ಬೈಡೆನ್ ಮೊದಲ ಸುದ್ದಿಗೋಷ್ಠಿ! ಏನೇನು ಮಾತಾಡಿದ್ರು ಗೊತ್ತಾ?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಚೀನಾ ಅಮೆರಿಕವನ್ನು ಹಿಂದಿಕ್ಕಿ ಮುಂದಕ್ಕೆ ಹೋಗಲು ಯತ್ನಿಸುತ್ತಿದೆ ಅನ್ನೋ ವಿಚಾರವನ್ನು ಪ್ರಸ್ತಾಪಿಸಿದ ಅವರು, ಚೀನಾ ವಿಶ್ವದ ನಾಯಕತ್ವ ವಹಿಸೋ, ಶ್ರೀಮಂತ ದೇಶವಾಗೋ, ಜಗತ್ತಿನ ಶಕ್ತಿಶಾಲಿ ದೇಶವಾಗೋ ಕನಸು ಕಂಡಿದೆ. ಆದ್ರೆ ನನ್ನ ಪ್ರಕಾರ ಅದು ಎಂದಿಗೂ ಆಗೋದಿಲ್ಲ. ಯಾಕಂದ್ರೆ ಅಮೆರಿಕ ನಿರಂತರವಾಗಿ ಅಭಿವೃದ್ಧಿಯಾಗುತ್ತಲೇ ಇದೆ. ಅಮೆರಿಕ ಎಂದಿಗೂ ಚೀನಾ ಜೊತೆಗೆ ಸಂಘರ್ಷ ಬಯಸೋದಿಲ್ಲ ಅಂತ ಹೇಳಿದ್ದಾರೆ. ನಾನು ಅಧ್ಯಕ್ಷನಾದ್ಮೇಲೆ ಒಮ್ಮೆ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಜೊತೆ ಮಾತಾಡಿದ್ದೇನೆ.

ಈ ಹಿಂದೆ ನಾನು ಉಪಾಧ್ಯಕ್ಷನಾಗಿದ್ದಾಗಲೂ ಶಿ ಜಿನ್​ಪಿಂಗ್ ಜೊತೆ ಮಾತಾಡಿದ್ದೆ. ಅವರಲ್ಲಿ ಪ್ರಜಾಪ್ರಭುತ್ವ ಎಂಬುದು ಇಲ್ಲವೇ ಇಲ್ಲ. ರಷ್ಯಾ ಅಧ್ಯಕ್ಷ ಪುಟಿನ್ ರೀತಿಯೇ ನಿರಂಕುಶವಾದದಲ್ಲೇ ಭವಿಷ್ಯ ಇದೆ ಅಂತ ಅವರು ನಂಬಿದ್ದಾರೆ ಅಂದ್ರು. ಇನ್ನು ಉತ್ತರ ಕೊರಿಯಾದ ಖಂಡಾಂತರ ಕ್ಷಿಪಣಿ ಪ್ರಯೋಗದ ಬಗ್ಗೆ ಮಾತನಾಡಿ, ನಮ್ಮನ್ನು ಕೆಣಕಿದ್ರೆ ತಕ್ಕ ಪ್ರತಿಕ್ರಿಯೆ ನೀಡೋದಾಗಿ ಎಚ್ಚರಿಸಿದ್ರು. ಇನ್ನು ವಲಸಿಗರ ಸಮಸ್ಯೆ ಕುರಿತು ಮಾತನಾಡಿದ ಬೈಡೆನ್​​, ಇದು ಸೀಸನಲ್ ಸಮಸ್ಯೆ.. ಚಳಿಗಾಲದ ಜನವರಿ, ಫೆಬ್ರವರಿ ಮಾರ್ಚ್​​ನಲ್ಲಿ ಪ್ರತಿವರ್ಷವೂ ವಲಸಿಗರ ಸಂಖ್ಯೆ ಹೆಚ್ಚುತ್ತೆ ಅಂತ ಹೇಳಿದ್ದಾರೆ.

ಇದೇ ವೇಳೆ ಅಫ್ಘಾನಿಸ್ತಾನದಿಂದ ಮೇ 1ರ ವೇಳೆಗೆ ಸೇನೆ ಹಿಂತೆಗೆಯೋದು ಅನುಮಾನ ಅಂತ ತಿಳಿಸಿದ್ದಾರೆ. ಈ ನಡುವೆ 2024ರ ಚುನಾವಣೆಗೂ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಎದುರುನೋಡ್ತಿದ್ದೀನಿ ಅಂತ ಕೂಡ ಹೇಳಿದ್ದಾರೆ. ಈ ಮೂಲಕ ಬೈಡೆನ್​​​ಗೆ ಅರಳು ಮರಳು ಶುರುವಾಗಿದೆ. ಒಂದೇ ಬಾರಿ ಅಧ್ಯಕ್ಷರಾಗಿ ಕೆಳಗಿಳಿಯುತ್ತಾರೆ ಅನ್ನೋ ಮಾತುಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಆಕೆ ನನಗೆ ಗ್ರೇಟ್ ಪಾರ್ಟ್ನರ್ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply