ಪಟ್ಟು ಬಿಡದ ರೈತರು-ಸರ್ಕಾರ: 8ನೇ ಸುತ್ತಿನ ಮಾತುಕತೆಯೂ ವಿಫಲ

masthmagaa.com:

ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರ ನಡುವೆ ನಡೀತಿರುವ ಹಗ್ಗಜಗ್ಗಾಟ ಮುಗಿಯೋ ಲಕ್ಷಣ ಕಾಣ್ತಿಲ್ಲ. ದೆಹಲಿಯಲ್ಲಿ ಇವತ್ತು ಸರ್ಕಾರ ಮತ್ತು ರೈತ ಮುಖಂಡರ ನಡುವೆ 8ನೇ ಸುತ್ತಿನ ಮಾತುಕತೆ ನಡೀತು. ಆದ್ರೆ ಎರಡೂ ಕಡೆಯವರು ತಮ್ಮ ಪಟ್ಟನ್ನ ಸಡಿಲ ಮಾಡಲಿಲ್ಲ. ಕೃಷಿ ಕಾನೂನುಗಳನ್ನ ವಾಪಸ್ ಪಡೆಯಲ್ಲ ಅಂತ ಸರ್ಕಾರ, ವಾಪಸ್ ಪಡೆಯೋವರೆಗೆ ನಾವ್ ಬಿಡಲ್ಲ ಅಂತ ರೈತರು ಹಠ ಹಿಡಿದಿದ್ದಾರೆ. ಇವತ್ತಿನ ಸಭೆಯಲ್ಲಿ ಓರ್ವ ಮುಖಂಡನಂತೂ, ‘ನಾವು ಸಾಯ್ತೀವಿ ಅಥವಾ ಗೆಲ್ತೀವಿ’ ಅನ್ನೋ ಬರಹವನ್ನ ಪ್ರದರ್ಶಿಸಿ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿದ್ರು. ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ಕೃಷಿ ಕಾನೂನುಗಳನ್ನ ವಾಪಸ್ ಪಡೆಯೋದನ್ನ ಹೊರತುಪಡಿಸಿ ಬೇರೆ ಏನಾದ್ರೂ ಆಯ್ಕೆಗಳು ಕೊಡುವಂತೆ ರೈತ ಸಂಘಟನೆಗಳಿಗೆ ಆಗ್ರಹಿಸಿದ್ವಿ. ಆದ್ರೆ ಬೇರೆ ಯಾವುದೇ ಆಯ್ಕೆಯನ್ನ ಅವರು ಮುಂದಿಟ್ಟಿಲ್ಲ. ಹೀಗಾಗಿ ಸಭೆ ಮುಗೀತು. ಮುಂದಿನ ಸಭೆ ಜನವರಿ 15ನೇ ತಾರೀಖು ನಡೆಯಲಿದೆ’ ಅಂತ ಹೇಳಿದ್ರು. ಇನ್ನು ರೈತ ಸಂಘಟನೆಯ ಮುಖಂಡರೊಬ್ರು ಮಾತನಾಡಿ, ‘ಕೃಷಿ ಕಾನೂನುಗಳನ್ನ ವಾಪಸ್​ ಪಡೆಯೋದೊಂದೇ ನಮ್ಮ ಆಯ್ಕೆ. ಕಾನೂನುಗಳನ್ನ ವಾಪಸ್​ ಪಡೆಯಿರಿ, ಇಲ್ಲದಿದ್ರೆ ನಮ್ಮ ಹೋರಾಟ ಮುಂದುವರಿಯುತ್ತೆ. ನಾವು ಯಾವುದೇ ಕೋರ್ಟ್​ ಮೊರೆ ಹೋಗೋದಿಲ್ಲ. ಈಗಾಗಲೇ ನಿಗದಿಪಡಿಸಿದಂತೆ ಜನವರಿ 26ರಂದು ಕೂಡ ಪರೇಡ್ ನಡೆಸ್ತೀವಿ’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply