ಪರಮಾಣು ಶಸ್ತ್ರಾಸ್ತ್ರದಲ್ಲಿ ಯಾರು ಶಕ್ತಿಶಾಲಿ..? ಸಿಪ್ರಿ ವರದಿಯಲ್ಲೇನಿದೆ..?

masthmagaa.com:

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷದ ಆರಂಭದಲ್ಲಿ ಪರಮಾಣು ಬಾಂಬ್​​ಗಳ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ ಅಂತ ಸಿಪ್ರಿ ಅಂದ್ರೆ Stockholm International Peace Research Institute ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. 2020ರಲ್ಲಿ ಇಡೀ ವಿಶ್ವದಲ್ಲಿ ಒಟ್ಟು 13,400 ಪರಮಾಣು ಬಾಂಬ್​​ಗಳಿದ್ವು. ಆದ್ರೆ ಈ ವರ್ಷದ ಆರಂಭದಲ್ಲಿ ಅವುಗಳ ಸಂಖ್ಯೆ 13,080ಕ್ಕೆ ಇಳಿಕೆಯಾಗಿದೆ. ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ನಾರ್ಥ್ ಕೊರಿಯಾ ಬಳಿ ಈ ಪರಮಾಣು ಬಾಂಬ್​​ಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಪರಮಾಣು ಬಾಂಬ್​​ಗಳ ಸಂಖ್ಯೆಯಲ್ಲಿ ಕಡಿಮೆಯಾಗಿದ್ರೂ ಕೂಡ, ಕೂಡಲೇ ಬಳಸಬಹುದಾದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2020ರಲ್ಲಿ ತಕ್ಷಣದ ದಾಳಿಗೆ 3720 ಪರಮಾಣು ಬಾಂಬ್​ಗಳನ್ನು ನಿಯೋಜಿಸಲಾಗಿತ್ತು. ಅದೇ ಈ ವರ್ಷದ ಆರಂಭದಲ್ಲಿ ಇವುಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯೇ ಆಗಿದ್ದು, 3825 ಬಾಂಬ್​​ಗಳು ಎನಿಟೈಮ್ ದಾಳಿಗೆ ರೆಡಿಯಾಗಿ ನಿತ್ಕೊಂಡಿವೆ. ಇವುಗಳ ಪೈಕಿ 2 ಸಾವಿರ ಬಾಂಬ್​​​ ಅಮೆರಿಕ, ರಷ್ಯಾಗೆ ಸೇರಿವೆ. ಇವೆರಡೂ ದೇಶಗಳು ನಿರಂತರವಾಗಿ ಪರಮಾಣು ಶಕ್ತಿಯನ್ನು ವೃದ್ದಿಸಿಕೊಳ್ಳುತ್ತಲೇ ಇವೆ. ರಷ್ಯಾದ ಬಳಿ 6 ಸಾವಿರಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳಿದ್ದು, ಅಮೆರಿಕದ ಬಳಿ ಐದೂವರೆ ಸಾವಿರದಷ್ಟು ಪರಮಾಣು ಶಸ್ತ್ರಾಸ್ತ್ರಗಳಿವೆ ಅಂತ ಸಿಪ್ರಿ ತಿಳಿಸಿದೆ. ಅಷ್ಟೇ ಅಲ್ಲ.. ವಿಶ್ವ ಆಳೋ ಕನಸು ಕಾಣ್ತಿರೋ ಚೀನಾ ಕಳೆದ ವರ್ಷ 30 ಬಾಂಬ್ ಉತ್ಪಾದಿಸಿದ್ದು, ಒಟ್ಟು 350 ಬಾಂಬ್ ಹೊಂದಿದೆ. ಅದೇ ಆರ್ಥಿಕ ವ್ಯವಸ್ಥೆ ಕಂಗೆಟ್ಟು ಹೋಗಿದ್ರೂ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ದುಡ್ಡು ಸುರೀತಾ ಇದೆ. ಕಳೆದೊಂದು ವರ್ಷದಲ್ಲಿ ಪಾಕಿಸ್ತಾನ 5 ಹೊಸ ಪರಮಾಣು ಬಾಂಬ್ ರೆಡಿ ಮಾಡ್ಕೊಂಡಿದ್ದು, ಒಟ್ಟು ಬಾಂಬ್​​ಗಳ ಸಂಖ್ಯೆ 165ಕ್ಕೆ ಏರಿಕೆಯಾಗಿದೆ. ಇನ್ನು ಭಾರತ ಕಳೆದ ವರ್ಷ 6 ಹೊಸ ಪರಮಾಣು ಬಾಂಬ್ ಉತ್ಪಾದಿಸಿದ್ದು, ಒಟ್ಟು 156 ಬಾಂಬ್​​ಗಳಿವೆ.. ಅದೇ ಕಿಮ್ ಜಾಂಗ್ ಉನ್ ಬಳಿ 40ರಿಂದ 50 ಬಾಂಬ್​​ಗಳಿವೆ ಅಂತ ಸಿಪ್ರಿ ತನ್ನ ವಾರ್ಷಿಕ ವರದಿಯಲ್ಲಿ ಮಾಹಿತಿ ಕೊಟ್ಟಿದೆ. ಜೊತೆಗೆ ಕಳೆದ ವರ್ಷ ಜಗತ್ತಿನ 39 ದೇಶಗಳಲ್ಲಿ ಮಿಲಿಟರಿ ಸಂಘರ್ಷ ಏರ್ಪಟ್ಟಿತ್ತು. 2019ಕ್ಕೆ ಹೋಲಿಸಿದ್ರೆ ಇದು ಜಾಸ್ತಿಯೇ ಆಗಿತ್ತು. ಆದ್ರೂ ಕೂಡ ಮಿಲಿಟರಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ ಮಾತ್ರ ಕಡಿಮೆ ಇತ್ತು ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply