masthmagaa.com:

ಅನಾರೋಗ್ಯ ಹಿನ್ನೆಲೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸದ್ಯ ‘ತುಂಬಾ ಅಪಾಯ’ದಲ್ಲಿದ್ದಾರೆ ಅಂತ ಈ ವಿಷಯದ ಬಗ್ಗೆ ಮಾಹಿತಿ ಇರುವ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಅಂತ ಸಿಎನ್​ಎನ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದೆ.

ಏಪ್ರಿಲ್ 15ರಂದು ಕಿಮ್ ಜಾಂಗ್ ಉನ್ ಅವರ ಅಜ್ಜ, ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಎಲ್ ಸಂಗ್ ಅವರ ಜಯಂತಿ ಇತ್ತು. ಈ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಗೈರಾಗಿದ್ದರು. ಅಲ್ಲದೆ ಏಪ್ರಿಲ್​ 11ರ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಕಳೆದ ವಾರ ನಡೆದ ಕ್ಷಿಪಣಿ ಪರೀಕ್ಷೆಗೂ ಗೈರು ಹಾಜರಾಗಿದ್ದರು. ಇದೇ ಈಗ ಅವರ ಅನಾರೋಗ್ಯದ ಬಗ್ಗೆ ಅನುಮಾನ ಮೂಡಲು ಕಾರಣವಾಗಿದೆ.

ದಕ್ಷಿಣ ಕೊರಿಯಾದ ಡೈಲಿ ಎನ್​ಕೆ ಸುದ್ದಿ ಸಂಸ್ಥೆ ಪ್ರಕಾರ, ಏಪ್ರಿಲ್ 12ರಂದು ಕಿಮ್ ಜಾಂಗ್ ಉನ್​ಗೆ ಹ್ಯಾಂಗ್ಸಂಗ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು.  36 ವರ್ಷದ ಕಿಮ್​ ಸದ್ಯ ಮೌಂಟ್ ಕುಮ್ಮಾಂಗ್ ರೆಸಾರ್ಟ್​ನಲ್ಲಿರೋ ವಿಲ್ಲಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತಿಯಾದ ಧೂಮಪಾನ, ಬೊಜ್ಜು ಹಾಗೂ ಅಧಿಕ ಕೆಲಸದ ಒತ್ತಡದಿಂದಾಗಿ ಅವರ ಆರೋಗ್ಯವು ಇತ್ತೀಚಿನ ತಿಂಗಳಲ್ಲಿ ಹದಗೆಡುತ್ತಾ ಹೋಗಿತ್ತು. ಹೀಗಾಗಿಯೇ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು ಅಂತ ಡೈಲಿ ಎನ್‌ಕೆ ವರದಿ ಮಾಡಿದೆ.

ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ವಿಫಲವಾದ ಹಿನ್ನೆಲೆ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದು ಇದೇ ಮೊದಲಲ್ಲ. 2014ರಲ್ಲಿ ಕಿಮ್ ಜಾಂಗ್ ಉನ್ ‘ಅನಾನುಕೂಲ ದೈಹಿಕ ಸ್ಥಿತಿಯಿಂದ’ ಬಳಲುತ್ತಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿದ್ದವು.

ಕೆಲವರ ಪ್ರಕಾರ ಕೊರೋನಾ ವೈರಸ್ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಕಿಮ್ ಜಾಂಗ್ ಉನ್ ಈ ತಿಂಗಳು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ತಿಲ್ಲವಂತೆ. ಆದ್ರೆ ಉತ್ತರ ಕೊರಿಯಾದಲ್ಲಿ ಇದುವರೆಗೆ ಒಂದೇ ಒಂದು ಕೊರೋನಾ ಪ್ರಕರಣ ದೃಢಪಟ್ಟಿಲ್ಲ ಅಂತ ಅಲ್ಲಿನ ಸರ್ಕಾರ ಹೇಳಿದೆ. ಚೀನಾ ಪಕ್ಕದಲ್ಲೇ ಇರೋ ಈ ದೇಶಕ್ಕೆ ಕಾಯಿಲೆ ಹರಡಿರದ ಬಗ್ಗೆಯೂ ಅನುಮಾನಗಳಿವೆ.

ಉತ್ತರ ಕೊರಿಯಾದಲ್ಲಿರೋ ಮಾಧ್ಯಮ ಸಂಸ್ಥೆಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿವೆ. ಸರ್ಕಾರ ಹೇಳಿದ ಸುದ್ದಿಯನ್ನ ಮಾತ್ರ ಪ್ರಸಾರ ಮಾಡುತ್ತವೆ. ಹೀಗಾಗಿ ತನ್ನ ನಾಯಕನ ಆರೋಗ್ಯ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೂಡ ಅತ್ಯಂತ ರಹಸ್ಯವಾಗಿಟ್ಟಿದೆ ಉತ್ತರ ಕೊರಿಯಾ.

-masthmagaa.com

Contact Us for Advertisement

Leave a Reply