ವಿದೇಶದಲ್ಲಿರುವ ಭಾರತೀಯರನ್ನ ಕರೆತರಲು ಹೊರಟ ಯುದ್ಧನೌಕೆಗಳು..!

masthmagaa.com:

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮೇ 7ರಿಂದ ಹಂತ ಹಂತವಾಗಿ ಕರೆತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ವಿಮಾನ ಹಾಗೂ ಯುದ್ಧನೌಕೆಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಭಾರತೀಯ ನೌಕಾಪಡೆಯ ಮೂರು ಯುದ್ಧನೌಕೆಗಳು ಮಾಲ್ಡೀವ್ಸ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್​ಗೆ ಹೊರಟಿವೆ ಅಂತ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಐಎನ್ಎಸ್ ಜಲ್ಲಾಶ್ವಾ, ಐಎನ್​ಎಸ್ ಮಗರ್ ಹಾಗೂ ಐಎನ್​ಎಸ್ ಶಾರ್ದುಲ್ ಯುದ್ಧ ನೌಕೆಗಳು ಮಾಲ್ಡೀವ್ಸ್​ ಹಾಗೂ ಯುಎಇ ಕಡೆ ಹೊರಟಿವೆ. ಗಲ್ಫ್ ಮತ್ತು ಇತರ ದೇಶಗಳಿಂದ ಭಾರತೀಯ ನಾಗರಿಕರನ್ನ ಕರೆತರಲು ಒಟ್ಟು 14 ಯುದ್ಧನೌಕೆಗಳನ್ನ ಮೀಸಲಿಡಲಾಗಿದೆ. ಗುರುವಾರದಿಂದ ಭಾರತೀಯರನ್ನು ಕರೆತರುವ ಕೆಲಸ ಆರಂಭವಾಗಲಿದೆ.

ಭಾರತೀಯರನ್ನು ಕರೆತರುವ ಮುನ್ನ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಸೋಂಕಿನ ಲಕ್ಷಣ ಕಾಣಿಸದವರನ್ನ ಮಾತ್ರ ತಾಯ್ನಾಡಿಗೆ ಕರೆತರಲಾಗುತ್ತದೆ. ಭಾರತಕ್ಕೆ ಬಂದ ನಂತರ ಅವರನ್ನ ಕ್ವಾರಂಟೈನ್​ನಲ್ಲಿ ಇಡುವ ಸಾಧ್ಯತೆ ಇದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರವರ ರಾಜ್ಯ, ಊರುಗಳಿಗೆ ಕಳಿಸಲಾಗುತ್ತದೆ ಅಂತ ಮೂಲಗಳು ಮಾಹಿತಿ ನೀಡಿವೆ.

ಈಗಾಗಲೇ ವಿದೇಶದಲ್ಲಿ ಸಿಲುಕಿರುವ ಸಾಕಷ್ಟು ಭಾರತೀಯರು ಸ್ವದೇಶಕ್ಕೆ ಮರಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ದುಬೈನಲ್ಲಿರುವ ರಾಯಭಾರ ಕಚೇರಿ ಪ್ರಕಾರ 2 ಲಕ್ಷಕ್ಕೂ ಹೆಚ್ಚು ಭಾರತೀಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಯುಎಇ ಸೇರಿದಂತೆ ಸೌದಿ ಅರೇಬಿಯಾ, ಕುವೈತ್, ಓಮನ್, ಸಿಂಗಾಪುರ ಮುಂತಾದ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರಿದ್ದಾರೆ.

-masthmagaa.com

Contact Us for Advertisement

Leave a Reply