ಸಿಂಧಿಯಾಗೆ ಬಿಜೆಪಿ ಗಾಳ.. ‘ಆಪರೇಷನ್​ ಕಮಲ್’​ನಾಥ್ ಸರ್ಕಾರ..!

masthmagaa.com:

ಮಧ್ಯಪ್ರದೇಶದಲ್ಲಿ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬೀಳುವ ಲಕ್ಷಣಗಳು ದಟ್ಟವಾಗಿ ಕಾಣುತ್ತಿದೆ. ಒಂದುಕಡೆ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಣದ ಸಚಿವರು ಸೇರಿದಂತೆ 17 ಮಂದಿ ಶಾಸಕರು ಬೆಂಗಳೂರಿಗೆ ಹಾರಿದ್ದರೆ, ಮತ್ತೊಂದುಕಡೆ ಸ್ವತಃ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಚಾಣಕ್ಯ ಅಮಿತ್ ಶಾ ಜೊತೆಗೆ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಮೂಲಗಳ ಪ್ರಕಾರ ಶಾಕಿಂಗ್ ಬೆಳವಣಿಗೆಯಲ್ಲಿ ಇಂದು  ಸಿಂಧಿಯಾ ಬಿಜೆಪಿ ಸೇರಲಿದ್ದು, ಅವರನ್ನು ರಾಜ್ಯಸಭೆಗೆ ಕಳುಹಿಸುವ ಆಫರ್ ನೀಡಲಾಗಿದೆ ಎನ್ನಲಾಗ್ತಿದೆ.

ಬೆಂಗಳೂರಿನಲ್ಲಿರುವ ಶಾಸಕರು ಸೇರಿದಂತೆ ಒಟ್ಟು 20 ಮಂದಿ ಶಾಸಕರು ಫ್ಯಾಕ್ಸ್​ ಮೂಲಕ ಸ್ಪೀಕರ್​ಗೆ ರಾಜೀನಾಮೆ ಪತ್ರವನ್ನು ರವಾನಿಸುವ ಸಾಧ್ಯತೆ ಇದೆ. ಹೀಗೇನಾದ್ರೂ ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನವಾದಂತೆ 15 ತಿಂಗಳ ಕಮಲ್​ನಾಥ್ ಸರ್ಕಾರ ಕೂಡ ಅಡ್ಡ ಬೀಳಲಿದೆ. ಅತ್ತ ತನ್ನ  ಶಾಸಕರನ್ನು ಭೋಪಾಲ್​ಗೆ ಕರೆದಿರುವ ಬಿಜೆಪಿ ಸಂಜೆ 6 ಗಂಟೆಗೆ ಮಹತ್ವದ ಸಭೆ ನಡೆಸಲಿದೆ.

ಇನ್ನು ಕಾಂಗ್ರೆಸ್ ಶಾಸಕರ ಈ ರೆಸಾರ್ಟ್​ ರಾಜಕೀಯ ಶುರುವಾದಾಗಿನಿಂದಲೂ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸಂಪರ್ಕಿಸಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರೇ ಹೇಳಿಕೆ ಕೊಟ್ಟಿದ್ದಾರೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸದ್ಯ ಕಮಲ್​ನಾಥ್ ಸರ್ಕಾರ ಮ್ಯಾಜಿಕ್​ ನಂಬರ್​ಗಿಂತ 5 ಸ್ಥಾನ ಹೆಚ್ಚಿದ್ದು 121 ಸದಸ್ಯ ಬಲ ಹೊಂದಿದೆ. ಅದರಲ್ಲಿ ಕಾಂಗ್ರೆಸ್​ನ 114, ಬಿಎಸ್​ಪಿಯ 2, ಎಸ್​ಪಿಯ ಓರ್ವ ಹಾಗೂ ನಾಲ್ವರು ಪಕ್ಷೇತರ ಶಾಸಕರು ಸೇರಿದ್ದಾರೆ. ಬಿಜೆಪಿ 107 ಸ್ಥಾನಗಳನ್ನು ಹೊಂದಿದ್ದು, ಎರಡು ಸ್ಥಾನಗಳು ಖಾಲಿ ಉಳಿದಿವೆ.

-masthmagaa.com

Contact Us for Advertisement

Leave a Reply