ಭಾರತಕ್ಕೆ ಯಾವೆಲ್ಲಾ ಅಮೆರಿಕ ಅಧ್ಯಕ್ಷರು ಭೇಟಿ ಕೊಟ್ಟಿದ್ದಾರೆ ಗೊತ್ತಾ..?

ಹಾಯ್​ ಫ್ರೆಂಡ್ಸ್, ಭಾರತಕ್ಕೆ ಅಮೆರಿಕ ಅಧ್ಯಕ್ಷರು ಬರೋದು ಅಪರೂಪದಲ್ಲಿ ಅಪರೂಪ. ಅಂಥಾದ್ರಲ್ಲಿ ಇದುವರೆಗೆ ಒಟ್ಟು 6 ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬಂದಿದ್ದು,  ಡೊನಾಲ್ಡ್​ ಟ್ರಂಪ್ 7ನೇಯವರು. ಹಾಗಿದ್ರೆ ಈ ಹಿಂದೆ ಭಾರತಕ್ಕೆ ಬಂದ ಅಮೆರಿಕ ಅಧ್ಯಕ್ಷರು ಯಾರು..? ಆಗ ನಮ್ಮ ದೇಶದ ಪ್ರಧಾನಿ ಯಾರಾಗಿದ್ರು..? ಅಮೆರಿಕ ಅಧ್ಯಕ್ಷರು ಬಂದಾಗಲೆಲ್ಲಾ ಭಾರತದ ಪರಿಸ್ಥಿತಿ ಹೇಗಿತ್ತು..? ನೋಡ್ತಾ ಹೋಗೋಣ.

ಡ್ವೈಟ್ ಡಿ. ಐಸೆನ್​ಹೋವರ್ (1959)
ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರಲ್ಲಿ ಡ್ವೈಟ್ ಡಿ. ಐಸೆನ್​ಹೋವರ್ ಮೊದಲಿಗರು. ಎರಡನೇ ಮಹಾಯುದ್ಧದ ಹೀರೋ ಅನ್ನೋ ಪ್ರಸಿದ್ಧಿ ಪಡೆದಿದ್ದ ಸಂದರ್ಭದಲ್ಲಿ ಐಸೆನ್​ಹೋವರ್ ಭಾರತಕ್ಕೆ ಬಂದಿದ್ರು. ಈ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದರು. ಈ ಸಮಯದಲ್ಲಿ ದೇಶ ಬರಗಾಲಕ್ಕೆ ತುತ್ತಾಗಿ ಆಹಾರದ ಕೊರತೆ ಅನುಭವಿಸುತ್ತಿತ್ತು. ಅಲ್ಲದೆ ಅಮೆರಿಕ ನೇತೃತ್ವದ ಕ್ಯಾಪಿಟಲಿಸ್ಟ್ ಬ್ಲಾಕ್ ಹಾಗೂ ಯುಎಸ್ಎಸ್ಆರ್ ನೇತೃತ್ವದ ಸೋಷಿಯಲಿಸ್ಟ್ ಬ್ಲಾಕ್ ನಡುವೆ ಶೀತಲ ಸಮರ ನಡೀತಿದ್ದ ಸಮಯ. 4 ದಿನದ ತಮ್ಮ ಪ್ರವಾಸದಲ್ಲಿ ಐಸೆನ್​ಹೋವರ್ ಸಂಸತ್ತಿನಲ್ಲಿ ಭಾಷಣ ಮಾಡಿದ್ರು. ರಾಮ್​ಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ರು. ರಾಜ್​ಘಾಟ್​ ಹಾಗೂ ತಾಜ್ ಮಹಲ್​ಗೂ ಭೇಟಿ ನೀಡಿದ್ರು. ಇದೇ ಮುಂದೆ ಹಲವು ಅಮೆರಿಕ ಅಧ್ಯಕ್ಷರಿಗೆ ಮಾದರಿಯಾಯ್ತು.

ರಿಚರ್ಡ್ ನಿಕ್ಸನ್ (1969)
ಐಸೆನ್​ಹೋವರ್ ಬಂದು ಹೋದ 10 ವರ್ಷಗಳ ನಂತ್ರ ರಿಚರ್ಡ್ ನಿಕ್ಸನ್ ಭಾರತ ಪ್ರವಾಸ ಕೈಗೊಂಡ್ರು. ಆಗ ಅವರ ವಿರುದ್ಧ ವಾಟರ್​ಗೇಟ್​ ಹಗರಣ ಕೇಳಿ ಬಂದಿತ್ತು. ನಿಕ್ಸನ್ ಭಾರತಕ್ಕೆ ಬಂದ ಸಮಯದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ರು. ಆದ್ರೆ ಇಂದಿರಾ ವಿರುದ್ಧ ಅಸಂಬದ್ಧ ಪದಗಳನ್ನ ಬಳಸಿ ಸುದ್ದಿಯಾದ್ರು ರಿಚರ್ಡ್ ನಿಕ್ಸನ್. ಜೊತೆಗೆ ಪಾಕ್ ಪರ ಹೆಚ್ಚು ಒಲವು ಹೊಂದಿದ್ದ ನಿಕ್ಸನ್, ಭಾರತ ಯುಎಸ್ಎಸ್ಆರ್ ಪರವಾಗಿದೆ ಅಂದುಕೊಂಡಿದ್ರು. ಹೀಗಾಗಿ ಈ ಭೇಟಿಯಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಅಷ್ಟೇನು ವೃದ್ಧಿಯಾಗಲಿಲ್ಲ.

ಜಿಮ್ಮಿ ಕಾರ್ಟರ್ (1978)
ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಭೇಟಿ ನೀಡಿದ್ರು. ಈ ಮೂಲಕ ಭಾರತಕ್ಕೆ ಭೇಟಿ ನೀಡಿದ ಡೆಮಾಕ್ರೆಟಿಕ್ ಪಕ್ಷದ ಮೊದಲ ಅಮೆರಿಕ ಅಧ್ಯಕ್ಷ ಅನಿಸಿಕೊಂಡ್ರು. ಇವರಿಗಿಂತ ಮೊದಲು ಬಂದಿದ್ದ ಐಸೆನ್​ಹೋವರ್ ಹಾಗೂ ನಿಕ್ಸನ್ ರಿಪಬ್ಲಿಕನ್ ಪಕ್ಷದವರಾಗಿದ್ದರು. ಪರಮಾಣು ಪರೀಕ್ಷೆ ಮಾಡುವ ಭಾರತದ ಮಹತ್ವಾಕಾಂಕ್ಷೆ ಅಂದು ವಿವಾದ ಸೃಷ್ಟಿಸಿತ್ತು. ಮೊರಾರ್ಜಿ ದೇಸಾಯಿ ಅವರಿಗೆ ಕಠಿಣ ಸಂದೇಶ ನೀಡಬೇಕು ಅಂತ ಜಿಮ್ಮಿ ಕಾರ್ಟರ್ ತಮ್ಮ ಸಹಾಯಕರ ಬಳಿ ಹೇಳಿದ್ದ ಟೇಪ್ ಬಹಿರಂಗವಾಗಿತ್ತು. ಆದ್ರೆ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಬೇಕೆಂಬ ಅಮೆರಿಕ ಅಭಿಪ್ರಾಯವನ್ನ ಮೊರಾರ್ಜಿ ದೇಸಾಯಿ ನಿರಾಕರಿಸಿದ್ರು. ಭೇಟಿ ವೇಳೆ ತಮ್ಮ ಪತ್ನಿ ಜೊತೆ ಹಳ್ಳಿಯೊಂದಕ್ಕೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡಿದ್ರು ಜಿಮ್ಮಿ ಕಾರ್ಟರ್. ಆ ಹಳ್ಳಿಗೆ ‘ಕಾರ್ಟರ್​ಪುರಿ’ ಅಂತ ಅವರ ಹೆಸರನ್ನೇ ಇಡಲಾಯ್ತು. ಇಂದು ಅದು ಹರಿಯಾಣದಲ್ಲಿದೆ.

ಬಿಲ್ ಕ್ಲಿಂಟನ್ (2000)
ಇದು ಬರೋಬ್ಬರಿ 2 ದಶಕಗಳ ನಂತರ ಭಾರತಕ್ಕೆ ಅಮೆರಿಕ ಅಧ್ಯಕ್ಷರ ಭೇಟಿಯಾಗಿತ್ತು. ಬಿಲ್ ಕ್ಲಿಂಟನ್ ಕೂಡ ಡೆಮಾಕ್ರೆಟಿಕ್ ಪಕ್ಷದ ನಾಯಕರಾಗಿದ್ರು. 5 ದಿನಗಳ ತಮ್ಮ ಪ್ರವಾಸದಲ್ಲಿ ಮುಂಬೈ, ದೆಹಲಿ, ಜೈಪುರ, ಹೈದರಾಬಾದ್ ಹಾಗೂ ಆಗ್ರಾಕ್ಕೆ ಭೇಟಿ ನೀಡಿದ್ರು. ಬಿಲ್ ಕ್ಲಿಂಟನ್ ಜನರ ಜೊತೆ ಡ್ಯಾನ್ಸ್ ಮಾಡಿದ್ರೆ, ಪುತ್ರಿ ಚೆಲ್ಸಿಯಾ ಕೂಡ ಜನರೊಂದಿಗೆ ಬೆರೆತು ಆಕರ್ಷಣೆಯ ಕೇಂದ್ರಬಿಂದುವಾದ್ರು. ಬಿಲ್ ಕ್ಲಿಂಟನ್ ಭೇಟಿ ವೇಳೆ ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ರು. ಈ ಭೇಟಿಯನ್ನ ಭಾರತ-ಅಮೆರಿಕ ಸಂಬಂಧದ ಟರ್ನಿಂಗ್ ಪಾಯಿಂಟ್ ಅಂತ ಕರೀತಾರೆ. ವಿಶೇಷ ಅಂದ್ರೆ ಪೋಖ್ರಾನ್​ನಲ್ಲಿ ಪರಮಾಣು ಪರೀಕ್ಷೆ ಮಾಡಿದ ನಂತರ ಈ ಭೇಟಿ ನಡೆದಿದ್ದು. ಆದ್ರೆ ಭೇಟಿ ವೇಳೆ ನಿಶ್ಯಸ್ತ್ರೀಕರಣಕ್ಕೆ ಸಹಿ ಹಾಕುವಂತೆ ಅಮೆರಿಕ ಏನೂ ಒತ್ತಾಯಿಸಿರಲಿಲ್ಲ. ಪ್ರಧಾನಿ ವಾಜಪೇಯಿ ಜತೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಕ್ಲಿಂಟನ್, ಉಭಯ ದೇಶಗಳ ಹೊಸ ಬಾಂಧವ್ಯವನ್ನ ಪ್ರಸ್ತಾಪಿಸಿದ್ದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಧ್ಯಪ್ರವೇಶಿಸಿ, ಪಾಕ್ ಪಡೆಗಳನ್ನ ವಾಪಸ್ ಪಡೆಯುವಂತೆ ನವಾಜ್ ಷರೀಫ್​ಗೆ ಸೂಚಿಸಿದ್ದರು. ಅಮೆರಿಕದ ಪಾಕ್ ಪರವಾದ ನಿಲುವು ಬದಲಾಗಿದ್ದೇ ಇಲ್ಲಿಂದ ಅಂತ ಹೇಳಬಹುದು.

ಜಾರ್ಜ್ ಬುಷ್ (2006)
ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಜಾರ್ಜ್ ಬುಷ್ ಅವರು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸೇನಾ ಹಾಗೂ ನಾಗರಿಕ ಬಳಕೆಯನ್ನು ಪ್ರತ್ಯೇಕಗೊಳಿಸಲಾಯಿತು. ಬುಷ್ ಅವರ ಮುಕ್ತ ಹಾಗೂ ನೇರ ನಿಲುವಿನಿಂದಾಗಿ ಪರಮಾಣು ವಿಚಾರದಲ್ಲಿ ಭಾರತದ ಏಕಾಂಗಿತನ ಈ ಮೂಲಕ ಕೊನೆಗೊಂಡಿತು.

ಬರಾಕ್ ಒಬಾಮ (2010, 2015)
ಅಮೆರಿಕ ಅಧ್ಯಕ್ಷರಾಗಿದ್ದಾಗ ಬರಾಕ್ ಒಬಾಮ ಎರಡು ಬಾರಿ ಭಾರತಕ್ಕೆ ಬಂದಿದ್ರು. 2010ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮೊದಲ ಸಲ ಭೇಟಿ ನೀಡಿದ್ರು. ಭಾರತ ಹಾಗೂ ಅಮೆರಿಕ ನಡುವಿನ ಆರ್ಥಿಕ ಒಪ್ಪಂದಗಳು ಬಲಗೊಂಡಿದ್ದು ಇದೇ ಸಮಯದಲ್ಲಿ. ಈ ಪೈಕಿ ರಕ್ಷಣೆ, ರಫ್ತು ಹಾಗೂ ಬಂಡವಾಳ ಹೂಡಿಕೆ ಮುಖ್ಯವಾದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ವತ್ವ ಪಡೆಯುವ ಭಾರತದ ಮಹತ್ವಕಾಂಕ್ಷೆಯನ್ನು ಒಬಾಮ ಬೆಂಬಲಿಸಿದ್ದರು. ಈ ಭೇಟಿ ವೇಳೆ 2008ರಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದ ಮುಂಬೈನ ತಾಜ್ ಮಹಲ್ ಹೋಟೆಲ್​ಗೂ ಭೇಟಿ ನೀಡಿದ್ರು. ಬಳಿಕ 2015ರಲ್ಲಿ ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಎರಡನೇ ಬಾರಿ ಭೇಟಿ ನೀಡಿ 66ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಒಬಾಮ ಅವರನ್ನ ಪ್ರಧಾನಿ ಮೋದಿ ಪರ್ಸನಲ್ ಫ್ರೆಂಡ್ ಅಂತ ಸಂಬೋಧಿಸಿದ್ದನ್ನ ನಾವಿಲ್ಲಿ ನೆನೆಪಿಸಿಕೊಳ್ಳಬಹುದು.

ಡೊನಾಲ್ಡ್ ಟ್ರಂಪ್ (2020)
ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 36 ಗಂಟೆಗಳ ಭಾರತ ಪ್ರವಾಸಕ್ಕೆ ತಮ್ಮ ಪತ್ನಿ ಮೆಲಾನಿಯಾ ಜೊತೆ ಭಾರತಕ್ಕೆ ಬಂದಿದ್ದಾರೆ. ಟ್ರಂಪ್​ಗೆ ಪುತ್ರಿ ಇವಾಂಕಾ ಹಾಗೂ ಅಳಿಯ ಕುಶ್ನರ್ ಕೂಡ ಸಾಥ್ ನೀಡಿದ್ದಾರೆ. ಗುಜರಾತ್​ನ ಮೊಟೆರಾ ಸ್ಟೇಡಿಯಂನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ ಟ್ರಂಪ್, ಮೋದಿ ಹಾಗೂ ಭಾರತ ದೇಶವನ್ನ ಹಾಡಿ ಹೊಗಳಿದ್ದಾರೆ. ಟ್ರಂಪ್ ಅವರ ವೇಳಾಪಟ್ಟಿಯಲ್ಲಿ ಆಗ್ರಾದ ತಾಜ್​ಮಹಲ್​ ಭೇಟಿ, ವಿವಿಧ ಒಪ್ಪಂದಗಳಿಗೆ ಸಹಿ ಹಾಕೋದು ಕೂಡ ಸೇರಿದೆ.

Contact Us for Advertisement

Leave a Reply