masthmagaa.com:

ದೇಶದಲ್ಲಿ ಲಾಕ್​ಡೌನ್ ಅಂತ್ಯಗೊಳಿಸಿ ಭಾರತವನ್ನ ಹಂತ ಹಂತವಾಗಿ ಅನ್​ಲಾಕ್ ಮಾಡಲು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈಗಿರುವ ನಿಯಮಗಳು ಜೂನ್ 7ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಆದ್ರೆ ಜೂನ್​ 8ರಿಂದ ಹಂತ ಹಂತವಾಗಿ ಎಲ್ಲವೂ ಓಪನ್ ಆಗಲಿದೆ. ಈ ಅನ್​ಲಾಕ್​ ಪ್ರಕ್ರಿಯೆಯನ್ನ ಹಲವು ಹಂತಗಳಲ್ಲಿ (ಫೇಸ್​​) ವಿಂಗಡಿಸಲಾಗಿದೆ.

ಮೊದಲ ಹಂತ ಜೂನ್​ 8ರಿಂದ ಆರಂಭ:

ಮೊದಲ ಹಂತದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್​ ಮತ್ತು ಶಾಪಿಂಗ್ ಮಾಲ್​ಗಳು ಓಪನ್ ಆಗಲಿವೆ. ಆದ್ರೆ ಆರೋಗ್ಯ ಇಲಾಖೆ ಜಾರಿ ಮಾಡುವ ನಿಯಮಗಳನ್ನ ಅನುಸರಿಸಿ ಕಾರ್ಯನಿರ್ವಹಿಸಬೇಕು. ಕಾಯಿಲೆ ಹರಡದಂತೆ ಒಂದಷ್ಟು ನಿಯಮಗಳನ್ನ ಪಾಲಿಸಬೇಕಾಗುತ್ತದೆ.

ಎರಡನೇ ಹಂತ ಜುಲೈನಿಂದ ಆರಂಭ:

ಇನ್ನು ಎರಡನೇ ಹಂತವು ಜುಲೈನಲ್ಲಿ ಆರಂಭವಾಗಲಿದೆ. ಇದರಲ್ಲಿ ಶಾಲಾ ಕಾಲೇಜು, ಶೈಕ್ಷಣಿಕ ಕೇಂದ್ರಗಳು ಮತ್ತು ತರಬೇತಿ ಕೇಂದ್ರಗಳು ಓಪನ್ ಆಗಲಿವೆ. ಆದ್ರೆ ಈ ವಲಯಗಳನ್ನ ಓಪನ್ ಮಾಡುವ ಮೊದಲು ಸಂಬಂಧಪಟ್ಟ ಸಂಸ್ಥೆ ಮತ್ತು ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಮೂರನೇ ಹಂತದ ದಿನಾಂಕ ನಿಗದಿಯಾಗಿಲ್ಲ:

ಇನ್ನು ಮೂರನೇ ಹಂತ.. ಇದರಲ್ಲಿ ಕೆಲವೇ ಕೆಲವು ಆಯ್ದ ವಲಯಗಳನ್ನ ಹೊರತುಪಡಿಸಿ ಉಳಿದಂತೆ ಪೂರ್ತಿ ದೇಶ ಓಪನ್ ಮಾಡಲಾಗುತ್ತದೆ. ಈ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ, ಮೆಟ್ರೋ ರೈಲು, ಸಿನಿಮಾ ಹಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್​ ಬಾರ್ ಅಂಡ್ ರೆಸ್ಟೊರೆಂಟ್, ಆಡಿಟೋರಿಯಂ, ಹಾಲ್​ಗಳು ಓಪನ್ ಆಗಲಿವೆ. ಜೊತೆಗೆ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಜನ ಗುಂಪು ಸೇರಲು ಅವಕಾಶ ನೀಡಲಾಗುತ್ತದೆ. ಆದ್ರೆ ಪೂರ್ತಿ ಓಪನ್ ಅಪ್ ಆಗುವ ಈ ಮೂರನೇ ಹಂತ ಯಾವಾಗ ಶುರುವಾಗುತ್ತೆ ಅಂತ ಕೇಂದ್ರ ಸರ್ಕಾರ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಜೂನ್-ಜುಲೈನಲ್ಲಿ ಆಗುವ ಮೊದಲೆರಡು ಹಂತಗಳ ಪರಿಣಾಮ ನೋಡಿಕೊಂಡು ಮೂರನೇ ಹಂತದ ದಿನಾಂಕ ನಿಗದಿಪಡಿಸಲಾಗುತ್ತದೆ.

ಕಂಟೈನ್​ಮೆಂಟ್​ ಜೋನ್​ಗಳಲ್ಲಿ ಜೂನ್​ 30ರವರೆಗೆ ಲಾಕ್​ಡೌನ್:

ಇನ್ನು ಕಂಟೈನ್​ಮೆಂಟ್​ ಜೋನ್​ಗಳಲ್ಲಿ ಜೂನ್​ 30ರವರೆಗೆ ಕಂಪ್ಲೀಟ್​ ಲಾಕ್​ಡೌನ್ ಇರುತ್ತದೆ. ಯಾರೂ ಕೂಡ ಕಂಟೈನ್​ಮೆಂಟ್​ ಜೋನ್ ಒಳಗೆ ಹೋಗುವಂತಿಲ್ಲ. ಹೊರಗೆ ಬರುವಂತಿಲ್ಲ. ಆದ್ರೆ ಅಗತ್ಯ ಸೇವೆಗಳು ಲಭ್ಯವಿರುತ್ತದೆ.

ನೈಟ್​ ಕರ್ಫ್ಯೂ ಸಮಯ ಬದಲಾವಣೆ: 

ಇನ್ನು ನೈಟ್​ ಕರ್ಫ್ಯೂ ಅವಧಿಯನ್ನ ಬದಲಿಸಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7 ಗಂಟೆ ಬದಲಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್​ ಕರ್ಫ್ಯೂ ಇರಲಿದೆ.

ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಸಂಚಾರ: 

ಅಂತರ್​ ರಾಜ್ಯ ಹಾಗೂ ಅಂತರ್​ ಜಿಲ್ಲಾ ಪ್ರಯಾಣಕ್ಕೆ ಯಾವುದೇ ಅನುಮತಿ ಬೇಕಿಲ್ಲ. ಯಾವುದೇ ನಿರ್ಬಂಧ ಇರುವುದಿಲ್ಲ. ಆದ್ರೆ ರಾಜ್ಯ ಸರ್ಕಾರಗಳು ಅಗತ್ಯಬಿದ್ದರೆ ನಿರ್ದಿಷ್ಟ ರಾಜ್ಯ ಅಥವಾ ಜಿಲ್ಲೆಗಳ ನಡುವೆ ಸಂಚಾರ ನಿರ್ಬಂಧಿಸಬಹುದು. ಶ್ರಮಿಕ್ ವಿಶೇಷ ರೈಲು, ದೇಶೀ ವಿಮಾನಯಾನ, ವಿದೇಶದಲ್ಲಿ ಸಿಲುಕಿರುವವರನ್ನು ಕರೆತರುವ ಪ್ರಕ್ರಿಯೆ ಮುಂದುವರಿಯಲಿದೆ.

ಈ ವರ್ಗದ ಜನ ಮನೆಯಲ್ಲೇ ಇರಿ:

ಇನ್ನು 65 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳು, ರೋಗಿಗಳು, ಗರ್ಭಿಣಿಯರು ಮನೆಯಲ್ಲೇ ಇರುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಮದುವೆ ಸಮಾರಂಭ ಮತ್ತು ಅಂತ್ಯಸಂಸ್ಕಾರ: 

ಮದುವೆ ಸಮಾರಂಭದಲ್ಲಿ ಗರಿಷ್ಠ 50 ಮತ್ತು ಅಂತ್ಯ ಸಂಸ್ಕಾರದಲ್ಲಿ ಗರಿಷ್ಠ 20 ಜನ ಭಾಗವಹಿಸಬಹುದು.

ಆರೋಗ್ಯ ಸೇತು ಅಪ್ಲಿಕೇಶನ್:

ಸ್ಮಾರ್ಟ್​ ಪೋನ್ ಇರುವ ಪ್ರತಿಯೊಬ್ಬ ಉದ್ಯೋಗಿಯು ಆರೋಗ್ಯ ಸೇತು ಅಪ್ಲಿಕೇಶನ್ ಬಳಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಕಂಪನಿಗಳದ್ದು.

ಮಾರ್ಗಸೂಚಿಗಳನ್ನು ದುರ್ಬಲಗೊಳಿಸುವಂತಿಲ್ಲ:

ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಮಾರ್ಗಸೂಚಿಗಳನ್ನ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಮತ್ತಷ್ಟು ಸ್ಟ್ರಿಕ್ಟ್​ ಮಾಡಬಹುದು. ಆದ್ರೆ ದುರ್ಬಲಗೊಳಿಸುವಂತಿಲ್ಲ.

-masthmagaa.com

Contact Us for Advertisement

Leave a Reply