ಯಶಸ್ವಿಯಾಗಿ ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ ಅಮೆರಿಕ!

masthmagaa.com:

ಇತ್ತೀಚೆಗಷ್ಟೇ ಚೀನಾ ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ್ದು ಫುಲ್ ಸುದ್ದಿಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಗೌಪ್ಯವಾಗಿ ಪರೀಕ್ಷೆ ನಡೆಸಲಾಗಿದೆ ಅನ್ನೋ ವಾದವನ್ನು ಚೀನಾ ನಿರಾಕರಿಸಿತ್ತು. ಅದ್ರ ಬೆನ್ನಲ್ಲೇ ಅಮೆರಿಕ ಕೂಡ ಯಶಸ್ವಿಯಾಗಿ ಹೈಪರ್​ಸಾನಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಪರೀಕ್ಷೆ ನಡೆಸಿದೆ. ಇದೊಂದು ಹೊಸ ರಕ್ಷಣಾ ವ್ಯವಸ್ಥೆಯಾಗಿದ್ದು, ಚೀನಾ ಮತ್ತು ರಷ್ಯಾ ಈಗಾಗಲೇ ಅಭಿವೃದ್ಧಿಪಡಿಸಿಯಾಗಿದೆ ಅಂತ ಅಮೆರಿಕ ನೌಕಾಪಡೆ ಮಾಹಿತಿ ನೀಡಿದೆ. ಬುಧವಾರ ವರ್ಜೀನಿಯಾದಲ್ಲಿರೊ ನಾಸಾದ ಕೇಂದ್ರದಲ್ಲಿ ಈ ಪರೀಕ್ಷೆ ನಡೆಸಲಾಗಿದೆ. ಈ ಹೈಪರ್​ಸಾನಿಕ್ ಕ್ಷಿಪಣಿ ಶಬ್ದದ ವೇಗಕ್ಕಿಂತಲೂ ಕನಿಷ್ಠ 5 ಪಟ್ಟು ವೇಗವಾಗಿ ಹೋಗೋ ಸಾಮರ್ಥ್ಯ ಹೊಂದಿರುತ್ತೆ.

ಮತ್ತೊಂದ್ಕಡೆ ಅಮೆರಿಕದ ಕಾಂಗ್ರೆಶನಲ್ ರಿಸರ್ಚ್ ಸರ್ವೀಸ್ ವರದಿಯಲ್ಲಿ ಭಾರತ ಕೂಡ ಹೈಪರ್​ಸಾನಿಕ್ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ದಿಪಡಿಸ್ತಿದೆ ಅಂತ ಹೇಳಲಾಗಿದೆ. ಚೀನಾ ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿರೋ ವರದಿ ಬೆನ್ನಲ್ಲೇ ಈ ವರದಿ ಪ್ರಕಟವಾಗಿದ್ದು, ಅಮೆರಿಕ, ಚೀನಾ ಮತ್ತು ರಷ್ಯಾ ಆಧುನಿಕ ಹೈಪರ್​ಸಾನಿಕ್ ಕ್ಷಿಪಣಿ ಅಭಿವೃದ್ಧಿಪಡಿಸ್ತಿವೆ. ಇವಲ್ಲದೇ ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ಕೂಡ ಈ ತಂತ್ರಜ್ಞಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿವೆ. ಆಸ್ಟ್ರೇಲಿಯಾ ಅಮೆರಿಕ ಜೊತೆ ಮತ್ತು ಭಾರತ ರಷ್ಯಾ ಜೊತೆ ಸೇರ್ಕೊಂಡು ಈ ಟೆಕ್ನಾಲಜಿ ಅಭಿವೃದ್ಧಿಪಡಿಸ್ತಿವೆ ಅಂತ ಕೂಡ ವರದಿಯಲ್ಲಿ ಹೇಳಲಾಗಿದೆ.

ಇವೆಲ್ಲದ್ರ ನಡುವೆ ದಕ್ಷಿಣ ಕೊರಿಯಾ ದೇಶೀಯವಾಗಿ ಉತ್ಪಾದಿಸಿದ ಮೊದಲ ರಾಕೆಟ್ಟನ್ನು ಉಡಾವಣೆ ಮಾಡಿದೆ. ಇದ್ರಲ್ಲಿ 1.5 ಟನ್ ಪೇಲೋಡ್ ಹೊತ್ತ ರಾಕೆಟ್ ಬಾಹ್ಯಾಕಾಶಕ್ಕೆ ಚಿಮ್ಮಿದ್ದು, ದಕ್ಷಿಣ ಕೊರಿಯಾ ಕೂಡ ಆಧುನಿಕ ರಾಕೆಟ್ ಹೊಂದಿರೋ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ. ನುರಿ ಎಂಬ ಹೆಸರಿನ ಕೊರಿಯಾ ಸ್ಪೇಸ್ ಲಾಂಚ್ ವೆಹಿಕಲ್ ಉಡಾವಣಾ ಕೇಂದ್ರ ಗೊಹೆಉಂಗ್​​ನಿಂದ ಬಾಹ್ಯಾಕಾಶಕ್ಕೆ ಚಿಮ್ಮಿದೆ.

-masthmagaa.com

Contact Us for Advertisement

Leave a Reply