ಅಮೆರಿಕ-ಇರಾನ್ ಸಂಘರ್ಷ..3ನೇ ಮಹಾಯುದ್ಧವಾಗುತ್ತಾ..? ವಾಸ್ತವ ಏನು..?

ಹಾಯ್ ಫ್ರೆಂಡ್ಸ್….
3ನೇ ಮಹಾಯುದ್ಧದ ಆತಂಕ ಪ್ರಪಂಚದ ಮೇಲೆ ಆವರಿಸಿದೆ. ಇದಕ್ಕೆ ಕಾರಣ ಅಮೆರಿಕ ಮತ್ತು ಇರಾನ್ ಮಧ್ಯ ನಡೆದಿರುವ ಸಂಘರ್ಷ. ಅಮೆರಿಕ ಇರಾಕ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಏರ್ ಸ್ಟ್ರೈಕ್ ಮಾಡಿದೆ… 3 ಜನವರಿ 2020 ಮತ್ತು 4 ಜನವರಿ 2020.. ಈ 2 ದಿನವೂ ಬ್ಯಾಕ್ ಟು ಬ್ಯಾಕ್ ವಾಯು ದಾಳಿ ಮಾಡಿದೆ. ಮೊದಲ ವಾಯುದಾಳಿಯಲ್ಲಿ ಬಾಗ್ದಾದ್ ಏರ್ಪೋರ್ಟ್ ನಿಂದ ಹೊರಬರುತ್ತಿದ್ದ ಇರಾನ್‌ನ ಸರ್ವೋಚ್ಚ ಮಿಲಿಟರಿ ನಾಯಕ ಖಾಸಿಂ ಸೊಲೈಮನಿಯನ್ನ ಕೊಂದು ಹಾಕಲಾಗಿದೆ. 2ನೇ ದಿನವೂ ಸಹ ದಾಳಿ ನಡೆಸಿ ಇರಾಕ್ ನಲ್ಲಿರುವ ಇರಾನ್ ಪರ ಹೋರಾಟಗಾರರನ್ನ ಹತ್ಯೆ ಮಾಡಲಾಗಿದೆ. ಇದರ ಪರಿಣಾಮ ಇರಾನ್ ಮತ್ತು ಅಮೆರಿಕದ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ‌. ಹಾಗಾದ್ರೆ ಬನ್ನಿ ಇವರಿಬ್ಬರ ಈ ಗಲಾಟೆಯಿಂದ 3ನೇ ಮಹಾಯುದ್ಧದ ಆತಂಕ ಸೃಷ್ಟಿಯಾಗಿರುವುದು ಯಾಕೆ? ಭಾರತದ ಮೇಲೂ ಕೂಡ ಇದರ ಗಂಭೀರ ಪರಿಣಾಮ ಆಗುವುದು ಗ್ಯಾರಂಟಿ ಯಾಕೆ? ಭಾರತಕ್ಕೆ ಯಾವ ರೀತಿ ಸಮಸ್ಯೆಯಾಗುತ್ತೆ? ಗಲ್ಫ್​​​ ರಾಷ್ಟ್ರಗಳಲ್ಲಿರುವ ಭಾರತೀಯರ ಕಥೆ ಏನಾಗುತ್ತದೆ? ಕ್ವಿಕ್ ಆಗಿ ಒನ್ ಬೈ ಒನ್ ನೋಡ್ತಾ ಹೋಗೋಣ…

ಯುದ್ಧ ಮಾಡಿದರೆ ಅಮೆರಿಕಕ್ಕೆ ಸುಲಭ ಇಲ್ಲ!
ಹೌದು… ಈಗಾಗಲೇ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಖೊಮೇನಿ ಅಮೆರಿಕದ ಈ ದುಸ್ಸಾಹಸಕ್ಕೆ ಪ್ರತಿಕಾರದ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಕೂಡ 2003ರಲ್ಲಿ ಇರಾಕ್ ಮೇಲೆ ದಾಳಿ ಮಾಡಿ ಇರಾಕನ್ನು ಪುಡಿ ಮಾಡಿದಂತೆ ಇರಾನ್ ಮೇಲೆ ದಾಳಿ ಮಾಡಕ್ಕಾಗಲ್ಲ. ಯುದ್ಧ ನಡೆದರೆ ಅಮೆರಿಕಕ್ಕೆ ಅಷ್ಟು ಸುಲಭ ಇಲ್ಲ. ಯಾಕಂದ್ರೆ ಇರಾನ್, ಇರಾಕ್​​​​​ ಅಲ್ಲ..ಇರಾನ್ ಇರಾಕ್​​​ಗಿಂತ 4 ಪಟ್ಟು ದೊಡ್ಡದು. 2003ರಲ್ಲಿ ಇರಾಕ್ ಮೇಲೆ ಅಮೆರಿಕ ಯುದ್ಧ ಮಾಡಿದಾಗ ಜನಸಂಖ್ಯೆ ಕೇವಲ ಎರಡೂವರೆ ಕೋಟಿ. ಆದರೆ ಇರಾನ್ ಜನಸಂಖ್ಯೆ 8 ಕೋಟಿಗೂ ಹೆಚ್ಚು. ರಿಸರ್ವ್ ಸೈನಿಕರನ್ನು ಸೇರಿಸಿದರೆ ಇರಾನ್ ಸೈನಿಕರ ಸಂಖ್ಯೆ ಇರಾಕಿಗಿಂತ ಹೆಚ್ಚು ಕಮ್ಮಿ ಡಬಲ್ ಇದೆ. ಜೊತೆಗೆ ಉತ್ತರದಲ್ಲಿ ಕ್ಯಾಸ್ಪಿಯನ್ ಸಮುದ್ರ ಮತ್ತು ದಕ್ಷಿಣದಲ್ಲಿ ಫಾರಸ್ ಕೊಲ್ಲಿ ಹೊಂದಿರುವ ಇರಾನ್ ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಟರ್ಕಿ ಮತ್ತು ಇರಾಕ್ ಜೊತೆ ಗಡಿಯನ್ನು ಹಂಚಿಕೊಂಡಿದೆ. ಈ ದೇಶಗಳಲ್ಲಿ, ಅದರಲ್ಲೂ ಇರಾಕ್ ಮತ್ತು ಆಫ್ಘಾನಿಸ್ತಾನಗಳಲ್ಲಿ ತನ್ನ ಸೀಕ್ರೆಟ್ ಆರ್ಮಿಯನ್ನು ಸ್ಥಾಪಿಸಿದೆ ಇರಾನ್. ಹೀಗಾಗಿ ಅಮೆರಿಕ ನೇರವಾಗಿ ಯುದ್ಧ ಮಾಡಿದರೂ, ಇರಾನ್ ತನ್ನ ಗೆರಿಲ್ಲಾ ಯುದ್ಧದ ಮೂಲಕ ಅಮೆರಿಕಕ್ಕೆ ಭಾರಿ ನಷ್ಟವನ್ನು ಉಂಟು ಮಾಡಬಹುದು. ಮಿಡಲ್​​ ಈಸ್ಟ್​​​ನಲ್ಲಿ ಹರಡಿರುವ ಅಮೆರಿಕದ ಬಿಸಿನೆಸ್, ರಾಜತಾಂತ್ರಿಕ, ಮತ್ತು ಮಿಲಿಟರಿ ಅಸ್ತಿತ್ವಕ್ಕೆ ಇರಾನ್ ಭಾರಿ ಪೆಟ್ಟು ಕೊಡುವ ಶಕ್ತಿಯನ್ನು ಹೊಂದಿದೆ.‌ ಇತ್ತೀಚೆಗೆ ಅಣ್ವಸ್ತ್ರ ಪರೀಕ್ಷೆಯಲ್ಲೂ ಅತ್ಯಂತ ನಿಗೂಢವಾಗಿ ಇರಾನ್ ತೊಡಗಿಸಿಕೊಂಡಿದೆ. ಜೊತೆಗೆ ಅಪಾರ ಪ್ರಮಾಣದಲ್ಲಿ ಖಂಡಾಂತರ ಕ್ಷಿಪಣಿಗಳನ್ನು ಕೂಡ ಇರಾನ್ ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಂಡಿದೆ. ಜೊತೆಗೆ ಹಡಗು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅಮೆರಿಕದ ವಿರುದ್ಧ ಹೋರಾಡಲು ಜಗತ್ತಿನ ಬೇರೆ ಬೇರೆ ಭಾಗದಲ್ಲಿ ತಯಾರು ಮಾಡಿದೆ ಇರಾನ್. ಉದಾಹರಣೆಗೆ ಇರಾನ್ ಗೆ ಬೆಂಬಲ ನೀಡುವ ಲೆಬನಾನ್ ನ ಹೆಜ್ಬುಲ್ಲಾ ಗ್ರೂಪ್ ಹತ್ತಿರ 1,30,000ಕ್ಕೂ ಹೆಚ್ಚು ಅಪಾಯಕಾರಿ ರಾಕೆಟ್ ಗಳಿವೆ ಅಂತ ಅಂದಾಜು ಮಾಡಲಾಗಿದೆ.

ವಿಶ್ವಯುದ್ಧಕ್ಕೆ ಕಾರಣವಾಗುವ ಅಪಾಯ!
ಈ ಆತಂಕಕ್ಕೆ ಕಾರಣ ಮಿಡಲ್​​​ ಈಸ್ಟ್​​​​ನಲ್ಲಿ ಸದ್ಯ ಇರುವ ರಾಜಕೀಯ ಪರಿಸ್ಥಿತಿ. ಈಗ ಅಮೆರಿಕ ಇರಾನ್ ಮೇಲೆ ಯುದ್ಧವನ್ನು ಸಾರಿದರೆ ಅಮೆರಿಕದ ಮಿತ್ರರು ಹಾಗೂ ಇರಾನ್ ನ ಶತ್ರುಗಳಾಗಿರೋ ಸೌದಿ ಅರೇಬಿಯಾ ಮತ್ತು ಇಸ್ರೇಲ್ ಅಮೆರಿಕಕ್ಕೆ ಸಾಥ್ ನೀಡುತ್ತವೆ. ಆಗ ಸಹಜವಾಗಿ ಅಮೆರಿಕ, ಸೌದಿ, ಮತ್ತು ಇಸ್ರೇಲ್​​ನ ಶತ್ರುಗಳಾಗಿರುವ ಸಿರಿಯಾ, ಯೆಮೆನ್ ಮತ್ತು ಲೆಬೆನಾನ್ ಸಹಿತ ಇನ್ನೂ ಹಲವು ರಾಷ್ಟ್ರಗಳು ಇರಾನ್ ಪರವಾಗಿ ಯುದ್ಧಕ್ಕೆ ನಿಲ್ಲುತ್ತಾರೆ. ಏಕೆಂದರೆ ಇವರೆಲ್ಲ ಇರಾನ್ ಮಿತ್ರರಾಷ್ಟ್ರಗಳು. ಜೊತೆಗೆ ಆಫ್ಘಾನಿಸ್ತಾನ ಮತ್ತು ಇರಾಕ್​​​ನಲ್ಲಿ ಇರಾನ್ ರೆಡಿ ಮಾಡಿರೋ ಸೀಕ್ರೆಟ್ ಆರ್ಮಿ ಕೂಡ ಅಮೆರಿಕ ವಿರುದ್ಧ ದಾಳಿಗೆ ಇಳಿಯುತ್ತೆ. ಎಲ್ಲವೂ ಸೇರಿ ಮತ್ತೊಂದು ಮಹಾಯುದ್ಧಕ್ಕೆ ಮುನ್ನುಡಿ ಬರೆಯುವ ಆತಂಕ ಕಾಡುತ್ತಿದೆ. ಹೀಗಾಗಿ ಸ್ವತಃ ಅಮೆರಿಕಾದ ವಿಶ್ಲೇಷಕರು ಕೂಡ ಅಮೆರಿಕ ಯುದ್ಧದಿಂದ ಹಿಂದೆ ಸರಿಯಬೇಕು ಅಂತ ವಾರ್ನಿಂಗ್ ನೀಡುತ್ತಿದ್ದಾರೆ. ಯಾಕಂದ್ರೆ ಇರಾಕಿನಲ್ಲಿ ಮೂಗು ತೂರಿಸಿ ಅಮೆರಿಕ ಮೂಗನ್ನ ಜಜ್ಜಿಸಿಕೊಂಡಿರುವುದು ಇನ್ನೂ ಮರೆತಿಲ್ಲ. ಆಗ ಅಮೆರಿಕಕ್ಕೆ 2 ಟ್ರಿಲಿಯನ್ ಡಾಲರ್ ಬರೀ ಯುದ್ಧಕ್ಕೆ ಖರ್ಚಾಗಿತ್ತು. 8 ವರ್ಷಗಳ ಯುದ್ಧದಲ್ಲಿ ಒಟ್ಟು 4 ಲಕ್ಷಕ್ಕೂ ಅಧಿಕ ಜನ ಪ್ರಾಣವನ್ನೇ ಕಳೆದುಕೊಂಡಿದ್ದರು. ಇದರಲ್ಲಿ ಸಾವಿರಾರು ಅಮೆರಿಕನ್ ಸೈನಿಕರೂ ಸೇರಿದ್ದಾರೆ.

ಇಡೀ ಜಗತ್ತೇ ಯುದ್ಧದ ವಿರುದ್ಧ ಇದೆ ಯಾಕೆ ಗೊತ್ತಾ?
ಹೊರ್ಮುಜ್ ಜಲಸಂಧಿಯಿಂದ ಶುರುವಾಗಲಿದೆ ಜಗತ್ತಿಗೇ ಆತಂಕ!
ಬರಿ ಅಮೇರಿಕನ್ ವಿಶ್ಲೇಷಕರು ಮಾತ್ರವಲ್ಲ ಇಡೀ ಜಗತ್ತಿನ ಪ್ರತಿಯೊಬ್ಬ ರಾಜತಾಂತ್ರಿಕರು ಅಮೆರಿಕಕ್ಕೆ ಎಚ್ಚರಿಕೆ ಕೊಡುತ್ತಿದ್ದಾರೆ. ಇದಕ್ಕೆ ಒಂದು ಕಾರಣ ಇದು ಮತ್ತೊಂದು ವಿಶ್ವಯುದ್ಧ ಆಗುವ ಅಪಾಯ ಇರುವುದು. ಮತ್ತೊಂದು ಕಾರಣ ಇಡೀ ವಿಶ್ವದ ಆರ್ಥಿಕತೆ ಮಗುಚಿ ಬೀಳುವ ಆತಂಕ ಇರೋದು. ಇದಕ್ಕೆ ಕಾರಣ ಹೋರ್ಮುಜ್ ಜಲಸಂಧಿ… ಇರಾನ್ ನ ಉತ್ತರಭಾಗದಲ್ಲಿರೋ ಫಾರಸ್ ಕೊಲ್ಲಿಯಲ್ಲಿ ಹೋರ್ಮುಜ್ ಜಲಸಂಧಿ ಇದೆ. ಈ ಜಲಸಂಧಿಯ ಮೂಲಕ ವಿಶ್ವದ ಮೂರನೇ ಒಂದು ಭಾಗದಷ್ಟು ಪೆಟ್ರೋಲಿಯಮ್ ಉತ್ಪನ್ನಗಳ‌ ಸಾಗಾಟ ನಡೆಯುತ್ತಿದೆ. ಜಗತ್ತಿನ ಒಟ್ಟು ನೈಸರ್ಗಿಕ ಅನಿಲದಲ್ಲಿ 25% ರಷ್ಟು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಇದರ ಹೆಚ್ಚಿನ ಭಾಗವನ್ನು ಇರಾನ್ ಕಂಟ್ರೋಲ್ ಮಾಡುತ್ತೆ. ಇರಾನ್ ಒಂದು ವೇಳೆ ಈ ಮಾರ್ಗವನ್ನು ಬ್ಲಾಕ್ ಮಾಡಿದರೆ ಜಗತ್ತಿನ ಅತ್ಯಂತ ಪೆಟ್ರೋಲಿಯಂ ಬೆಲೆ ಹೆಚ್ಚುಕಮ್ಮಿ ಡಬಲ್ ಆಗುತ್ತದೆ. ಈಗಾಗಲೇ ಇರಾನ್ ಅಮೆರಿಕ ಕಿರಿಕಿರಿ ಶುರುವಾದಾಗಿನಿಂದ ದಿನೇ ದಿನೇ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಲೇ ಸಾಗಿದೆ.

ಭಾರತಕ್ಕೆ ಭಾರೀ ಆತಂಕ!
ಹೌದು..ಭಾರತಕ್ಕೆ ಎರಡು ರೀತಿಯ ಆತಂಕ… ಒಂದು ಆತಂಕ ಆರ್ಥಿಕ ವಾದದ್ದು. ಇನ್ನೊಂದು ಆತಂಕ ತನ್ನ ಪ್ರಜೆಗಳ ಸುರಕ್ಷತೆಗೆ ಸಂಬಂಧಿಸಿದ್ದು. ಆರ್ಥಿಕ ಆತಂಕ ಅಂದ್ರೆ ಆಗಲೇ ಹೇಳಿದ ಹಾಗೆ ಪೆಟ್ರೋಲಿಯಂ ವಸ್ತುಗಳ ಪೂರೈಕೆ ಕಮ್ಮಿಯಾಗಿ ಭಾರತಕ್ಕೆ ಕಚ್ಚಾತೈಲ ದುಬಾರಿಯಾಗುತ್ತೆ. ಇದರಿಂದ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಆಗಿ, ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡ ಆಗುವ ಅಪಾಯ ಇರುತ್ತದೆ. ಅಷ್ಟೇ ಅಪಾಯಕಾರಿಯಾದ ಇನ್ನೊಂದು ವಿಚಾರ ಅಂದ್ರೆ, ಮಿಡಲ್​​ ಈಸ್ಟ್​​​ನಲ್ಲಿ, ಈ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಕೆಲಸಗಾರರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಇರಾನ್-ಇರಾಕ್​ನಲ್ಲು ಇದ್ದಾರೆ. ಈಗ ಯುದ್ಧ ಆದ್ರೆ ಈ ಎರಡೂ ರಾಷ್ಟ್ರಗಳು ಮಾತ್ರವಲ್ಲದೆ ಇಡೀ middle East ನಲ್ಲಿ ಕೆಲಸ ಮಾಡುವ ಅಷ್ಟು ಭಾರತೀಯರಿಗೆ ಅತಂತ್ರ ಪರಿಸ್ಥಿತಿ ಎದುರಾಗುತ್ತೆ.

ಸೋ..ಈ ರೀತಿ ಜಗತ್ತಿನ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸಿ ಅಮೆರಿಕ ಮಾಡುವ ಕಿತಾಪತಿಗೆ ಜಗತ್ತೆಲ್ಲ ಸಮಸ್ಯೆ ಎದುರಿಸುವ ರೀತಿ ಆಗುತ್ತಿದೆ.‌‌ ಹಾಗಂತ ಒಂದು ವೇಳೆ ಯುದ್ಧ ನಡೀತು ಅಂದ್ರೆ ಅಮೆರಿಕಕ್ಕೆ ಈ ಸಲ ಖಂಡಿತ ಸುಲಭ ಇರುವುದಿಲ್ಲ. ಒಂತರಾ ಆನೆ ಸೊಂಡಿಲ ಒಳಗೆ ಇರುವೆ ನುಗ್ಗಿದ ಹಾಗೆ ಆಗುವುದು ಗ್ಯಾರಂಟಿ. ಈ ಬಗ್ಗೆ ನಿಮಗೆ ಏನನ್ನಿಸುತ್ತೆ. ಇಂತಹ ಮತ್ತಷ್ಟು ಅಂತರಾಷ್ಟ್ರೀಯ ಮಹತ್ವದ ಮಾಹಿತಿ ನಿಮಗೆ ಬೇಕು ಅಂದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ.

Contact Us for Advertisement

Leave a Reply