masthmagaa.com:

ಇವತ್ತು ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್​ನ 136ನೇ ಸಂಸ್ಥಪನಾ ದಿನ. ಇಂತಹ ಸಂದರ್ಭದಲ್ಲೇ ಕಾಂಗ್ರೆಸ್​ನ ಮುಂದಿನ ಅಧ್ಯಕ್ಷ ಅಂತ ಹೇಳಲಾಗ್ತಿರುವ ರಾಹುಲ್ ಗಾಂಧಿ ವಿದೇಶದಲ್ಲಿರೋದು ಚರ್ಚೆಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಭಾನುವಾರ ಬೆಳಗ್ಗೆ ಇಟಲಿಯ ಮಿಲನ್​ ನಗರಕ್ಕೆ ಹೋಗಿದ್ದಾರೆ ಎನ್ನಲಾಗ್ತಿದೆ. ಅಲ್ಲಿ ಅವರ ಅಜ್ಜಿ ಇದ್ದಾರೆ. ಈ ಹಿಂದೆಯೂ ರಾಹುಲ್ ಗಾಂಧಿ ಅಲ್ಲಿಗೆ ಹೋಗಿದ್ದರು. ಆದ್ರೆ ಪಕ್ಷದ ಸಂಸ್ಥಾಪನಾ ದಿನಕ್ಕೂ ಒಂದು ದಿನ ಮುಂಚೆ ಹೋಗಿರೋದು ಹೆಚ್ಚು ಸುದ್ದಿಯಾಗ್ತಿದೆ. ರಾಹುಲ್ ಗಾಂಧಿಗೆ ರಾಜಕೀಯದ ಬಗ್ಗೆ ಸೀರಿಯಸ್​ನೆಸ್​ ಇಲ್ಲ, ಹೊಸ ವರ್ಷಾಚರಣೆಗಾಗಿ ಇಟಲಿಗೆ ಹೋಗಿದ್ದಾರೆ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಇದರ ನಡುವೆಯೇ ಪಕ್ಷದ ಸಂಸ್ಥಾಪನಾ ದಿನಕ್ಕೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ದೇಶದ ಹಿತಕ್ಕಾಗಿ ದನಿ ಎತ್ತಲು ಆರಂಭದಿಂದಲೂ ಕಾಂಗ್ರೆಸ್​ ಬದ್ಧವಾಗಿದೆ. ಪಕ್ಷದ ಸಂಸ್ಥಾಪನಾ ದಿನವಾದ ಇಂದು ನಾವು ಸತ್ಯ ಮತ್ತು ಸಮಾನತೆಯ ಪ್ರತಿಜ್ಞೆಯನ್ನ ಪುನರುಚ್ಚರಿಸುತ್ತೇವೆ. ಜೈ ಹಿಂದ್​’ ಅಂತ ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಇಟಲಿಯಲ್ಲಿ ಇರೋದ್ರಿಂದ, ಸೋನಿಯಾ ಗಾಂಧಿ ಆರೋಗ್ಯ ಸರಿ ಇಲ್ಲದಿರೋದ್ರಿಂದ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಇಬ್ಬರೂ ಗೈರಾಗಿದ್ದರು. ಹಿರಿಯ ನಾಯಕ ಎ.ಕೆ. ಆಂಟನಿ ಪಕ್ಷದ ಧ್ವಜಾರೋಹಣ ನೆರವೇರಿಸಿದ್ರು.

ಮತ್ತೊಂದುಕಡೆ ಇಟಲಿಯಲ್ಲಿ ನಿನ್ನೆಯಷ್ಟೇ ಕೊರೋನಾ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಿದೆ. ಕೆಲವರು ರಾಹುಲ್ ಗಾಂಧಿಯ ಇಟಲಿ ಪ್ರವಾಸಕ್ಕೂ, ಅಲ್ಲಿ ಆರಂಭವಾಗಿರುವ ಲಸಿಕೆ ಅಭಿಯಾನಕ್ಕೂ ಲಿಂಕ್ ಮಾಡ್ತಿದ್ದಾರೆ. ಭಾರತದಲ್ಲಿ ಲಸಿಕೆ ಅಭಿಯಾನ ಇನ್ನೂ ಆರಂಭವಾಗದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಇತ್ತೀಚೆಗೆ ರಾಹುಲ್ ಗಾಂಧಿ ಕಿಡಿಕಾರಿದ್ದರು. ಚೀನಾ, ಅಮೆರಿಕ, ಬ್ರಿಟನ್​, ರಷ್ಯಾದಲ್ಲಿ ಲಸಿಕೆ ಹಾಕಲು ಶುರು ಮಾಡಿದ್ದಾರೆ. ಇಂಡಿಯಾ ಕಾ ನಂಬರ್ ಕಬ್ ಆಯೇಗಾ (ಭಾರತದ ಸರದಿ ಯಾವಾಗ ಬರುತ್ತೆ) ಮೋದಿ ಜೀ? ಅಂತ ಕೇಳಿದ್ದರು.

-masthmagaa.com

Contact Us for Advertisement

Leave a Reply