masthmagaa.com:

ಕೊರೋನಾ ವೈರಸ್​ಗೆ ಆಕ್ಸ್​ಫರ್ಡ್ ಯುನಿವರ್ಸಿಟಿ ಮತ್ತು ಅಸ್ಟ್ರಾಝೆನೆಕಾ ಕಂಪನಿ ಸೇರಿಕೊಂಡು ಅಭಿವೃದ್ಧಿಪಡಿಸುತ್ತಿರುವ ಲಸಿಕೆ ನವೆಂಬರ್ ಮೊದಲ ವಾರದಲ್ಲೇ ಸಿಗಲಿದೆ ಅಂತ ಬ್ರಿಟನ್​ನ ‘ದಿ ಸನ್’ ಪತ್ರಿಕೆ ವರದಿ ಮಾಡಿದೆ. ‘ನವೆಂಬರ್ 2ರಿಂದ ಆರಂಭವಾಗುವ ವಾರದಲ್ಲಿ ಲಸಿಕೆಯ ಮೊದಲ ಬ್ಯಾಚ್​ನ್ನು ಸ್ವೀಕರಿಸಲು ಸಿದ್ಧತೆ ಮಾಡಿಕೊಳ್ಳಿ’ ಅಂತ ಲಂಡನ್​ನ ಪ್ರತಿಷ್ಠಿತ ಆಸ್ಪತ್ರೆಯೊಂದರ ಸಿಬ್ಬಂದಿಗೆ ಸೂಚಿಸಲಾಗಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ನವೆಂಬರ್ 2ರಿಂದ ಆರಂಭವಾಗಲಿರುವ ವಾರ ಅಂದ್ರೆ ಮುಂದಿನ ವಾರ.

ಬ್ರಿಟನ್​ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿರುವ (National Health Service-NHS) ಸಿಬ್ಬಂದಿಗೆ ಆಕ್ಸ್​ಫರ್ಡ್​ ಲಸಿಕೆಯನ್ನು ಮೊದಲು ಹಾಕಲಾಗುತ್ತದೆ. ಎನ್​ಹೆಚ್​ಎಸ್​ನ ಸಿಬ್ಬಂದಿಯೊಬ್ಬರಿಗೆ ಕಳುಹಿಸದ ಇ-ಮೇಲ್​ನಲ್ಲಿ ಇದು ಗೊತ್ತಾಗಿದೆ ಅಂತ ವರದಿಯಾಗಿದೆ. ಡಿಸೆಂಬರ್ 31ರೊಳಗೆ ಅಂದ್ರೆ ‘ಬ್ರೆಕ್ಸಿಟ್ ಪರಿವರ್ತನೆಯ ಅವಧಿ’ ಮುಗಿಯುವ ಮೊದಲೇ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಗುರಿಯನ್ನು ಬ್ರಿಟನ್ ಹೊಂದಿದೆ. ಈ ಮೂಲಕ ಆಕ್ಸ್​ಫರ್ಡ್​ ಲಸಿಕೆಗೆ ಬೇಕಾದ ಯುರೋಪಿಯನ್​ ಒಕ್ಕೂಟದ ಅನುಮತಿ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳೋದು ಬ್ರಿಟನ್ ಪ್ಲಾನ್​. ಇಲ್ಲಿ ಬ್ರೆಕ್ಸಿಟ್ ಪರಿವರ್ತನೆಯ ಅವಧಿ (Transition Period) ಅಂದ್ರೆ, ಜನವರಿ 31, 2020ರಂದು ಯುರೋಪಿಯನ್​ ಯೂನಿಯನ್​ನಿಂದ ಬ್ರಿಟನ್ ಹೊರಬಂತು. ಆದ್ರೆ ಅದಕ್ಕೆ 11 ತಿಂಗಳ ಪರಿವರ್ತನೆಯ ಅವಧಿ ನೀಡಲಾಗಿದೆ. ಅಂದ್ರೆ ಡಿಸೆಂಬರ್ 31ರವರೆಗೆ. ಅಲ್ಲಿಯವರೆಗೂ ಬ್ರಿಟನ್​ ಯುರೋಪಿಯನ್ ಯೂನಿಯನ್ ನಿಯಮಗಳಿಗೆ ಬದ್ಧವಾಗಿರಬೇಕಾಗುತ್ತದೆ.

ಮುಂದಿನ ವಾರವೇ ಆಕ್ಸ್​ಫರ್ಡ್ ಲಸಿಕೆ ಸಿಗುತ್ತಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬ್ರಿಟನ್​ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್, ‘ಮುಂದಿನ ವರ್ಷದ ಮೊದಲಾರ್ಧದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ಹಾಕುವ ನಿರೀಕ್ಷೆ ಇದೆ. ಆದ್ರೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಈ ವರ್ಷದಲ್ಲೇ ಆರಂಭ ಮಾಡ್ತೀವಿ ಅನ್ನೋದನ್ನ ತಳ್ಳಿ ಹಾಕಲ್ಲ. ಒಂದ್ವೇಳೆ ಲಸಿಕೆ ಲಭ್ಯವಾದ್ರೆ ನಾವು ರೆಡಿಯಾಗಿರಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ನಾವು ಈ ವರ್ಷ ಮಾಡುತ್ತಿದ್ದೇವೆ’ ಅಂತ ಹೇಳಿದ್ದಾರೆ.

ಅಂದ್ಹಾಗೆ AZD1222 ಅಥವಾ ChAdOx1 nCoV-19 ಅಂತ ಕರೆಯಲ್ಪಡುವ ಈ ಲಸಿಕೆಯ ಕ್ಯಾಂಡಿಡೇಟ್​ನ್ನು ಬ್ರಿಟನ್​ನ್ ಆಕ್ಸ್​ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿದೆ. ಇದರ ಮಾನವ ಪ್ರಯೋಗ ಮತ್ತು ಉತ್ಪಾದನೆಯ ಲೈಸೆನ್ಸ್​ನ್ನ 2020ರ ಏಪ್ರಿಲ್​ನಲ್ಲಿ ಅಸ್ಟ್ರಾಝೆನೆಕಾ ಕಂಪನಿಗೆ ನೀಡಲಾಯ್ತು. ಈ ಲಸಿಕೆ ಮೇಲೆ ಬಹುತೇಕ ಎಲ್ಲಾ ದೇಶಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಆಕ್ಸ್​ಫರ್ಡ್ ಲಸಿಕೆ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದೆ. ಆಕ್ಸ್​ಫರ್ಡ್ ಲಸಿಕೆ ಒಂದು ವರ್ಷದವರೆಗೆ ಕೊರೋನಾದಿಂದ ರಕ್ಷಣೆ ನೀಡಲಿದೆ ಅಂತ ಅಸ್ಟ್ರಾಝೆನೆಕಾ ಕಂಪನಿಯ ಸಿಇಒ ಈ ಹಿಂದೆ ಹೇಳಿದ್ದರು.

-masthmagaa.com

Contact Us for Advertisement

Leave a Reply