ಲಾಕ್‌ಡೌನ್‌ಪಾರ್ಟಿ: ವಿಶ್ವಾಸ ಮತಯಾಚನೆಯಲ್ಲಿ ಗೆದ್ದು ಕುರ್ಚಿ ಭದ್ರಮಾಡಿಕೊಂಡ UK ಪ್ರಧಾನಿ

masthmagaa.com:

ಲಾಕ್‌ಡೌನ್‌ವೇಳೆ ಪಾರ್ಟಿ ಮಾಡಿ ಪ್ರತಿಪಕ್ಷಗಳ ಜೊತೆಗೆ ಸ್ವಪಕ್ಷೀಯರಿಂದಲೂ ಭಾರಿ ವಿರೋಧ ಎದುರಿಸುತ್ತಿದ್ದ ಯುನೈಟೆಡ್‌ ಕಿಂಗ್ಡಮ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ನಿನ್ನೆ ತಮ್ಮ ಪಾರ್ಟಿಯ ಒಳಗೇ ನಡೆದ ವೋಟಿಂಗ್‌ನಲ್ಲಿ ಗೆಲುವು ದಾಖಲಿಸಿದ್ದಾರೆ. ಪಾರ್ಟಿ ಮಾಡಿದ ವಿಚಾರವಾಗಿ ಬೋರಿಸ್‌ ರಾಜೀನಾಮೆ ನೀಡ್ಬೇಕು ಅಂತ ಅಲ್ಲಿನ ಪ್ರತಿಪಕ್ಷಗಳು ಭಾರಿ ಒತ್ತಾಯ ಮಾಡಿದ್ವು. ಇದರ ಬೆನ್ನಲ್ಲೇ ಈ ಬೆಂಕಿ ಸ್ವಪಕ್ಷೀಯರಲ್ಲೂ ಕಾಣಿಸಿಕೊಂಡು ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡ್ಬೇಕು. ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತೆ, ಹಿನ್ನಡೆಯಾಗುತ್ತೆ. ಅವರ ಲೀಡರ್‌ಶಿಪ್‌ ಸರಿಯಿಲ್ಲ ಅನ್ನೋ ಕೂಗುಗಳು ಕೂಡ ಎದ್ದಿದ್ವು. ಇದರ ಭಾಗವಾಗಿ ನಿನ್ನೆ ತಮ್ಮ ಕನ್ಸರ್ವೇಟಿವ್‌ ಪಾರ್ಟಿಯೊಳಗೆ ಮತದಾನ ನಡೆದಿದ್ದು ಕಡಿಮೆ ಅಂತರದ ಜಯ ದಾಖಲಿಸಿದ್ದಾರೆ. ಗುಪ್ತವಾಗಿ ನಡೆದ ಈ ಮತದಾನದಲ್ಲಿ ಸುಮಾರು 359 ಸದಸ್ಯರು ಭಾಗವಹಿಸಿದ್ರು. ಇದರಲ್ಲಿ211 ಮಂದಿ ಅಂದ್ರೆ ಸುಮಾರು 59% ಸದಸ್ಯರು ಬೋರಿಸ್‌ ಪರವಾಗಿ ಮತಹಾಕಿದ್ದಾರೆ. ಇನ್ನುಳಿದ 148 ಮಂದಿ ನಮಗೆ ಬೋರಿಸ್‌ ಅವರ ಲೀಡರ್‌ಶಿಪ್‌ ಇಷ್ಟ ಇಲ್ಲಅಂತ ಹೇಳಿದ್ದಾರೆ. ಆದ್ರೆ ಕಡೆಗೂ ಹೆಚ್ಚಿನ ಮತಗಳು ಅವರ ಪರವಾಗಿ ಬಿದ್ದಿರೋದ್ರಿಂದ ಸದ್ಯ ಕನ್ಸರ್ವೇಟಿವ್‌ ಪಕ್ಷ ಅವರನ್ನೇ ಪ್ರಧಾನಿಯನ್ನಾಗಿ ಮುಂದುವರೆಸಲಿದೆ. ಅಂದ್ಹಾಗೆ ಈ ವಿಶ್ವಾಸಮತಯಾಚನೆಯ ಕೊನೇ ಕ್ಷಣದವರೆಗೂ ಬೋರಿಸ್‌ಗೆ ಸೋಲು ಉಂಟಾಗ್ಬಹುದು ಅಂತ ಹೇಳಲಾಗ್ತಿತ್ತು. ಅಷ್ಟರ ಮಟ್ಟಿಗೆ ಅಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಆದ್ರೆ ಈಗ ಬೋರಿಸ್‌ ಕಡೆಗೂ ವಿನ್‌ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು ಇದೊಂದು ಒಳ್ಳೆಯ ಹಾಗೂ ನಿರ್ಣಾಯಕ ಫಲಿತಾಂಶ ಅಂತ ಹೇಳಿದ್ದಾರೆ. ಅಂದ್ಹಾಗೆ ಲಾಕ್‌ಡೌನ್‌ ಪಾರ್ಟಿ ಮಾಡಿದ್ದ ಬೋರಿಸ್‌ ಜಾನ್ಸನ್‌ ಇದಕ್ಕೆ ಸಂಬಂಧಪಟ್ಟಂತೆ ಕೆಲ ದಿನಗಳ ಹಿಂದೆಯಷ್ಟೇ ನ್ಯಾಯಾಲಯದಲ್ಲಿ ದಂಡವನ್ನ ಕೂಡ ಕಟ್ಟಿದ್ರು.

-masthmagaa.com

Contact Us for Advertisement

Leave a Reply