ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದೇಶಿಗರು ಜೈಲಿಗೆ..!

masthmagaa.com:

ಉತ್ತರಪ್ರದೇಶ: ಭಾರತದ ಪಾಸ್​ಪೋರ್ಟ್​ ಹಾಗೂ ವೀಸಾ ನಿಯಮಗಳನ್ನು ಉಲ್ಲಂಘಿಸಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಥಾಯ್ಲೆಂಡ್​ನ 17 ಪ್ರಜೆಗಳನ್ನು ಜೈಲಿಗೆ ಕಳಿಸಲಾಗಿದೆ.

ಇವರೆಲ್ಲಾ ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತರ ಪ್ರದೇಶದ ಬಹ್ರೇಚ್​ಗೆ ಬಂದಿದ್ದರು. ಇವರಿಗೆ ಬಹ್ರೇಚ್​ನ ಸ್ಥಳೀಯರು ಎರಡು ಮಸೀದಿಗಳಲ್ಲಿ ಆಶ್ರಯ ನೀಡಿದ್ದರು. ಬಳಿಕ 17 ಮಂದಿ ವಿದೇಶಿಗರು ಸೇರಿದಂತೆ ಆಶ್ರಯ ನೀಡಿದ್ದ ನಾಲ್ವರು ಭಾರತೀಯರನ್ನ ಮಾರ್ಚ್ 31ರಂದು ವಶಕ್ಕೆ ಪಡೆದು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು.

ಪಾಸ್​ಪೋರ್ಟ್​ ಹಾಗೂ ವೀಸಾ ನಿಯಮ ಉಲ್ಲಂಘಿಸಿದ್ದ ವಿದೇಶಿಗರ ವಿರುದ್ಧ ಎಫ್​ಐಆರ್ ದಾಖಲಾಗಿದ್ದ ಹಿನ್ನೆಲೆ ಕ್ವಾರಂಟೈನ್ ಅವಧಿ ಮುಗಿದ ನಂತರ ಅವರನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯ್ತು. ಈ ವೇಳೆ ನಾಲ್ವರು ಭಾರತೀಯರು ಬಾಂಡ್​ ನೀಡಿದ್ದಕ್ಕೆ ಅವರನ್ನು ಬಿಡುಗಡೆ ಮಾಡಿ, 17 ಮಂದಿ ವಿದೇಶಿಗರನ್ನು ಜೈಲಿಗೆ ಕಳಿಸಲಾಗಿದೆ. 14 ದಿನಗಳ ಬಳಿಕ ಅವರನ್ನು ಮತ್ತೆ ಕೋರ್ಟ್​ ಮುಂದೆ ಹಾಜರುಪಡಿಸೋದಾಗಿ ಬಹ್ರೇಚ್ ಎಸ್​ಪಿ ಬಿಪಿನ್ ಮಿಶ್ರಾ ಹೇಳಿದ್ದಾರೆ.

ಬಂಧಿತರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ-1897 ಹಾಗೂ ಪಾಸ್‌ಪೋರ್ಟ್‌ ಕಾಯ್ದೆ-1967ರ ಅನ್ವಯ ಆರೋಪಗಳನ್ನು ಹೊರಿಸಲಾಗಿದೆ. ಜೊತೆಗೆ ಸೋಂಕಿನ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply