೆಎನ್​​ಯು ಒಂದನ್ನು ಬಿಟ್ಟು. ಅದೊಂದನ್ನು ಹೆಂಗ್ ಬಿಡಕ್ಕಾಗುತ್ತೆ! ಅಲ್ಲಿಂದಲೇ ಶುರುವಾಗಿದ್ದು ಸಂಘರ್ಷ. ಜೆಎನ್​​ಯುನಲ್ಲಿ ಕಮಿನಿಸ್ಟ್ ಕೋಟೆಯನ್ನು ಒಡೆಯಲು ಎಬಿವಿಪಿ ಪ್ರಯತ್ನ ಶುರುವಾಯಿತು. ಆದರೆ ಯಶಸ್ಸು ಸಿಕ್ಕಿರಲಿಲ್ಲ. ಲೆಫ್ಟ್ ಕಾಮ್ರೇಡ್ ಗಳ ಅಬ್ಬರ ಯಾವ ಮಟ್ಟಿಗೆ ಇತ್ತು ಅಂದರೆ ತಾನು ಎಬಿವಿಪಿ ಅಂತ ಹೇಳಿಕೊಳ್ಳಲು ಭಯಪಡುವ ಪರಿಸ್ಥಿತಿ ಇತ್ತು. ಇತ್ತೀಚಿಗಂತೂ ಪದೇಪದೇ ಸಣ್ಣಪುಟ್ಟ ಘಟನೆಗಳು ಆಗುತ್ತಲೇ ಇದ್ದವು. ಅದೇ ಮುಂದುವರೆದು ಈಗ ಪ್ರಪಂಚವೇ ತಿರುಗಿ ನೋಡುವಂತ ದೊಡ್ಡ ಮಾರಮಾರಿ ಆಗಿದೆ. ಈ ರೀತಿ ದೇಶದ ಶಿಕ್ಷಣ ವ್ಯವಸ್ಥೆಯ ಕಿರೀಟದಂತೆ ಇರಬೇಕಾಗಿದ್ದ ವಿಶ್ವವಿದ್ಯಾಲಯವೊಂದು ಇಡೀ ದೇಶದ ಶಿಕ್ಷಣ ವ್ಯವಸ್ಥೆಗೆ ಕಳಂಕದ ರೀತಿಯಾಗುತ್ತಿದೆ. ಬರೀ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಿದೆ. ಅದು ಎಡಪಂಥೀಯರೇ ಆಗಲಿ, ಎಬಿವಿಪಿ ಯೇ ಆಗಲಿ ಸಂಘರ್ಷ ವಿಚಾರಗಳಲ್ಲಿ ಇರಬೇಕೆ ಹೊರತು ಈ ರೀತಿ ಹೊಡೆದಾಟಕ್ಕೆ ಇಳಿಯೋದಲ್ಲ. ಹಿಂಸೆಗೆ ಇಳಿಯುವ ಯಾರೇ ಆಗಲಿ ಪೊಲೀಸರು ಬೆಂಡೆತ್ತಿ ಮೂಲೆಗೆ ಕೂರಿಸಬೇಕು. ಯೂನಿವರ್ಸಿಟಿಗಳು ಶಿಕ್ಷಣದ ಬೌದ್ಧಿಕ ಬೆಳವಣಿಗೆಯ, ಬೇರೆ ಬೇರೆ ವಿಚಾರಧಾರೆಗಳು ಚರ್ಚೆಯ ಕೇಂದ್ರವಾಗಬೇಕು. ಎಬಿವಿಪಿ ಆಗಿರಲಿ ಅಥವಾ ಕಮ್ಯುನಿಸ್ಟರೇ ಆಗಿರಲಿ, ಸಮರ್ಥವಾಗಿ ತಮ್ಮ ಸಿದ್ಧಾಂತದ ಪರವಾಗಿ ವಾದ ಮಂಡಿಸಿ ತಮ್ಮ ಸಿದ್ಧಾಂತವನ್ನು ಬೆಳೆಸಬೇಕು. ದೊಣ್ಣೆ,  ಕೋಲು,  ಕತ್ತಿ ಹಿಡಿದುಕೊಂಡರೆ ಅದು ಗುಂಡಾಗಿರಿ ಆಗುತ್ತದೆ. ಕ್ರಿಮಿನಲ್ ಅಪರಾಧ ವಾಗುತ್ತದೆ. ಈ ಘಟನೆಯ ಹಿಂದೆ ಯಾರೇ ಇದ್ದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯೂನಿವರ್ಸಿಟಿಗಳು ಇರುವುದು ಶಿಕ್ಷಣಕ್ಕೆ, ಅಲ್ಲಿಗೆ ಹೋದಮೇಲೆ, ಅದನ್ನು ದೇವಸ್ಥಾನದಂತೆ ಕೈ‌ ಮುಗಿದು ಗೌರವಿಸಿ, ಬಾಯಿಮುಚ್ಚಿಕೊಂಡು ಓದಿ, ತೆಪ್ಪಗೆ ವಾಪಸ್ ಬರಬೇಕು. ವಿಶ್ವವಿದ್ಯಾಲಯಗಳನ್ನು ಮಾವನ ಮನೆ ಅಂದುಕೊಳ್ಳೋರನ್ನ ಕಂಟ್ರೋಲ್ ಮಾಡಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು ಅನ್ನೋದು ನಮ್ಮ ಅಭಿಪ್ರಾಯ. ಫ್ರೆಂಡ್ಸ್ ಈ ಬಗ್ಗೆ ನೀವೇನಂತೀರಿ. ಕಮೆಂಟ್ ಮಾಡಿ ತಿಳಿಸಿ.

 

Contact Us for Advertisement

Leave a Reply