masthmagaa.com:

ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಅಸ್ಟ್ರಾಝೆನೆಕಾ ಕಂಪನಿಯ ಲಸಿಕೆ ಪಡೆದ ಸ್ವಯಂಸೇವಕನಲ್ಲಿ ‘ವಿವರಿಸಲಾಗದ ಅನಾರೋಗ್ಯ’ ಕಾಣಿಸಿಕೊಂಡಿದೆ. ಹೀಗಾಗಿ ‘ಸುರಕ್ಷತೆಯ ದೃಷ್ಟಿಯಿಂದ’ ಲಸಿಕೆಯ ಕೊನೆಯ ಹಂತದ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂತ ಅಸ್ಟ್ರಾಝೆನೆಕಾ ಘೋಷಿಸಿದೆ. ಕೊರೋನಾ ವೈರಸ್​ಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಆಕ್ಸ್​​ಫರ್ಡ್ ವಿವಿ ಮತ್ತು ಅಸ್ಟ್ರಾಝೆನೆಕಾ ಮುಂಚೂಣಿಯಲ್ಲಿವೆ ಅಂತಾನೇ ಹೇಳಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಪ್ರಶಂಸೆ ವ್ಯಕ್ತಪಡಿಸಿತ್ತು. ಆದ್ರೀಗ ಲಸಿಕೆ ತೆಗೆದುಕೊಂಡ ಓರ್ವ ಸ್ವಯಂ ಸೇವಕನ ಆರೋಗ್ಯದಲ್ಲಿ ಏರುಪೇರಾಗಿರೋದು ಲಸಿಕೆ ಬಗ್ಗೆಗಿನ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

ಭಾರತದಲ್ಲೂ ಈ ಲಸಿಕೆಯ ಮೂರನೇ ಮತ್ತು ಕೊನೆಯ ಹಂತದ ಮಾನವ ಪ್ರಯೋಗ ನಡೆಯುತ್ತಿದೆ. ಪುಣೆಯ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಇದರ ಪ್ರಯೋಗ ನಡೆಸುತ್ತಿದೆ. ಈ ಬಗ್ಗೆ ಮಾತನಾಡಿರುವ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅಡರ್ ಪೂನಾವಲ್ಲಾ, ‘ಬ್ರಿಟನ್​ನಲ್ಲಿ ನಡೆಯುತ್ತಿರುವ ಮಾನವ ಪ್ರಯೋಗದ ಬಗ್ಗೆ ನಾವು ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಆದ್ರೆ ಹೆಚ್ಚಿನ ಪರಿಶೀಲನೆಗಾಗಿ ಮಾನವ ಪ್ರಯೋಗವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅತಿ ಶೀಘ್ರದಲ್ಲೇ ಅದನ್ನು ಪುನಾರಂಭಿಸುವ ಭರವಸೆ ಇದೆ. ಭಾರತದಲ್ಲಿ ಲಸಿಕೆಯ ಮಾನವ ಪ್ರಯೋಗ ಮುಂದುವರಿದಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ’ ಅಂತ ಹೇಳಿದ್ದಾರೆ.

ಸಾಮಾನ್ಯವಾಗಿ ಲಸಿಕೆ ಪಡೆದ ಸ್ವಯಂಸೇವಕರಲ್ಲಿ ‘ವಿವರಿಸಲಾಗದ ಅನಾರೋಗ್ಯ’ ಕಾಣಿಸಿಕೊಂಡಾಗ ಸುರಕ್ಷತಾ ದತ್ತಾಂಶವನ್ನು ಸ್ವತಂತ್ರ ಸಮಿತಿಯಿಂದ ಪರಿಶೀಲಿಸಲಾಗುತ್ತದೆ. ನ್ಯೂಯಾರ್ಕ್​ ಟೈಮ್ಸ್ ವರದಿ ಪ್ರಕಾರ, ಬ್ರಿಟನ್​ನಲ್ಲಿ ಲಸಿಕೆಯ ಪ್ರಯೋಗಕ್ಕೆ ಒಳಗಾದ ವ್ಯಕ್ತಿಗೆ ಟ್ರಾನ್ಸ್‌ವರ್ಸ್ ಮೈಲೈಟಿಸ್ ಸಮಸ್ಯೆ ಕಂಡು ಬಂದಿದೆ. ಇದು ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಬೆನ್ನುಹುರಿಯ ಮೇಲೆ ಪರಿಣಾಮ ಬೀರುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply