masthmagaa.com:

ಭಾರತ-ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಅಲ್ಲಿನ ಪರಿಸ್ಥಿತಿ ಬಗ್ಗೆ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ರಾಜ್​ನಾಥ್​ ಸಿಂಗ್, ‘ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್​ನಲ್ಲಿ ಸುಮಾರು 38,000 ಚದರ ಕಿ.ಮೀ.ನಷ್ಟು ಭೂಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಚೀನಾ ಈ ಪ್ರದೇಶದಲ್ಲಿ ಹಾಗೆಯೇ ಮುಂದುವರಿದಿದೆ. ಇದರ ಜೊತೆಗೆ 1963ರಲ್ಲಿ ಚೀನಾ-ಪಾಕಿಸ್ತಾನ ನಡುವೆ ನಡೆದ ಗಡಿ ಒಪ್ಪಂದದ ಪ್ರಕಾರ ಪಾಕಿಸ್ತಾನವು ಭಾರತಕ್ಕೆ ಸೇರಿದ ಪಾಕ್​ ಆಕ್ರಮಿತ ಕಾಶ್ಮೀರದ 5,180 ಚದರ ಕಿ.ಮೀ. ಪ್ರದೇಶವನ್ನು ಕಾನೂನುಬಾಹಿರವಾಗಿ ಚೀನಾಗೆ ಕೊಟ್ಟಿದೆ’ ಅಂತ ಹೇಳಿದ್ದಾರೆ.

ಇದಷ್ಟೇ ಅಲ್ಲದೆ ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿ ಸುಮಾರು 90,000 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಚೀನಾ ತನ್ನದೆಂದು ಚೀನಾ ಹೇಳ್ತಿದೆ ಅಂತ ರಾಜ್​ನಾಥ್ ಸಿಂಗ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಗಡಿಯಲ್ಲಿ ಚೀನಾ ನಡೆಸುತ್ತಿರುವ ಕಿತಾಪತಿ ಎರಡೂ ದೇಶಗಳ ನಡುವಿನ ಹಲವು ಒಪ್ಪಂದಗಳನ್ನು ಉಲ್ಲಂಘಿಸಿರೋದನ್ನು ತೋರಿಸುತ್ತದೆ. ಗಡಿಯಲ್ಲಿ ಚೀನಾ ಸೇನಾ ಜಮಾವಣೆ ಮಾಡುತ್ತಿರೋದು 1993 ಮತ್ತು 1996ರ ಒಪ್ಪಂದಗಳಿಗೆ ವಿರುದ್ಧವಾಗಿದೆ. ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ವಾಸ್ತವ ನಿಯಂತ್ರಣ ರೇಖೆಯನ್ನು ಗೌರವಿಸುವುದು ಮತ್ತು ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ.

ಸೇನಾ ಜಮಾವಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಳೆದ ಹಲವು ದಶಗಳಿಂದ ಗಡಿ ಭಾಗದಲ್ಲಿ ಚೀನಾ ಮೂಲಸೌಕರ್ಯ ನಿರ್ಮಾಣ ಕೆಲಸವನ್ನು ಕೈಗೊಂಡಿದೆ. ಭಾರತ ಕೂಡ ಮೂಲಸೌಕರ್ಯ ಅಭಿವೃದ್ಧಿಗೆ ಮೊದಲಿಗಿಂತ ಎರಡುಪಟ್ಟು ಹೆಚ್ಚು ಅನುದಾನ ಬಿಡುಗಡೆ ಮಾಡಿದೆ.

ಈ ವರ್ಷದ ಪರಿಸ್ಥಿತಿ ಹಿಂದೆಂದಿಗಿಂತಲೂ ಭಿನ್ನವಾಗಿದೆ ಎಂದ ರಕ್ಷಣಾ ಸಚಿವರು, ನಾವು ಶಾಂತಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ. ಅಟ್​ ದಿ ಸೇಮ್ ಟೈಂ ಎಲ್ಲಾ ಪರಿಸ್ಥಿತಿಗಳನ್ನ ಎದುರಿಸಲು ಕೂಡ ರೆಡಿಯಾಗಿದ್ದೇವೆ ಅಂತ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply