AUKUS ಡೀಲ್: ಫ್ರಾನ್ಸ್ ಸಿಟ್ಟು, ಅಮೆರಿಕ-ಬ್ರಿಟನ್ ಮನವೊಲಿಕೆ ಯತ್ನ

masthmagaa.com:

AUKUS ಪರಮಾಣು ಸಬ್’ಮರೀನ್ ಡೀಲ್ ನಿಂದ ರೊಚ್ಚಿಗೆದ್ದಿರೋ ಫ್ರಾನ್ಸ್, ಯುಕೆ – ಫ್ರಾನ್ಸ್ ರಕ್ಷಣಾ ಸಚಿವರ ಭೇಟಿ ರದ್ದುಪಡಿಸಿದೆ. ಮತ್ತೊಂದುಕಡೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾತ್ರ, ಫ್ರಾನ್ಸ್ ಜೊತೆಗಿನ ಸಂಬಂಧಕ್ಕೆ ಬಿದ್ದಿರೋ ಬೆಂಕಿ ನಂದಿಸೋ ಪ್ರಯತ್ನ ಮಾಡಿದ್ದಾರೆ. ಯುಕೆ-ಫ್ರಾನ್ಸ್ ನಡುವಿನ ಪ್ರೀತಿ ಎಂದಿಗೂ ಅಳಿಸಲಾಗದ್ದು ಅಂತ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಬೈಡೆನ್ ಕೂಡ ಮಧ್ಯಪ್ರವೇಶ ಮಾಡಿದ್ದು, ಆದಷ್ಟು ಬೇಗ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಜೊತೆ ಒಂದು ಫೋನ್ ಕಾಲ್ ಅರೇಂಜ್ ಮಾಡಿ ಅಂತ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಾವೇ ಖುದ್ದಾಗಿ ಫ್ರಾನ್ಸ್ ಸಿಟ್ಟು ಶಮನ ಮಾಡೋ ಪ್ರಯತ್ನ ಮಾಡಲು ಬೈಡೆನ್ ಮುಂದಾಗಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾ ಉಪ ಪ್ರಧಾನಿ ಬರ್ನಾಬಿ ಜೋಯ್ಸ್ ಸಹ ಮಾತಾಡಿದ್ದು, ನಾವು ಫ್ರಾನ್ಸ್ ಬಗ್ಗೆ ಎಷ್ಟು ಪ್ರೀತಿ ಹೊಂದಿದ್ದೇವೆ ಅಂತ ಪದೇ ಪದೇ ಪ್ರೂವ್ ಮಾಡಬೇಕಿಲ್ಲ. ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧಗಳಲ್ಲಿ ಹಲವು ಆಸೀಸ್ ಯೋಧರ ಬಲಿದಾನವೇ ಇದಕ್ಕೆ ಸಾಕ್ಷಿ ಅಂತ ಹೇಳಿದ್ದಾರೆ. ಹಾಗೇ, ಈ ಮೈತ್ರಿಕೂಟದಿಂದ, ಈ ಡೀಲ್’ನಿಂದ ಈ ಭಾಗದಲ್ಲಿ ಪರಮಾಣು ಶಸ್ತ್ರಾಸ್ತ್ರ ಪೈಪೋಟಿ ಜೋರಾಗುತ್ತೆ ಅಂತ ಉತ್ತರ ಕೊರಿಯಾ ಹೇಳಿದೆ.
ಅಂದಹಾಗೆ, AUKUS ಅಂದ್ರೆ ಆಸ್ಟ್ರೇಲಿಯಾ, ಯುಕೆ ಹಾಗೂ ಅಮೆರಿಕ ಸೇರಿಕೊಂಡು ಒಂದು ಪರಮಾಣು ಸಬ್ಮರೀನ್ ಒಪ್ಪಂದ ಮಾಡಿಕೊಂಡಿದ್ರು. ಇದರ ಅನ್ವಯ ಆಸ್ಟ್ರೇಲಿಯಾಗೆ ಪರಮಾಣು ಚಾಲಿತ ಜಲಾಂತರ್ಗಾಮಿ ಒದಗಿಸಿ, ಚೀನಾ ವಿರುದ್ಧ ಕಾಂಗರೂಗಳನ್ನ ಬಲಾಡ್ಯಗೊಳಿಸೋ ಉದ್ದೇಶ ಇತ್ತು. ಆದ್ರೆ ಈ ಡೀಲ್ ಗಾಗಿ ಆಸ್ಟ್ರೇಲಿಯಾ, ಫ್ರಾನ್ಸ್ ಜೊತೆ ಮಾಡಿಕೊಂಡಿದ್ದ ಸಬ್ಮರೀನ್ ಡೀಲನ್ನ ಕ್ಯಾನ್ಸಲ್ ಮಾಡ್ತು. ಇದರಿಂದ ಫ್ರಾನ್ಸ್ ರೊಚ್ಚಿಗೆದ್ದಿದೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಜೊತೆ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಫ್ರಾನ್ಸ್ ಕೂಡ ಒಂದು ಮಿತ್ರದೇಶನೇ. ಆದ್ರೂ ಜೊತೆಗಿದ್ದುಕೊಂಡೇ ನಮಗೆ ಇವರೆಲ್ಲ ಸೇರಿ ಮೋಸ ಮಾಡಿದ್ದಾರೆ ಅನ್ನೋದು ಫ್ರಾನ್ಸ್ ಸಿಟ್ಟು. ಇದೇ ಸಿಟ್ಟಿಗೆ ಫ್ರಾನ್ಸ್, ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದ ತನ್ನ ರಾಯಭಾರಿಗಳನ್ನ ವಾಪಾಸ್ ಕರೆಸಿಕೊಂಡಿತ್ತು.

-masthmagaa.com

Contact Us for Advertisement

Leave a Reply