ಜಿನ್​ಪಿಂಗ್ ಅವರನ್ನ ‘ಕೋಡಂಗಿ’ ಎಂದವನ ವಿರುದ್ಧ ತನಿಖೆ..!

masthmagaa.com:

ಕೊರೋನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸಲು ವಿಫಲವಾದ ಚೀನಾ ಅಧ್ಯಕ್ಷ ಜಿನ್​ಪಿಂಗ್ ಅವರನ್ನು ‘ಕೋಡಂಗಿ’ ಅಂತ ಕರೆದಿದ್ದ ಕಮ್ಯುನಿಸ್ಟ್ ಪಕ್ಷದ ಪ್ರಭಾವಿ ವಿಮರ್ಶಕ ರೆನ್ ಝಿಕ್ವಿಯಾಂಗ್ ವಿರುದ್ಧ ಅಲ್ಲಿನ ಸರ್ಕಾರ ತನಿಖೆ ನಡೆಸುತ್ತಿದೆ. ಇವರ ವಿರುದ್ಧ ಕಾನೂನು ಮತ್ತು ಶಿಸ್ತಿನ ಗಂಭೀರ ಉಲ್ಲಂಘನೆಯ ಆರೋಪದಡಿ ತನಿಖೆ ನಡೀತಿದೆ.

ಆಡಳಿತ ಪಕ್ಷದ ಸದಸ್ಯರಾಗಿರೋ ರೆನ್ ಝಿಕ್ವಿಯಾಂಗ್, ಚೀನಾ ಅಧ್ಯಕ್ಷರ ಹೆಸರನ್ನು ಉಲ್ಲೇಖಿಸದೇ ‘ಕೋಡಂಗಿ’ ಅಂತ ವಿಮರ್ಶಾತ್ಮಕ ಪ್ರಬಂಧವನ್ನ ಬರೆದಿದ್ದರು. ಬಳಿಕ ಏಕಾಏಕಿ ನಾಪತ್ತೆಯಾಗಿದ್ದ ಅವರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಇದೀಗ ಚೀನಾದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅವರನ್ನ ತನಿಖೆಗೆ ಒಳಪಡಿಸಿದ್ದಾರೆ ಅನ್ನೋದು ಗೊತ್ತಾಗಿದೆ.

ಸೂಕ್ಷ್ಮ ವಿಷಯಗಳ ಬಗ್ಗೆ ಹೇಳಿಕೆ ಕೊಡೋದ್ರಲ್ಲಿ ರೆನ್​ ಝಿಕ್ವಿಯಾಂಗ್ ಹೆಸರುವಾಸಿ. 2016ರಲ್ಲಿ ಸರ್ಕಾರದ ನೀತಿಯನ್ನ ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಅವರನ್ನು ಶಿಕ್ಷಿಸಲಾಗಿತ್ತು. ಲಕ್ಷಾಂತರ ಫಾಲೋವರ್ಸ್ ಹೊಂದಿದ್ದ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನ ಬಂದ್ ಮಾಡಲಾಗಿತ್ತು.

ಇನ್ನು ಕೊರೋನಾ ವೈರಸ್ ವಿಚಾರದಲ್ಲಿ ಚೀನಾ ಮೇಲೆ ಅಮೆರಿಕ ಸೇರಿದಂತೆ ಸಾಕಷ್ಟು ದೇಶಗಳಿಗೆ ಅನುಮಾನವಿದೆ. ಕೊರೋನಾ ಬಗ್ಗೆ ಆರಂಭದಲ್ಲಿ ಎಚ್ಚರಿಸಿದ್ದ ವೈದ್ಯರಿಗೆ ಬೆದರಿಕೆ ಒಡ್ಡಿದ್ದು ಒಂದುಕಡೆಯಾದ್ರೆ, ಸಾವಿನ ಸಂಖ್ಯೆ ಬಗ್ಗೆಯೂ ತಪ್ಪು ಮಾಹಿತಿ ನೀಡುತ್ತಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply