masthmagaa.com:

ಕೊರೋನಾ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ಹೇರಿದ್ದ ದೇಶವ್ಯಾಪಿ ಲಾಕ್​ಡೌನ್​ ಅನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ. ಸೋಂಕಿತರು ಹಾಗೂ ಮೃತಪಡುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು ಮಾರ್ಚ್​ 24ರಂದು ದೇಶವ್ಯಾಪಿ 21 ದಿನಗಳ ಲಾಕ್​ಡೌನ್​ ಹೇರಲಾಗಿತ್ತು. ಅದು ಏಪ್ರಿಲ್ 14ರಂದು ಅಂತ್ಯವಾಗಬೇಕಿತ್ತು.

ಇಂದು ಬೆಳಗ್ಗೆ ಎಲ್ಲಾ ರಾಜ್ಯಗಳ ಸಿಎಂ ಜೊತೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದರು. ಈ ವೇಳೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಒಡಿಶಾ ಸಿಎಂ ನವೀನ್ ಪಟ್ನಾಯಕ್​ ಸೇರಿದಂತೆ ಹಲವು ರಾಜ್ಯದ ಮುಖ್ಯಮಂತ್ರಿಗಳು ಲಾಕ್​​ಡೌನ್ ವಿಸ್ತರಿಸುವಂತೆ ಪ್ರಧಾನಿಗೆ ಕೇಳಿಕೊಂಡಿದ್ದರು.

ಇದೀಗ ಈ ಬಗ್ಗೆ ಟ್ವೀಟ್ ಮಾಡಿರೋ ಅರವಿಂದ ಕೇಜ್ರಿವಾಲ್ ಏಪ್ರಿಲ್ 30ವರೆಗೆ ಲಾಕ್​ಡೌನ್​ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಅಂತ ಹೇಳಿದ್ದಾರೆ. ಇದಕ್ಕೂ ಮೊದಲು ಒಡಿಶಾ, ಪಂಜಾಬ್, ರಾಜಸ್ಥಾನಗಳು ಏಪ್ರಿಲ್​ 30ವರೆಗೆ ಲಾಕ್​ಡೌನ್ ವಿಸ್ತರಿಸಿದ್ದವು. ಸದ್ಯ ದೇಶದಲ್ಲಿ 7,447 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 239 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ 643 ಜನ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

-masthmagaa.com

Contact Us for Advertisement

Leave a Reply