masthmagaa.com:

2019ರ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಮೊದಲು ಕಾಣಿಸಿಕೊಂಡು ಸದ್ಯ ಜಗತ್ತಿನಾದ್ಯಂತ ಆರ್ಭಟಿಸುತ್ತಿರೋ ಕೊರೋನಾ ವೈರಸ್​ಗೆ ಚೀನಾದ ಸಿನೊಫಾರ್ಮ್​ ಅಭಿವೃದ್ಧಿಪಡಿಸಿರುವ ಲಸಿಕೆ ವರ್ಷಾಂತ್ಯಕ್ಕೆ ಜನಬಳಕೆಗೆ ಸಿಗಬಹುದು ಅಂತ ಕಂಪನಿ ಹೇಳಿದೆ. ಚೀನಾದಲ್ಲಿ ಕೊರೋನಾ ಹಾವಳಿ ಕಡಿಮೆಯಾಗಿರುವುದರಿಂದ ಲಸಿಕೆಯ ಮಾನವ ಪ್ರಯೋಗ ನಡೆಸಲು ಸಮಸ್ಯೆ ಉಂಟಾಗಿದೆ. ಹೀಗಾಗಿ ಲಸಿಕೆಯು 2021ರಲ್ಲಿ ಜನ ಸಾಮಾನ್ಯರಿಗೆ ಲಭ್ಯವಾಗಬಹುದು ಅಂತ ಅಂದಾಜಿಸಲಾಗಿತ್ತು. ಆದ್ರೀಗ ಈ ವರ್ಷವೇ ಚೀನಾದ ಲಸಿಕೆ ಸಿಗುವ ಸಾಧ್ಯತೆ ಇದೆ.

ಈ ಲಸಿಕೆಯನ್ನು ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್ ​ಆದ ಸಿನೊಫಾರ್ಮ್ ಅಭಿವೃದ್ಧಿಪಡಿಸಿದ್ದು ಸದ್ಯ 3ನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಕೊನೆಯ ಹಂತದ ಮಾನವ ಪ್ರಯೋಗವನ್ನು ಮುಗಿಸಲು ಉದ್ದೇಶಿಸಲಾಗಿದೆ ಅಂತ ಸಿನೊಫಾರ್ಮ್ ಅಧ್ಯಕ್ಷ ಲಿಯು ಜಿಂಗ್​ಝೆನ್ ಹೇಳಿದ್ದಾರೆ.

ಅಂದ್ಹಾಗೆ ಆಕ್ಸ್​ಫರ್ಡ್ ಯುನಿವರ್ಸಿಟಿ-ಅಸ್ಟ್ರಝೆನೆಕಾ ಅಭಿವೃದ್ಧಿಪಡಿಸಿರುವ ಲಸಿಕೆ ವರ್ಷಾಂತ್ಯದಲ್ಲಿ ಸಿಗಬಹುದು ಅಂತ ಹೇಳಲಾಗ್ತಿದೆ. ಮತ್ತೊಂದುಕಡೆ ರಷ್ಯಾ ಸಂಶೋಧಕರು ಅಭಿವೃದ್ಧಿಪಡಿಸಿರುವ ಲಸಿಕೆ ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಜನಬಳಕೆಗೆ ಸಿಗಬಹುದು ಎನ್ನಲಾಗ್ತಿದೆ. ಇದೀಗ ಚೀನಾದ ಸಿನೊಫಾರ್ಮ್ ಅಭಿವೃದ್ಧಿಪಡಿಸಿರುವ ಲಸಿಕೆ ಕೂಡ ಈ ವರ್ಷವೇ ಲಭ್ಯವಾಗಬಹುದು ಅಂತ ಕಂಪನಿ ಹೇಳಿಕೊಂಡಿದೆ. ಎಲ್ಲವೂ ಅಂದುಕೊಂಡಂತೆಯಾದ್ರೆ 2020ರಲ್ಲೇ ಕೊರೋನಾ ವೈರಸ್​ನ ಮೂರು ಲಸಿಕೆಗಳು ಜನರ ಕೈಗೆ ಸಿಗುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply