masthmagaa.com:

ಕೊರೋನಾ ಹೊಡೆತಕ್ಕೆ ಮುಂದೂಡಿಕೆಯಾಗಿದ್ದ ಕಲರ್​ಫುಲ್​ ಟೂರ್ನಿ ಐಪಿಎಲ್ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಆರಂಭವಾಗಲಿದೆ ಅಂತ ಪಿಟಿಐ ಸುದ್ದಿಸಂಸ್ಥೆಗೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ. 51 ದಿನಗಳ ಕಾಲ ನಡೆಯಲಿರುವ ಟೂರ್ನಿಯ ಫೈನಲ್ ಪಂದ್ಯವು ನವೆಂಬರ್ 8ರಂದು ನಡೆಯಲಿದೆ. ಐಪಿಎಲ್ ಆಯೋಜಿಸಲು ಕೇಂದ್ರ ಸರ್ಕಾರ ಕೂಡ ಅನುಮತಿ ನೀಡಲಿದೆ ಅನ್ನೋ ನಿರೀಕ್ಷೆ ಇದೆ ಅಂತ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ಅಕ್ಟೋಬರ್-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್​ ಮುಂದೂಡಿಕೆಯಾದ ಬೆನ್ನಲ್ಲೇ ಐಪಿಎಲ್ ದಾರಿ ಸುಗಮವಾಗಿತ್ತು. ಇದರ ಬೆನ್ನಲ್ಲೇ ಇತ್ತೀಚೆಗೆ ಮಾತನಾಡಿದ್ದ ಬ್ರಿಜೇಶ್ ಪಟೇಲ್, ಈ ಬಾರಿಯ ಟೂರ್ನಿ ಯುಎಇನಲ್ಲಿ ನಡೆಸಲಾಗುವುದು ಅಂತ ಹೇಳಿದ್ದರು. ಇದೀಗ ದಿನಾಂಕ ಕೂಡ ಪ್ರಕಟಿಸಿರುವುದರಿಂದ ಕಲರ್​ಫುಲ್ ಟೂರ್ನಿ ನಡೆಯೋದು ಬಹುತೇಕ ಪಕ್ಕಾ ಆಗಿದೆ.

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಪಾಲಿಸಲಾಗುತ್ತದೆ. ಆದ್ರೆ ಕ್ರೀಡಾಂಗಣಕ್ಕೆ ಬರಲು ಪ್ರೇಕ್ಷಕರಿಗೆ ಅವಕಾಶ ಕೊಡಬೇಕೋ ಅಥವಾ ಬೇಡವೋ ಅನ್ನೋದನ್ನು ಯುಎಇ ಸರ್ಕಾರ ನಿರ್ಧರಿಸಲಿದೆ. ಅವಕಾಶ ಸಿಕ್ಕರೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಈ ನಿರ್ಧಾರವನ್ನು ನಾವು ಯುಎಇ ಸರ್ಕಾರಕ್ಕೆ ಬಿಡುತ್ತೇವೆ. ಅಲ್ಲದೆ ಯುಎಇ ಕ್ರಿಕೆಟ್ ಬೋರ್ಡ್​ಗೂ ಪತ್ರ ಬರೆಯುತ್ತೇವೆ ಅಂತ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ಯುಎಇನಲ್ಲಿ ಒಟ್ಟು ಮೂರು ಕ್ರಿಕೆಟ್ ಕ್ರೀಡಾಂಗಣಗಳಿವೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂ, ಶೇಖ್ ಝಾಯೆದ್ ಸ್ಟೇಡಿಯಂ, ಅಬುಧಾಬಿ ಮತ್ತು ಶಾರ್ಝಾ ಸ್ಟೇಡಿಯಂ.

ಯುಎಇನಲ್ಲಿ ಕಳೆದ ಹಲವು ದಿನಗಳಿಂದ ಪ್ರತಿದಿನ 200ರಿಂದ 300 ಕೊರೋನಾ ಪ್ರಕರಣಗಳು ದೃಢಪಡುತ್ತಿವೆ. ಇದುವರೆಗೆ ಒಟ್ಟು 57,000 ಪ್ರಕರಣಗಳು ದೃಢಪಟ್ಟಿದ್ದು, 342 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆ 50,000 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಸದ್ಯ ಯುಎಇನಲ್ಲಿ ಸುಮಾರು 6 ಸಾವಿರ ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ.

-masthmagaa.com

Contact Us for Advertisement

Leave a Reply