ಮಾಸ್ಕ್ ಧರಿಸಿದ್ರೆ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತೆ: ಹೇಗೆ ಗೊತ್ತಾ..?

masthmagaa.com:

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು ಉತ್ತಮ ಅಂತ ಮೊದಲಿನಿಂದಲೂ ಹೇಳಲಾಗ್ತಿದೆ. ಇದೀಗ ಮಾಸ್ಕ್ ಧರಿಸುವುದರಿಂದ ಮತ್ತೊಂದು ದೊಡ್ಡ ಉಪಯೋಗ ಇದೆ ಅಂತ ತಜ್ಞರು ಹೇಳಿದ್ದಾರೆ. ಮಾಸ್ಕ್ ಧರಿಸುವುದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗಲಿದೆ ಅಂತ ಅಧ್ಯಯನ ವರದಿವೊಂದು ತಿಳಿಸಿದೆ.

ಅಂದ್ಹಾಗೆ ಈ ಅಧ್ಯಯನ ವರದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಕಲ್​ನಲ್ಲಿ ಪ್ರಕಟವಾಗಿದೆ. ಇದರಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಫೇಸ್​ ಮಾಸ್ಕ್​ಗಳು ‘ವೆರೆಯೋಲೇಷನ್​’ನಂತೆ ಕೆಲಸ ಮಾಡಬಹುದು ಅಂತ ಹೇಳಲಾಗಿದೆ.

ತಜ್ಞರ ಪ್ರಕಾರ ಡ್ರಾಪ್ಲೆಟ್ಸ್​ ಮೂಲಕ ಹೊರಬರುವ ಸಾಂಕ್ರಾಮಿಕ ಅಂಶಗಳನ್ನ ಮಾಸ್ಕ್​ ಫಿಲ್ಟರ್ ಮಾಡುತ್ತದೆ. ಮಾಸ್ಕ್ ಧರಿಸಿ ಸೀನುವುದರಿಂದ ಅಥವಾ ಕೆಮ್ಮುವುದರಿಂದ ವೈರಾಣು ಕಡಿಮೆ ಪ್ರಮಾಣದಲ್ಲಿ ಹೊರಬರುತ್ತದೆ. ಹೀಗೆ ಹೊರಬಂದ ಸಣ್ಣ ಪ್ರಮಾಣದ ಸಾಂಕ್ರಾಮಿಕ ಅಂಶಗಳಿಂದ ಬೇರೆಯವರಿಗೆ ಸೋಂಕು ತಗುಲಿದ್ರೆ ಅವರಲ್ಲಿ ವೈರಾಣು ವಿರುದ್ಧ ರೋಗ ನಿರೋಧಕ ಶಕ್ತಿ ರೂಪುಗೊಳ್ಳುತ್ತದೆ. ಜೊತೆಗೆ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಅನ್ನೋದು ವಿಜ್ಞಾನಿಗಳ ವಾದ. ಸಿಡುಬಿಗೆ ಲಸಿಕೆ ಕಂಡು ಹಿಡಿಯುವವರೆಗೂ ‘ವೆರೆಯೋಲೇಷನ್’​ ಮೊರೆ ಹೋಗಲಾಗಿತ್ತು ಅಂತ ಅಧ್ಯಯನ ವರದಿ ಹೇಳಿದೆ.

ವೆರೆಯೋಲೇಷನ್ ಅಂದ್ರೆ ಏನು..?

ವೆರೆಯೋಲೇಷನ್ ಅನ್ನು ಮೊದಲು ಸಿಡುಬಿನ ವಿರುದ್ಧ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಯ್ತು. ಇದರಲ್ಲಿ ಸಿಡುಬಿನ ಗುಳ್ಳೆಗಳಿಂದ ನೀರನ್ನು ತೆಗೆದು ಬೇರೆಯವರಿಗೆ ಕೊಟ್ಟು ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಇದರಿಂದ ವ್ಯಕ್ತಿಗೆ ಸಣ್ಣ ಪ್ರಮಾಣದಲ್ಲಿ ಸೋಂಕು ತಗುಲಿದ್ರೂ, ಪೂರ್ಣ ಪ್ರಮಾಣದ ರೋಗದಿಂದ ರಕ್ಷಣೆ ಸಿಗುತ್ತದೆ. ಈಗ ಕೊರೋನಾ ಸಂದರ್ಭದಲ್ಲಿ ಮಾಸ್ಕ್ ಧರಿಸುವುದರಿಂದ ಇದೇ ರೀತಿಯ ಫಲಿತಾಂಶ ಸಿಗಬಹುದು ಅಂತ ವಿಜ್ಞಾನಿಗಳು ಊಹಿಸಿದ್ಧಾರೆ.

ಮಾಸ್ಕ್​ನಿಂದ ಸೋಂಕು ದುರ್ಬಲ..!

ಇನ್ನು ಮಾಸ್ಕ್​ನಿಂದ ಕೊರೋನಾ ಸೋಂಕು ದುರ್ಬಲವಾಗಬಹುದು ಅನ್ನೋದಕ್ಕೆ ವಿಜ್ಞಾನಿಗಳು ಅರ್ಜೆಂಟೀನಾ ಹಡಗಿನ ಉದಾಹರಣೆಯನ್ನ ನೀಡಿದ್ದಾರೆ. ಹಡಗಿನಲ್ಲಿದ್ದವರಿಗೆ ಸರ್ಜಿಕಲ್ ಮಾಸ್ಕ್​ ಮತ್ತು N-95 ಮಾಸ್ಕ್​ಗಳನ್ನ ನೀಡಿದ ನಂತರ ಲಕ್ಷಣರಹಿತ ಸೋಂಕಿನ ಪ್ರಮಾಣವು ಶೇಕಡಾ 81 ರಷ್ಟಿತ್ತು. ಆದ್ರೆ ಸಾರ್ವತ್ರಿಕ ಮಾಸ್ಕ್ ಬಳಕೆ ಇಲ್ಲದ ಸಮಯದಲ್ಲಿ ಬೇರೆ ಹಡಗುಗಳಲ್ಲಿ ಸೋಂಕು ಸ್ಫೋಟಗೊಂಡಾಗ ಲಕ್ಷಣರಹಿತ ಸೋಂಕಿನ ಪ್ರಮಾಣವು ಕೇವಲ 20 ಪರ್ಸೆಂಟ್​ನಷ್ಟಿತ್ತು. ಅಂದ್ರೆ ಒಳ್ಳೆಯ ಮಾಸ್ಕ್ ಸೋಂಕನ್ನು ದುರ್ಬಲಗೊಳಿಸುತ್ತದೆ ಅನ್ನೋದನ್ನ ಇದು ಸೂಚಿಸುತ್ತದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply