masthmagaa.com:

ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಎರಡೂ ಕ್ಷೇತ್ರಗಳಿಗೆ ನವೆಂಬರ್ 3ರಂದು ಮತದಾನ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ಸೇರಿದಂತೆ 9 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್​ 3ರಂದು ಚುನಾವಣೆ ನಡೆಯಲಿದೆ.

ಕಾಂಗ್ರೆಸ್​ನ ಮಾಜಿ ಶಾಸಕ ಮುನಿರತ್ನ ರಾಜೀನಾಮೆಯಿಂದ ರಾಜರಾಜೇಶ್ವರಿ ನಗರ ಕ್ಷೇತ್ರ ತೆರವಾಗಿತ್ತು. ಅದೇ ರೀತಿ ಜೆಡಿಎಸ್​ ಶಾಸಕ ಬಿ. ಸತ್ಯನಾರಾಯಣ ನಿಧನದಿಂದ ಶಿರಾ ಕ್ಷೇತ್ರ ಕೂಡ ತೆರವಾಗಿತ್ತು. ಈ ಎರಡೂ ಕ್ಷೇತ್ರಗಳಿಗೀಗ ಚುನಾವಣೆ ನಡೆಯಲಿದೆ. ಶಿರಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ ಕಣಕ್ಕಿಳಿದಿದ್ದಾರೆ. ಉಳಿದ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸಿಲ್ಲ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಪಡೆದು ಮುನಿರತ್ನ ಕಣಕ್ಕಿಳಿಯುವ ಸಾಧ್ಯತೆ ಇದೆ.

ಉಪಚುನಾವಣೆಗೆ ಸಂಬಂಧಿಸಿದಂತೆ ಅಕ್ಟೋಬರ್ 10ರಂದು ಅಧಿಸೂಚನೆ ಪ್ರಕಟವಾಗಲಿದೆ. ಅಕ್ಟೋಬರ್​ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 19 ಕೊನೆಯ ದಿನಾಂಕವಾಗಿದೆ. ಉಪಚುನಾವಣೆ ದಿನಾಂಕ ಘೋಷಣೆಯಾಗಿರೋದ್ರಿಂದ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

ಇನ್ನು ಬಿಹಾರದ 1 ಲೋಕಸಭಾ ಕ್ಷೇತ್ರ ಮತ್ತು ಮಣಿಪುರದ 2 ವಿಧಾಸಭಾ ಕ್ಷೇತ್ರಗಳ ಉಪಚುನಾವಣೆ ನವೆಂಬರ್ 7ರಂದು ನಡೆಯಲಿದೆ. ಇದರ ಫಲಿತಾಂಶವೂ ನವೆಂಬರ್ 10ರಂದೇ ಹೊರಬೀಳಲಿದೆ. ಈ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡು ಬೈಎಲೆಕ್ಷನ್​ ನಡೆಸಬೇಕಿದೆ.

ಆದ್ರೆ ಕೊರೋನಾ ಹಾವಳಿ ಹೆಚ್ಚಿರುವ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತೆರವಾಗಿರುವ ಕ್ಷೇತ್ರಗಳಿಗೆ ಸದ್ಯಕ್ಕೆ ಉಪಚುನಾವಣೆ ನಡೆಸದಿರಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಈ ರಾಜ್ಯಗಳಲ್ಲಿ ಉಪಚುನಾವಣೆ ನಡೆಸಲು ಕಷ್ಟವಾಗಬಹುದು ಅಂತ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆ ಈ ರೀತಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply