ಮುಂಬೈ ಲಿಂಕು.. 149 ಜನರಿಗೆ ಸೋಂಕು.. ಹಸಿರು ವಲಯದಲ್ಲಿ ಬರೀ ಮೂರು..!

masthmagaa.com:

ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 149 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆಯಾಗಿದೆ. ಆಘಾತಕಾರಿ ಅಂದ್ರೆ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ 61 ವರ್ಷದ ವೃದ್ಧ (ರೋಗಿ ನಂಬರ್ 1185), ವಿಜಯಪುರದಲ್ಲಿ 65 ವರ್ಷದ ವೃದ್ಧ (ರೋಗಿ ನಂಬರ್ 1291), ಬೆಂಗಳೂರಿನಲ್ಲಿ 54 ವರ್ಷದ ಪುರುಷ (ರೋಗಿ ನಂಬರ್ 1364) ಹಾಗೂ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ಇನ್ನು ಇವತ್ತು ಪತ್ತೆಯಾದ 149 ಪ್ರಕರಣಗಳಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ ಬರೋಬ್ಬರಿ 71 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲಾವರು ಸೋಂಕಿತರ ಪಟ್ಟಿಯಲ್ಲಿ ಮಂಡ್ಯ 2ನೇ ಸ್ಥಾನಕ್ಕೆ ಬಂದಿದೆ. ದಾವಣಗೆರೆ ಜಿಲ್ಲೆಯಲ್ಲಿ ಹೊಸದಾಗಿ 22, ಕಲಬುರಗಿಯಲ್ಲಿ 13, ಶಿವಮೊಗ್ಗದಲ್ಲಿ 10, ಬೆಂಗಳೂರು ನಗರದಲ್ಲಿ 6, ಚಿಕ್ಕಮಗಳೂರಿನಲ್ಲಿ 5, ಬಾಗಲಕೋಟೆಯಲ್ಲಿ 5, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ತಲಾ 4, ಹಾಸನದಲ್ಲಿ 3, ಉಳಿದಂತೆ ಬೀದರ್, ವಿಜಯಪುರ, ಗದಗ, ಯಾದಗಿರಿ, ರಾಯಚೂರು ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದೊಂದು ಪ್ರಕರಣ ದೃಢಪಟ್ಟಿದೆ.

ಇವತ್ತು ಪತ್ತೆಯಾದ 149 ಪ್ರಕರಣಗಳಲ್ಲಿ 105 ಜನ ಮುಂಬೈ ಮತ್ತು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 543 ಮಂದಿ ಗುಣಮುಖರಾಗಿದ್ದಾರೆ. 811 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 6 ಜನ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇನ್ನು ಇಷ್ಟುದಿನ ಗ್ರೀನ್​ ಜೋನ್​ನಲ್ಲಿದ್ದ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗೂ ಕಾಯಿಲೆ ಹರಡಿದೆ. ಹಲವು ದಿನಗಳಿಂದ ಆರೆಂಜ್​ ಜೋನ್​ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಇವತ್ತು ರೆಡ್​ ಜೋನ್​ಗೆ ಹೋಗಿದೆ. ಇನ್ನು ಕರ್ನಾಟಕದಲ್ಲಿ ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳು ಮಾತ್ರ ಇದುವರೆಗೆ ಒಂದೂ ಪ್ರಕರಣ ಕಾಣಿಸಿಕೊಳ್ಳದೆ ಕಂಪ್ಲೀಟ್ ಗ್ರೀನ್ ಆಗಿ ಉಳಿದುಕೊಂಡಿವೆ. ಬೆಂಗಳೂರು ಗ್ರಾಮಾಂತರದಲ್ಲಿ 6 ಜನರಿಗೆ ಕಾಯಿಲೆ ಬಂದಿತ್ತು. 6 ಜನ ಕೂಡ ಗುಣಮುಖರಾಗಿದ್ದಾರೆ. ಹೀಗಾಗಿ ಇದು ಕೂಡ ಗ್ರೀನ್​ ಜೋನ್​ಗೆ ಹೋಗಿದೆ.

-masthmagaa.com

Contact Us for Advertisement

Leave a Reply