WHO ವಿರುದ್ಧ ತನಿಖೆಗೆ ಭಾರತ ಒತ್ತಾಯ.. ಬಯಲಾಗುತ್ತಾ ಚೀನಾ ಕರ್ಮಕಾಂಡ..?

masthmagaa.com:

ಜಾಗತಿಕ ಪಿಡುಗಾಗಿರೋ ಕೊರೋನಾ ಬಿಕ್ಕಟ್ಟನ್ನು ವಿಶ್ವ ಆರೋಗ್ಯ ಸಂಸ್ಥೆ ಸರಿಯಾಗಿ ನಿರ್ವಹಿಸಿಲ್ಲ. ಅದು ಚೀನಾದ ಏಜೆಂಟ್​ ರೀತಿ ವರ್ತಿಸುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಭಾರತ ಕೂಡ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧದ ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ.

ಕೊರೋನಾಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಸ್ವತಂತ್ರ ತನಿಖೆ ನಡೆಸುವಂತೆ ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಒಕ್ಕೂಟ ಒತ್ತಾಯಿಸಿದ್ದವು. ಅದಾದ ಬಳಿಕ ಹಲವು ದೇಶಗಳು ಈ ಜಂಟಿ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದವು.

ಸ್ವಿಜರ್​ಲ್ಯಾಂಡಿನ ಜಿನಿವಾದಲ್ಲಿ ಇಂದಿನಿಂದ 73ನೇ ವಿಶ್ವ ಆರೋಗ್ಯ ಅಸೆಂಬ್ಲಿ (WHA) ಆರಂಭವಾಗಲಿದೆ. ಈ ಸಭೆಗೆ ಪ್ರಸ್ತಾಪಿಸಲಾಗಿರುವ ಕರಡು ನಿರ್ಣಯದ ಪ್ರಕಾರ ಭಾರತ ಸೇರಿದಂತೆ ಒಟ್ಟು 62 ದೇಶಗಳು ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಒಕ್ಕೂಟದ ಈ ಜಂಟಿ ಪ್ರಯತ್ನವನ್ನ ಬೆಂಬಲಿಸಿವೆ.

ಈ ಕರಡು ಪ್ರತಿಯಲ್ಲಿ ಕೊರೋನಾ​ ಬಿಕ್ಕಟ್ಟಿನ ಬಗ್ಗೆ ‘ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ’ ತನಿಖೆ ನಡೆಸಬೇಕು. ಅಲ್ಲದೆ ಈ ಬಿಕ್ಕಟ್ಟನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಗೆ ನಿಭಾಯಿಸಿದೆ, ಯಾವ ರೀತಿ ಪ್ರತಿಕ್ರಿಯಿಸಿದೆ, ಏನೆಲ್ಲಾ ಕ್ರಮಗಳನ್ನ ತೆಗೆದುಕೊಂಡಿದೆ ಅನ್ನೋದ್ರ ಬಗ್ಗೆಯೂ ತನಿಖೆ ನಡೆಯಬೇಕು ಅಂತ ಹೇಳಲಾಗಿದೆ.

ಜಪಾನ್, ಬ್ರಿಟನ್, ನ್ಯೂಜಿಲ್ಯಾಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್, ಕೆನಡಾ ಮುಂತಾದ ದೇಶಗಳು ಕೂಡ ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಒಕ್ಕೂಟದ ಈ ಕರಡು ನಿರ್ಣಯವನ್ನ ಬೆಂಬಲಿಸಿವೆ.

-masthmagaa.com
Contact Us for Advertisement

Leave a Reply