masthmagaa.com:

ಡಿ.ಜೆ. ಹಳ್ಳಿ-ಕೆ.ಜಿ. ಹಳ್ಳಿ ಗಲಭೆ ಹಾಗೂ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಕಾಂಗ್ರೆಸ್​ ನಾಯಕ ಮತ್ತು ಬಿಬಿಎಂಪಿ ಮಾಜಿ ಮೇಯರ್ ಸಂಪತ್​ ರಾಜ್ ಅವರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಡೀ ರಾತ್ರಿ ಅಜ್ಞಾತ ಸ್ಥಳದಲ್ಲಿ ಅವರನ್ನ ವಿಚಾರಣೆಗೆ ಒಳಪಡಿಸಿ ಇಂದು ಬೆಳಗ್ಗೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಕರೆತರಲಾಯ್ತು. ಸದ್ಯ ಸಿಸಿಬಿ ಕಚೇರಿಯಲ್ಲಿ ಅವರ ವಿಚಾರಣೆ ನಡೆಯುತ್ತಿದೆ. ಅವರನ್ನ ಕೋರ್ಟ್​ ಮುಂದೆ ಹಾಜರುಪಡಿಸಿ ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಈ ಹಿಂದೆ ಕೂಡ ವಿಚಾರಣೆಗೆ ಒಳಗಾಗಿದ್ದ ಸಂಪತ್​ರಾಜ್ ಇತ್ತೀಚೆಗೆ ಕೊರೋನಾ ಸೋಂಕು ತಗುಲಿರುವುದಾಗಿ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದರು. ಅವರಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ನಿನ್ನೆಯಷ್ಟೇ ಸಂಪತ್ ​ರಾಜ್ ಸ್ನೇಹಿತ ರಿಯಾಜುದ್ಧೀನ್ ಎಂಬಾತನನ್ನ ಸಿಸಿಬಿ ಲಾಕ್ ಮಾಡಿತ್ತು. ಈತನ ಮೇಲೆ ಗಲಭೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿ ಸಹಾಯ ಮಾಡಿದ ಆರೋಪವಿದೆ.

ಸಂಪತ್​ರಾಜ್ ಬಂಧನದ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಆರೋಪಿಯಾಗಿದ್ದ ಸಂಪತ್​ ರಾಜ್ ತಲೆಮರೆಸಿಕೊಳ್ಳಬಾರದಿತ್ತು. ಈಗ ಅವರನ್ನ ಅರೆಸ್ಟ್ ಮಾಡಿದ್ದೇವೆ. ಈ ಪ್ರಕರಣದಲ್ಲಿ ಇದು ಮಹತ್ವದ ಬೆಳವಣಿಗೆ. ಈಗಾಗಲೇ ಇರುವ ಸಾಕ್ಷ್ಯಾಧಾರಗಳು ಮತ್ತು ಸಂಪತ್​ರಾಜ್ ಬಂಧನ ಬಳಿಕ ಸಿಗುವ ಸಾಕ್ಷ್ಯಾಧಾರಗಳಿಂದ ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನೋ ಸ್ಪಷ್ಟ ಚಿತ್ರಣ ಸಿಗಲಿದೆ’ ಅಂತ ಹೇಳಿದ್ದಾರೆ.

ಮತ್ತೊಂದುಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಸಂಪತ್ ರಾಜ್ ಓಡಿ ಹೋಗಿದ್ದರು ಅಂತ ಹೇಗೆ ಹೇಳೋದು. ಯಾರೋ ಹೇಳಿದ್ರು ಅಂತ ಓಡಿಹೋಗಿದ್ರು ಅನ್ನೋಕ್ಕಾಗಲ್ಲ. ಸಂಪತ್​ರಾಜ್​ ಆಗಲೀ, ಡಿ.ಕೆ. ಶಿವಕುಮಾರ್ ಆಗಲೀ ಕಾನೂನಿಗೆ ಗೌರವ ಕೊಡಬೇಕು. ಬಿಜೆಪಿ ಅಧಿಕಾರದ ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್​ಗೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದೆ. ಕಾಂಗ್ರೆಸ್​ನ ಎಲ್ಲಾ ನಾಯಕರನ್ನ ಸಿಲುಕಿಸೋದು ಬಿಜೆಪಿ ಉದ್ದೇಶ. ನಾನು ಅಖಂಡ ಶ್ರೀನಿವಾಸ ಮೂರ್ತಿ ಪರವಾಗಿ ಇಲ್ಲ ಅಂತ ಯಾರು ಹೇಳಿದ್ದು. ಘಟನೆ ನಡೆದ ಮರುದಿನವೇ ನಾನು ಮತ್ತು ಪಕ್ಷದ ನಾಯಕರು ಅವರ ಮನೆಗೆ ಹೋಗಿದ್ದೆವು’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply