ನೂರು ಸಿದ್ದರಾಮಯ್ಯ ಬಂದ್ರೂ ರಾಜ್ಯದಲ್ಲಿ ಬಿಜೆಪಿ ವಿನ್‌ ಆಗುತ್ತೆ: ಯಡಿಯೂರಪ್ಪ

masthmagaa.com:

ಸಿಎಂ ಯಡಿಯೂರಪ್ಪ ಬದಲಾವಣೆ ಮಾಡ್ತಾರಾ.. ಇಲ್ವಾ.. ಕಳೆದೊಂದು ವಾರದಿಂದ ಇದೊಂದು ಯಕ್ಷ ಪ್ರಶ್ನೆಯಾಗಿ ಕಾಡ್ತಾ ಇದೆ. ಯಾಕಂದ್ರೆ ಇದಕ್ಕೆ ಉತ್ತರ ಹೇಳಬೇಕಾದ ಯಡಿಯೂರಪ್ಪನವರೇ ಕಾದು ನೋಡೋಣ.. ಕಾದು ನೋಡೋಣ ಅಂತಿದ್ದಾರೆ. ಇವತ್ತು ಬೆಳಗ್ಗೆ ಬೆಳಗಾವಿಗೆ ತೆರಳಿ ಪ್ರವಾಹ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅದೇ ರೀತಿ ಜುಲೈ 26ರಂದು ಉತ್ತರ ಕನ್ನಡಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸೋದಾಗಿ ತಿಳಿಸಿದ್ದಾರೆ. ಬೆಳಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಸಂಜೆಯೊಳಗೆ ಸಂದೇಶ ಬರುತ್ತೆ ಅಂದಿದ್ರು. ನಂತರ ಮಧ್ಯಾಹ್ನ ಬೆಳಗಾವಿಯಲ್ಲಿ ಮಾತನಾಡಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂದಿದ್ರು. ಆದ್ರೆ ಬೆಂಗಳೂರಿಗೆ ವಾಪಸ್ಸಾದ ಬಳಿಕ ಸಂಜೆ ಮಾತನಾಡಿದ ಅವರು, ಇವತ್ತು ಸಂಜೆ ಅಥವಾ ನಾಳೆ ಬೆಳಗ್ಗೆ ಹೈಕಮಾಂಡ್​​ನಿಂದ ಸಂದೇಶ ಬರುತ್ತೆ. ನಾಳೆ ಬಿಜೆಪಿ ಸರ್ಕಾರ 2 ವರ್ಷ ಪೂರೈಸಿದ ಸಲುವಾಗಿ ಕಾರ್ಯಕ್ರಮ ನಡೆಯಲಿದೆ. ಅದ್ರಲ್ಲಿ ಭಾಗಿಯಾಗಲಿದ್ದೇನೆ. ನಂತರ ಎಲ್ಲವೂ ಗೊತ್ತಾಗಲಿದೆ.. ನಾನು ಕೊನೆಯ ಕ್ಷಣದವರೆಗೂ ಕೆಲಸ ಮಾಡುತ್ತಲೇ ಇರುತ್ತೇನೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೂ, 10ರಿಂದ 15 ವರ್ಷ ರಾಜ್ಯದಲ್ಲಿ ಬಿಜೆಪಿ ಏಳಿಗೆಗಾಗಿ ಶ್ರಮಿಸುತ್ತೇನೆ ಅಂತ ಕೂಡ ಹೇಳಿದ್ದಾರೆ. ಸೋ ಕಳೆದೊಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ನಡೀತಿರೋ ಹೈಡ್ರಾಮಕ್ಕೆ ನಾಳೆ ತೆರೆ ಬೀಳೋ ಎಲ್ಲಾ ಸಾಧ್ಯತೆಗಳಿವೆ. ಇದ್ರ ನಡುವೆಯೇ ಗೋವಾದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಎಸ್​ವೈ ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ಧಾರೆ. 2 ವರ್ಷ ಪೂರೈಸಿದ ಅವರನ್ನು ಶ್ಲಾಘಿಸಬೇಕು. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇಲ್ಲ ಅಂತ ಹೇಳಿದ್ದಾರೆ.

ಇನ್ನು ನನ್ನ ಪರವಾಗಿ ಯಾರು ಮಾತಾಡ್ಬೇಡಿ.. ಪ್ರತಿಭಟನೆ ಮಾಡ್ಬೇಡಿ ಅಂತ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ರೂ ಕೂಡ ಇವತ್ತು ವೀರಶೈವ ಮತ್ತು ಲಿಂಗಾಯತ ಸಮುದಾಯದ ಮಠಾಧೀಶರು ಸಮಾವೇಶ ನಡೆಸಿದ್ರು. ಅರಮನೆ ಮೈದಾನದಲ್ಲಿ ನಡೆದ ಈ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಿದ್ರು. ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ತಿಪಟೂರಿನ ರುದ್ರಮುನಿ ಸ್ವಾಮೀಜಿ ಮತ್ತು ಚಿತ್ರದುರ್ಗದ ಬಸವಕುಮಾರ ಸ್ವಾಮೀಜಿ ನೇತೃತ್ವದ ಈ ಸಮಾವೇಶದಲ್ಲಿ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು ಅಂತ ಒತ್ತಾಯಿಸಲಾಯ್ತು.

ಮತ್ತೊಂದ್ಕಡೆ ಸಿಎಂ ಬದಲಾವಣೆ ವಿಚಾರವನ್ನೇ ದಾಳವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ದಾಳ ಹೂಡಿದಂತಿದೆ. ಯಾಕಂದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿದ್ದರಾಮಯ್ಯ ಹೇಗೂ ಯಡಿಯೂರಪ್ಪರನ್ನು ಬದಲಿಸ್ತಿದ್ದಾರೆ. ಈಗಲಾದ್ರೂ ಬಿಜೆಪಿ ಕಡೆಯಿಂದ ದಲಿತರನ್ನ ಮುಖ್ಯಮಂತ್ರಿಯಾಗಿ ಮಾಡಲಿ ನೋಡೋಣ ಅಂತ ಸವಾಲು ಹಾಕಿದ್ದಾರೆ. ಅಲ್ಲದೆ ಬಿಜೆಪಿಯವರಿಗೆ ಈ ಹಿಂದೆಯೂ ಜನರ ಬಗ್ಗೆ ಕಾಳಜಿ ಇರಲಿಲ್ಲ. ಇಂದೂ ಇಲ್ಲ.. ಇನ್ನು ಮುಂದೆಯೂ ಕಾಳಜಿ ಬರಲ್ಲ. 2019ರಲ್ಲಿ ಪ್ರವಾಹದ ಸಂತ್ರಸ್ತರಿಗೆ ಯಡಿಯೂರಪ್ಪ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ರಾಜ್ಯದ ಜನ ಮಳೆಯಿಂದಾಗಿ ಕಂಗೆಟ್ಟಿರೋ ಈ ಹೊತ್ತಲ್ಲಿ ಯುದ್ಧೋಪಾದಿಯಲ್ಲಿ ಕೆಲ್ಸ ಮಾಡೋ ಬದಲು ಸಿಎಂ ಬದಲಾವಣೆ ಸರ್ಕಸ್ ಮಾಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರೋ ಯಡಿಯೂರಪ್ಪ, ಯಾರನ್ನ ಸಿಎಂ ಮಾಡ್ಬೇಕು ಅನ್ನೋದು ಹೈಕಮಾಂಡ್​​ಗೆ ಬಿಟ್ಟ ವಿಚಾರ.. ನೂರು ಸಿದ್ದರಾಮಯ್ಯ ಬಂದ್ರೂ ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಅಂದ್ರು.

-masthmagaa.com

Contact Us for Advertisement

Leave a Reply